ಉಡುಪಿ: ಯಕ್ಷಗಾನ ಕಾಲಕಾಲಕ್ಕೆ ಬದಲಾವಣೆಯನ್ನು ಕಾಣುತ್ತಾ ಬಂದಿದೆ. ಹಿಂದಿನ ಕಲಾವಿದರ ಪರಂಪರೆಯ ವೇಷಗಳು ಇಂದು ಕಣ್ಮರೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಪರಂಪರೆಯ ಯಕ್ಷಗಾನಗಳ ದಾಖಲೀಕರಣಕ್ಕೆ ಹೆಚ್ಚಿನ ಮಹತ್ವವಿದೆ ಎಂದು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಕಾರ್ಯದರ್ಶಿ ಡಾ. ನಾರಾಯಣ ಸಭಾಹಿತ್ ಹೇಳಿದರು.

ಇಲ್ಲಿನ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮಾಹೆ, ಇಂದ್ರಾಳಿ ಯಕ್ಷಗಾನ ಕೇಂದ್ರ, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಆಶ್ರಯದಲ್ಲಿ ವೀರ ವೃಷಸೇನ ಯಕ್ಷಗಾನ ದಾಖಲೀಕರಣವನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಕಲಾವಿದರು ಸನ್ನಿವೇಶಗಳನ್ನು ರಂಗದ ಮೇಲೆ ಕಟ್ಟುತ್ತಿದ್ದ ರೀತಿ ಅನನ್ಯವಾದುದು. ಹಳೆಯದು ಯಾವಾಗಲೂ ಅಮೂಲ್ಯವಾದದ್ದು, ಅದನ್ನು ಉಳಿಸಿಕೊಂಡು ಬೆಳೆಸಿಕೊಂಡು ಬರಬೇಕಾಗಿರುವುದು ನಮ್ಮೆಲ್ಲರ ಆದ್ಯಕರ್ತವ್ಯ. ಆ ನಿಟ್ಟಿನಲ್ಲಿ ಯಕ್ಷಗಾನ ಕೇಂದ್ರ ಇಂತಹ ಪ್ರಯತ್ನವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು. ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮ ಮಾತನಾಡಿ, ಶುದ್ಧ ಕನ್ನಡ ಬಳಕೆಯ ಯಕ್ಷಗಾನ ಕಲೆಯಿಂದ ಕನ್ನಡ ಭಾಷೆ ಉಳಿಯುತ್ತಿದೆ. ಇಂತಹ ದಾಖಲೀಕರಣದ ಮೂಲಕ ಹೊಸ ತಲೆಮಾರಿಗೆ ಪರಂಪರೆಯ ಯಕ್ಷಗಾನವನ್ನು ತಲುಪಿಸುವುದು ಸಾಧ್ಯವಿದೆ ಎಂದರು. ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಸದಸ್ಯರಾದ ವಿಶ್ವನಾಥ ಶೆಣೈ, ಮೀನಲಕ್ಷಿಣಿ ಅಡ್ಯಂತಾಯ, ವಿ.ಜಿ. ಶೆಟ್ಟಿ, ಭುವನ ಪ್ರಸಾದ್ ಹೆಗ್ಡೆ, ಡಾ. ಜಗದೀಶ್ ಶೆಟ್ಟಿ ಸಿದ್ಧಾಪುರ ಉಪಸ್ಥಿತರಿದ್ದರು. ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕ ಪ್ರೊ. ಎಸ್.ವಿ. ಉದಯಕುಮಾರ್ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಂ.ಜಿ.ಎಂ. ಕಾಲೇಜಿನ ಕನ್ನಡ ಪ್ರಾಧ್ಯಾಪಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.