ಸಾರಾಂಶ
ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)
ಸನಾತನ ಧರ್ಮಕ್ಕಾಗಿ ಪ್ರಾಣವನ್ನೇ ಕೊಡಲು ನಾನು ಸಿದ್ಧ. ನಾವು ಹೋರಾಟ ಮಾಡುತ್ತಿರುವುದು ಯಾವುದೇ ಧರ್ಮದ ಸಲುವಾಗಿ ಅಲ್ಲ ವಕ್ಫ್ ಬೋರ್ಡ್‌ನ ನಾಶಕ್ಕೆ ಮತ್ತು ರೈತರ ಸಲುವಾಗಿ ಹೋರಾಟ ನಡೆಸಲು ನಾನು ಗೂಳಿಯಂತೇ ಮುನ್ನುಗ್ಗಲು, ಪ್ರಾಣ ತ್ಯಾಗ ಮಾಡಲು ಸಿದ್ಧ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ಶನಿವಾರ ಸಂಜೆ ಪಟ್ಟಣದ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ನಾಗರಿಕ ಹಿತರಕ್ಷಣಾ ಸಮಿತಿಯವರಿಂದ ವಕ್ಫ್ ಬೋರ್ಡ್ ಹಠಾವೋ ದೇಶ ಬಚಾವೋ ಸಮಾರಂಭದಲ್ಲಿ ಮಾತನಾಡಿದ ಅವರು, ನಾವೆಲ್ಲ ಹಿಂದುಗಳು ಜಾತಿ, ಜಾತಿ ಎಂದು ಬಡಿದಾಡಿದರೆ ನಮಗೆ ಈ ದೇಶದಲ್ಲಿ ಸುರಕ್ಷತೆ ಇಲ್ಲ. ವಕ್ಫ್ ಎನ್ನುವಂತದ್ದು ದೇಶಕ್ಕೆ ವಕ್ಕರಿಸಿರುವ ಕಂಟಕಕಾರಿ ಕ್ಯಾನ್ಸರ್ ಇದ್ದ ಹಾಗೇ. ಈ ರೋಗ ನಾಶವಾಗಬೇಕಾದರೆ ವಕ್ಫ್ ಸಂಪೂರ್ಣ ನಾಶಕ್ಕೆ ಹೋರಾಟ ಮಾಡಬೇಕು. ಇಡೀ ಭೂಮಿಯೇ ವರಾಹರೂಪಿ ಸನಾತನ ಧರ್ಮದ್ದಾಗಿದೆ. ಎಲ್ಲಿಯವರೆಗೆ ಸನಾತನ ಧರ್ಮವಿರುತ್ತದೆ ಅಲ್ಲಿಯವರೆಗೆ ಸಂವಿಧಾನ ಉಳಿಯುತ್ತದೆ ಎಂದರು.
ಇಸ್ಲಾಂ ಧರ್ಮದಲ್ಲಿ ಸಹೋದರತ್ವವೇ ಇಲ್ಲ. ಅವರು ತಮ್ಮ ಧರ್ಮಿಯರನ್ನು ಬಿಟ್ಟು ಇನ್ನೊಬ್ಬರಿಗೆ ಅಣ್ಣ ತಮ್ಮಂದಿರೆಂದು ಒಪ್ಪಿಕೊಳ್ಳದೇ ಅನ್ಯ ಧರ್ಮೀಯರನ್ನು ಕಾಫೀರರೆಂದು ಪರಿಗಣಿಸುತ್ತಾರೆ. ರಾಮನಿದ್ದಾಗ, ಮಹಾಭಾರತ ನಡೆದಾಗ, ಹೋಗಲಿ ೧೨ನೇ ಶತಮಾನದ ಬಸವಣ್ಣನವರು ಇದ್ದಾಗ ವಕ್ಫ್ ಸಂತತಿಯೇ ಭಾರತದಲ್ಲಿರಲಿಲ್ಲ. ವಕ್ಫ್ ಬೋರ್ಡಿನಲ್ಲಿ ಯಾವುದೇ ಮುಸ್ಲಿಂರ ಪರವಾಗಿ ದಾಖಲೆಗಳಿಲ್ಲ. ಆದರೆ ನಮ್ಮ ದೇಶದ ರೈತರಿಗೆ ಹಾಗೂ ಮಠಾಧೀಶರಿಗೆ ನಮ್ಮ ದೇವಸ್ಥಾನಗಳಿಗೆ ನಾವು ಉಳಿಸಿಕೊಳ್ಳಲು ನಾವೇ ಸಾಕ್ಷಿಗಳನ್ನು ಕೊಡುವಂತ ದುಸ್ಥಿತಿ ಬಂದಿದೆ ಎಂದು ದೂರಿದರು.ಹಿಂದುಗಳು ಒಂದಾಗಿ ಅಸ್ಪೃಶ್ಯತೆಯಿಂದ ಹೊರಗೆ ಬರಬೇಕು. ದೇಶದಲ್ಲಿರುವರು ಎಲ್ಲ ಜಾತಿ, ಮತದ ಹಿಂದು ಎಂಬ ಭಾವನೆಯಿಂದ ಒಂದಾಗಬೇಕು. ತೇರದಾಳದಲ್ಲಿ ೪೫೦, ಅನಗವಾಡಿಯಲ್ಲಿ ೨೫೦ ಎಕರೆ, ಬೀಳಗಿಯಲ್ಲಿ ೫೫೦ ಎಕರೆ, ಬಾಗಲಕೋಟೆ ಜಿಲ್ಲೆಯಲ್ಲಿ ೬೫೯೦, ವಿಜಯಪುರದಲ್ಲಿ ಹೊನವಾಡದಲ್ಲಿ ೧೫೦೦ ಎಕರೆ ಇದೆ ಎಂದು ವಕ್ಫ್ ಹೇಳಿದೆ, ರಾಜ್ಯದಲ್ಲಿ ೧.೧೧ ಲಕ್ಷ ಎಕರೆ ಜಮೀನು ವಕ್ಫ್ ಪಾಲಾಗಿದೆ. ಇನ್ನೂ ವಕ್ಫ್ ಆಗಲಿಕ್ಕೆ ಯೋಗ್ಯ ಜಮೀನು ಎಂದು ಗುರುತಿಸಿ ವಶ ಪಡಿಸಿಕೊಳ್ಳಲು ಸಂಚು ನಡೆದಿದೆ ಎಂದು ಆರೋಪಿಸಿದರು.
ಎಲ್ಲಿಯವರೆಗೆ ಹಿಂದುಗಳು, ಮಠಾಧೀಶರು ಹೊರಗೆ ಬಂದು ಹೋರಾಟ ಮಾಡುವುದಿಲ್ಲವೋ, ನಮ್ಮಲ್ಲಿನ ಒಡಕು ಭಾವನೆ ಹೋಗುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಹಿರಿಯರು ಸಂಪಾದಿಸಿ ಆಸ್ತಿ ವಕ್ಫ್ ಆಸ್ತಿಯೆಂದು ಘೋಷಣೆಯಾಗುವುದು ನಿಲ್ಲುವುದಿಲ್ಲ. ವಕ್ಫ್ ಕಾನೂನು ಸಂಪೂರ್ಣವಾಗಿ ರದ್ದಾಗಬೇಕು. ಇದನ್ನು ಹಗುರವಾಗಿ ತಿಳಿದುಕೊಂಡರೆ ನಮಗೆ ಭವಿಷ್ಯವಿಲ್ಲ ಎಲ್ಲವನ್ನು ಕಳೆದುಕೊಳ್ಳಬೇಕಾಗುತ್ತದೆ. ಈಗಾಗಲೇ ನೋಂದಣಿ ಕಚೇರಿಯಲ್ಲಿ ರೈತರ ಆಸ್ತಿಗಳಿಗೆ ಯಾವುದೇ ರೀತಿ ಖಾತಾ ಬದಲಾವಣೆಗೆ ಮಾರಾಟ ಹಾಗೂ ಹೆಸರು ಸೇರ್ಪಡೆ ಮಾಡುವಂತಿಲ್ಲವೆಂದು ಎಂದು ಕಾನೂನು ತಡೆಯಾಜ್ಞೆ ತಂದು ತೊಡಕು ಮಾಡಿದ್ದು, ರೈತರು ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದರು.ಭಾರತಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿದರು, ಜ್ಯೋತಿ ಬೆಳಗಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು. ಸಮಾರಂಭಕ್ಕೂ ಮುನ್ನ ರೈತ ಗೀತೆ ಕೇಳಿಸಲಾಯಿತು. ಮೈಗೂರಿನ ಗುರುಪ್ರಸಾದ ಶ್ರೀಗಳು, ಹಳಿಂಗಳಿಯ ಶಿವಾನಂದ ದೇವರು, ಶಾಸಕ ಸಿದ್ದು ಸವದಿ, ಮಾಜಿ ಸಂಸದ ಪ್ರತಾಪಸಿಂಹ ಮಾತನಾಡಿದರು. ಸ್ಥಳೀಯ ಹಿರೇಮಠ ಗಂಗಾಧರ ದೇವರು, ಗೊಕಾಕ ಶಾಸಕ ರಮೇಶ ಜಾರಕಿಹೋಳಿ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಶಾಸಕ ಎನ್.ಆರ್.ಸಂತೋಷ, ಭಾರತೀಯ ಕಿಸಾನ ಸಂಘದ ಅಧ್ಯಕ್ಷ ವಿರುಪಾಕ್ಷ ಹಿರೇಮಠ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಸುಬ್ಬರಾಯ ಪಾಟೀಲ, ಉಮೇಶ ಮಹಾಬಳಶೆಟ್ಟಿ, ಮೋಹನ ಜಾಧವ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿದ್ದರು.