ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಕೆಎಸ್ಸಾರ್ಟಿಸಿ ಡಿಪೋ ಮುಂದೆ ಬೆಳಗ್ಗೆಯಿಂದ ಸಂಜೆಯವರೆಗೆ ಉಪವಾಸ ಸತ್ಯಾಗ್ರಹ ನಡೆಸಿದರು.ಸಮಿತಿಯ ಮುಖಂಡರು ಮಾತನಾಡಿ, ಪ್ರಸಕ್ತ ಸಾಲಿನಿಂದ ಮೂಲ ವೇತನದಲ್ಲಿ ಶೇ.೨೫ರಷ್ಟು ಹೆಚ್ಚು ಮಾಡುವ ಮೂಲಕ ವೇತನ ಶ್ರೇಣಿ ಸಿದ್ದಪಡಿಸಬೇಕು, ಜನವರಿಯಿಂದ ಶೇ.೧೫ರಷ್ಟು ವೇತನ ಹೆಚ್ಚಳದ ೩೮ ತಿಂಗಳ ಬಾಕಿ ಹಣ ವಿಳಂಬವಿಲ್ಲದೆ ಪಾವತಿಸಬೇಕು ಎಂದು ಒತ್ತಾಯಿಸಿದರು.
ನಿವೃತ್ತರಿಗೆ ಹೋಸ ವೇತನ ಸೌಲಭ್ಯ ಸಿಗಲಿಫೆ.೨೮ಕ್ಕೆ ಸೇವೆಯಿಂದ ವಿಮುಕ್ತಿಯಾಗಿರುವ ಎಲ್ಲಾ ನೌಕರರಿಗೆ, ನಿವೃತ್ತಿ, ಮೃತಪಟ್ಟವರು, ವಜಾಗೊಂಡವರು ಹಾಗೂ ಇತರೆ ಕಾರಣಗಳಿಂದ ಸೇವೆಯಿಂದ ನಿರ್ಗಮಿಸಿರುವ ಎಲ್ಲಾ ನೌಕರರಿಗೂ ಜ.೧ ರಿಂದ ಜಾರಿ ಮಾಡಿರುವ ವೇತನ ಸೌಲಭ್ಯ ಪಾವತಿಸಬೇಕು. ಆಯ್ಕೆ ಶ್ರೇಣಿ ಮತ್ತು ಉನ್ನತ ವೇತನ ಶ್ರೇಣಿಗಳನ್ನು ಸಿದ್ದಪಡಿಸಬೇಕು, ಪ್ರತಿ ೧೦ ವರ್ಷಕ್ಕೊಮ್ಮೆ ಬಡ್ತಿ ನೀಡಬೇಕು, ೨೦೨೩ ರ ಆಗಸ್ಟ್ ಮಾಹೆಯಲ್ಲಿ ಸಮಿತಿ ಸಲ್ಲಿಸಿರುವ ಎಲ್ಲಾ ಬೇಡಿಕೆಗಳನ್ನು ಇತ್ಯರ್ಥಪಡಿಸಬೇಕು ಎಂದು ಒತ್ತಾಯಿಸಿದರು. ೨೦೨೩ರಲ್ಲಿ ಕಡಿತಗೊಳಿಸಿದ್ದ ಹಾಗೂ ೨೦೨೪ರ ಅಪಘಾತ ವಿಮೆ ಪ್ರೀಮಿಯಂ ಹಣವನ್ನು ಪಾವತಿಸಬೇಕು, ಅಪಘಾತ ಮತ್ತು ಸಹಜವಾಗಿ ಮೃತಪಟ್ಟ ನೌಕರರಿಗೆ ಕನಿಷ್ಠ ೧೦ ಲಕ್ಷ ರೂ.ಗಳಿಂದ ೧ ಕೋಟಿ ರೂ.ವರೆಗೆ ಪರಿಹಾರ ಸೌಲಭ್ಯ ಜಾರಿಗೊಳಿಸಬೇಕು, ಹೆಚ್ಚುವರಿ ಕೆಲಸಗಳಿಗೆ ಓವರ್ ಟೈಮ್ ಭತ್ಯೆ ನೀಡಬೇಕು, ಏಕಪಕ್ಷಿಯ ನಿರ್ಧಾರಗಳಿಗೆ ಆಡಳಿತ ವರ್ಗ ಕಡಿವಾಣ ಹಾಕಬೇಕು, ರಿಯಾಯಿತಿ ದರದಲ್ಲಿ ಕ್ಯಾಂಟೀನ್ ಸೌಲಭ್ಯ ನೀಡಬೇಕು, ಮಹಿಳೆಯರಿಗೆ ೮ ಗಂಟೆಗಿಂದ ಹೆಚ್ಚು ಅವಧಿ ಕರ್ತವ್ಯಕ್ಕೆ ನಿಯೋಜಿಸ ಬಾರದು ಎಂದು ಒತ್ತಾಯಿಸಿದರು.
ಪಿಚಣಿ ಯೋಜನೆ ಜಾರಿಗೊಳಿಸಿಭವಿಷ್ಯ ನಿಧಿ ಪಿಂಚಣಿ ಬದಲು ಸೂಕ್ತವಾದ ತುಟ್ಟಿ ಭತ್ಯೆಗೆ ಲಗತ್ತಾದ ಪಿಂಚಣಿ ಜಾರಿಗೊಳಿಸಬೇಕು, ಗ್ರಾಚ್ಯುಟಿ ೧೨೭೪ ಸುತ್ತೋಲೆ ರದ್ದುಪಡಿಸಿ ಕೈಗಾರಿಕಾ ಒಪ್ಪಂದದ ಪ್ರಕಾರ ಪಾವತಿಸಬೇಕು, ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು, ಮುದ್ರಣಾಲಯ ಹಾಗೂ ಕಾರ್ಯಾಗಾರಗಳ ತಾಂತ್ರಿಕ ಸಿಬ್ಬಂದಿಗಳಿಗೆ ಮುಂಬಡ್ತಿ, ವಿದ್ಯುತ್ ಬಸ್‌ಗಳಿಗೆ ಹಾಲಿ ಚಾಲಕರನ್ನೆ ನಿಯೋಜಿಸಬೇಕು, ಪ್ರಸ್ತುತ ವೇತನ ಪರಿಷ್ಕರಣೆ ೨೦೨೭ರ ಡಿಸೆಂಬರ್ ಅಂತ್ಯದವರೆಗೆ ಜಾರಿಯಲ್ಲಿರಬೇಕು, ಶಕ್ತಿ ಯೋಜನೆಯಿಂದ ಸಿಬ್ಬಂದಿಗಳಿಗೆ ಅಗುತ್ತಿರುವ ಶಿಕ್ಷೆ, ಕಿರುಕುಳಗಳ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಮನವಿಪತ್ರವನ್ನು ವಿಭಾಗೀಯ ಆಯುಕ್ತ ಬಸವರಾಜ್ ಮೂಲಕ ಸಿಎಂಗೆ ಹಾಗೂ ಸಾರಿಗೆ ಸಚಿವರಿಗೆ ಸಲ್ಲಿಸಿದರು.
ಪ್ರಧಾನ ಕಾರ್ಯದರ್ಶಿ ಪ್ರಸಾದ್, ಕಾರ್ಯದರ್ಶಿ ಬಾಲಕೃಷ್ನ, ರವಿ, ಶ್ರೀನಿವಾಸಮೂರ್ತಿ, ಎನ್.ಅಶೋಕ್ ಕುಮಾರ್, ಪಿ.ಎಂ.ವೆಂಕಟೇಶ್, ಕೆ.ಹೆಚ್.ವೀರಪ್ಪ ಇದ್ದರು.