ಸಾರಾಂಶ
ನ್ಯೂಯಾರ್ಕನ ಪ್ರಾಸಿಕ್ಯೂಟರ್‌ಗಳ ಆರೋಪಗಳ ಸತ್ಯಾಸತ್ಯತೆ ಅರಿಯಲು ಗೌತಮ್ ಅದಾನಿಯನ್ನು ಕೂಡಲೇ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು.
ಬಳ್ಳಾರಿ: ಉದ್ಯಮಿ ಗೌತಮ್ ಅದಾನಿ ಮೇಲಿನ ಭ್ರಷ್ಟಾಚಾರ ಆರೋಪವನ್ನು ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಯುವಜನ ಫೆಡರೇಷನ್ (ಎಐವೈಎಫ್) ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗೌತಮ್ ಅದಾನಿ ತಮ್ಮ ಸಂಸ್ಥೆಯ ಪರವಾಗಿ ಉದ್ದಿಮೆಗಳ ಒಪ್ಪಂದ ಮಾಡಿಕೊಳ್ಳಲು ಭಾರತದ ಸರ್ಕಾರಿ ಅಧಿಕಾರಿಗಳು ಸೇರಿದಂತೆ ಅನೇಕರಿಗೆ ಸಾವಿರಾರು ಕೋಟಿ ರೂರುಪಾಯಿ ಲಂಚ ನೀಡಿದ್ದಾರೆ ಎಂದು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿಯ ವಿರುದ್ಧ ಅಮೆರಿಕದ ಪ್ರಾಸಿಕ್ಯೂಟರ್‌ಗಳು ಮಾಡಿರುವ ದೋಷಾರೋಪಗಳ ಕುರಿತು ಸಮಗ್ರ ತನಿಖೆ ನಡೆಸಲು ಕೇಂದ್ರ ಸರ್ಕಾರ ಜಂಟಿ ಸದನ ಸಮಿತಿ ರಚಿಸಬೇಕು. ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಗೌತಮ್ ಅದಾನಿ ತಮ್ಮ ಉದ್ದಿಮೆಗಳ ವಹಿವಾಟು ನಡೆಸಲು ಲಾಭದಾಯಕ ಸೌರಶಕ್ತಿಯ ಪೂರೈಕೆಯಂತಹ ಲಾಭದಾಯಕ ಉದ್ದಿಮೆಗಳನ್ನು ಗುತ್ತಿಗೆ ಪಡೆಯಲು ಭಾರತ ಸೇರಿದಂತೆ ವಿದೇಶಗಳಲ್ಲಿ ಸಹ ಸುಮಾರು ₹2100 ಕೋಟಿ ಲಂಚ ನೀಡಿದ್ದಾರೆಂದು ಅಮೆರಿಕದ ಪ್ರಾಸಿಕ್ಯೂಟರ್‌ಗಳು ಗಂಭೀರ ಸ್ವರೂಪದ ಆರೋಪ ಮಾಡಿದ್ದಾರೆ.
ನ್ಯೂಯಾರ್ಕನ ಪ್ರಾಸಿಕ್ಯೂಟರ್‌ಗಳ ಆರೋಪಗಳ ಸತ್ಯಾಸತ್ಯತೆ ಅರಿಯಲು ಗೌತಮ್ ಅದಾನಿಯನ್ನು ಕೂಡಲೇ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.ಸಂಘಟನೆಯ ಜಿಲ್ಲಾಧ್ಯಕ್ಷ ಕಟ್ಟೆಬಸಪ್ಪ ಮಾತನಾಡಿದರು. ಜಿಲ್ಲಾ ಪ್ರಮುಖರಾದ ಎಸ್.ಆರ್. ಮುದುಕಪ್ಪ, ಪರಶುರಾಮ್, ವಿಶ್ವನಾಥಸ್ವಾಮಿ, ವೀರೇಶ್, ಮುಕ್ಕಣ್ಣ, ಹುಲುಗಪ್ಪ, ಮಲ್ಲಪ್ಪ, ಈರಣ್ಣ, ಕಲ್ಯಾಣಗೌಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಉದ್ಯಮಿ ಗೌತಮ್ ಅದಾನಿ ಅವರ ಮೇಲಿನ ಭ್ರಷ್ಟಾಚಾರ ಆರೋಪವನ್ನು ತನಿಖೆ ನಡೆಸಬೇಕು ಎಂದು ಆಗ್ರಹಿಸಿ (ಎಐವೈಎಫ್ ಸಂಘಟನೆಯ ಕಾರ್ಯಕರ್ತರು ಬಳ್ಳಾರಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.