ನಾಪೋಕ್ಲು: ರೈತರಿಗೆ ಗುಣಮಟ್ಟದ ರಸ ಗೊಬ್ಬರ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಕೃಷಿಕರು ಒತ್ತಾಯಿಸಿದ್ದಾರೆ.

ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಖರೀದಿಸುವ ರಾಸಾಯನಿಕ ಗೊಬ್ಬರಗಳು ಕೆಲವೊಮ್ಮೆ ಕಳಪೆ ಮಟ್ಟದಿಂದ ಕೂಡಿದ್ದು ರೈತರಿಗೆ ಅನ್ಯಾಯವಾಗುತ್ತಿದೆ. ಈಗಾಗಲೇ ರಸಗೊಬ್ಬರಗಳ ದರ ಮಿತಿಮೀರಿದೆ, ಖರೀದಿಸುವ ರಸಗೊಬ್ಬರಗಳು ಉತ್ತಮ ಗುಣಮಟ್ಟದಿಂದ ಕೂಡಿರದಿದ್ದಲ್ಲಿ ರೈತರಿಗೆ ಅನ್ಯಾಯವಾಗಲಿದೆ ಎಂದು ಅವರು ದೂರಿದ್ದಾರೆ.

ಮೂರ್ನಾಡಿನ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಈಚೆಗೆ ಖರೀದಿಸಿದ ರಸಗೊಬ್ಬರ ಗಟ್ಟಿಯಾಗಿತ್ತು.19:19:19 ಪ್ರಮಾಣದ ರಸಗೊಬ್ಬರವನ್ನು ನಿಗದಿತ ದರ ತೆತ್ತು ಖರೀದಿಸಲು ಮುಂದಾದಾಗ ಗಟ್ಟಿಯಾಗಿದ್ದು ಗೋಚರಿಸಿತು. ಬದಲಿ ರಸಗೊಬ್ಬರ ಪೂರೈಸುವಂತೆ ಮನವಿ ಮಾಡಿದರೂ ಸಿಬ್ಬಂದಿ ನೀಡಲು ಹಿಂದೇಟು ಹಾಕಿದರು. ಈಗಾಗಲೇ ರಸಗೊಬ್ಬರದ ದರ ಹೆಚ್ಚಿದೆ. ಗುಣಮಟ್ಟದ ರಸ ಗೊಬ್ಬರ ಪೂರೈಸುವ ಖಾತ್ರಿ ರೈತರಿಗೆ ದೊರಕಬೇಕು ಎಂದು ಬಲಮುರಿ ಗ್ರಾಮದ ನಿವಾಸಿ ಕೃಷಿಕ ಪ್ರಶಾಂತ್ ಮುತ್ತಣ್ಣ ಕೋಳಿಮಾಡು ಆಗ್ರಹಿಸಿದ್ದಾರೆ.