ಸಂಡೂರು: ಪಹಣಿಯಲ್ಲಿ ಅಕ್ರಮವಾಗಿ ಸೇರಿಕೊಂಡ ಹೆಸರು ರದ್ದುಗೊಳಿಸಲು ಒತ್ತಾಯಿಸಿ ಲಿಂಗದಹಳ್ಳಿ ಗ್ರಾಮಸ್ಥರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ತಾಲೂಕಿನ ತೋರಣಗಲ್ಲು ಹೋಬಳಿ ವ್ಯಾಪ್ತಿಯ ಅಯ್ಯನಹಳ್ಳಿ ಗ್ರಾಮದ ಸರ್ವೆ ನಂ. ೨೦/ಎಬಿಯಲ್ಲಿನ ೧೯.೧೦ ಎಕರೆ ವಿಸ್ತೀರ್ಣದ ಜಮೀನಿನ ಪೈಕಿ ೧೦.೧೦ ಎಕರೆ ಜಮೀನಿನ ಮೂಲಪಟ್ಟಾದಾರರು ಲಿಂಗದಹಳ್ಳಿಯ ಸತ್ಯಪ್ಪ ಗಾರಿ ಸತ್ಯಪ್ಪ ಆಗಿರುತ್ತಾರೆ. ಆದರೆ, ೧೯೬೫ರಲ್ಲಿ ಈ ಜಮೀನಿನ ಪಹಣಿಯಲ್ಲಿ ಬೋಯಾ ಸಕ್ರಪ್ಪ ಎಂಬ ಹೆಸರು ಅಕ್ರಮವಾಗಿ ಸೇರಿಕೊಂಡಿದೆ. ಪಹಣಿಯಲ್ಲಿ ಅಕ್ರಮವಾಗಿ ಸೇರಿಕೊಂಡಿರುವ ಬೋಯಾ ಸಕ್ರಪ್ಪ ಹೆಸರನ್ನು ರದ್ದುಗೊಳಿಸಿ, ಮೂಲ ಪಟ್ಟಾದಾರರಾದ ಸತ್ಯಪ್ಪ ಗಾರಿ ಸತ್ಯಪ್ಪ ಹೆಸರನ್ನು ನಮೂದಿಸುವಂತೆ ಕೋರಿ ಸತ್ಯಪ್ಪನವರ ಕುಟುಂಬದ ಸದಸ್ಯರು ಹಾಗೂ ಲಿಂಗದಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮನವಿ ಸಲ್ಲಿಸಿ ಮಾತನಾಡಿದ ಮುಖಂಡ ವಿ.ಎಸ್. ಶಂಕರ್, ಜಮೀನಿನ ಮೂಲ ಪಟ್ಟಾದಾರರಾದ ಸತ್ಯಪ್ಪನ ಮಕ್ಕಳು, ಮೊಮ್ಮಕ್ಕಳು ಮೂರು ತಲೆಮಾರುಗಳಿಂದ ಜಮೀನು ಉಳುಮೆ ಮಾಡಿಕೊಂಡು ಬಂದಿದ್ದಾರೆ. ಈಗಲೂ ಸತ್ಯಪ್ಪನವರ ಕುಟುಂಬಸ್ಥರೇ ಈ ಜಮೀನನ್ನು ಉಳುಮೆ ಮಾಡುತ್ತಿದ್ದಾರೆ. ಆದರೆ ಈ ಜಮೀನಿನ ಪಹಣಿಯಲ್ಲಿ ಅಕ್ರಮವಾಗಿ ಸೇರಿಕೊಂಡ ಬೋಯಾ ಸಕ್ರಪ್ಪನವರ ಕುಟುಂಬಸ್ಥರು ೨೦೨೩ರಲ್ಲಿ ಕುಡುತಿನಿಯ ರಾಮರಾವ್ ಎಂಬುವವರಿಗೆ ಅಕ್ರಮವಾಗಿ ಜಮೀನನ್ನು ಮಾರಾಟ ಮಾಡಿದ್ದಾರೆ ಎಂದು ದೂರಿದರು.

ಜು.೧೩ರಂದು ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ:

ಜಮೀನಿನ ಪಟ್ಟಾದಾರರು ಹಾಗೂ ಪ್ರಸ್ತುತ ಉಳುಮೆ ಮಾಡುತ್ತಿರುವ ಸತ್ಯಪ್ಪನವರ ಕುಟುಂಬಸ್ಥರಿಗೆ ಅಕ್ರಮವಾಗಿ ಜಮೀನು ಖರೀದಿಸಿರುವವರು ಬೆದರಿಕೆ ಹಾಕುತ್ತಿದ್ದಾರೆ. ಈ ಕುರಿತಂತೆ ರಾಜಶೇಖರ್ ಎಂಬವರ ವಿರುದ್ಧ ದೂರು ದಾಖಲಾಗಿದೆ. ಪಹಣಿಯಲ್ಲಿ ಅಕ್ರಮವಾಗಿ ಸೇರಿಕೊಂಡಿರುವ ಹೆಸರನ್ನು ರದ್ದುಪಡಿಸಿ, ಮೂಲ ಪಟ್ಟಾದಾರರ ಹೆಸರನ್ನು ಸೇರ್ಪಡೆಗೊಳಿಸುವಂತೆ ಒತ್ತಾಯಿಸಿ ಮೂಲ ಪಟ್ಟಾದಾರರು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಜು.೧೩ ರಂದು ಲಿಂಗದಹಳ್ಳಿ ಗ್ರಾಮದಿಂದ ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯತ್ರೆ ಹಮ್ಮಿಕೊಂಡಿದ್ದೇವೆ ಎಂದರು.


ಗ್ರಾಮಸ್ಥರಾದ ಎನ್.ಎಂ. ಸತೀಶ್, ಎನ್. ಕಾರ್ತಿಕ್, ಕಾಶಪ್ಪ, ಎನ್.ಎಸ್. ಮರಿಸ್ವಾಮಿ, ಸುಬ್ಬಯ್ಯ, ಎನ್. ರುದ್ರಮ್ಮ, ರಮೇಶ್ ಮುಂತಾದವರು ಉಪಸ್ಥಿತರಿದ್ದರು.