ಹಗರಿಬೊಮ್ಮನಹಳ್ಳಿ: ಪ್ರವರ್ಗ-ಎಗೆ ಸಂಬಂಧವಿಲ್ಲದ ಜಾತಿಗಳ ಜನರು ಮಾದಿಗ ಪ್ರವರ್ಗ-ಎ ಜಾತಿ ಪ್ರಮಾಣಪತ್ರ ಪಡೆಯುತ್ತಿದ್ದಾರೆ. ಪ್ರವರ್ಗ-ಎ ಮಾದಿಗ ಜನಾಂಗದ ಮೀಸಲಾತಿಗೆ ಧಕ್ಕೆಯಾಗುತ್ತಿದೆ ಎಂದು ತಾಲೂಕು ದಸಂಸ ಸಂಚಾಲಕ ಪರಶುರಾಮ್ ಹೆಗ್ಡಾಳ್ ಆಕ್ರೋಶ ವ್ಯಕ್ತಪಡಿಸಿದರು.

ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಕಳೆದ ವರ್ಷ ಸರ್ಕಾರ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗೆ ಸಂಬಂಧಿಸಿ ಮಾದಿಗ ಸಂಬಂಧಿತ ಜಾತಿಗಳಿಗೆ ಪ್ರವರ್ಗ-ಎ, ಹೊಲೆಯ ಸಂಬಂಧಿತ ಜಾತಿಗಳಿಗೆ ಪ್ರವರ್ಗ-ಬಿ ಹಾಗೂ ಬೋವಿ ಸಹಿತ ಇತರೆ ಜಾತಿಗಳಿಗೆ ಪ್ರವರ್ಗ-ಸಿ ವರ್ಗಗಳಾಗಿ ವಿಂಗಡಿಸಿ ಜಾತಿ ಪ್ರಮಾಣಪತ್ರ ವಿತರಿಸಲು ಸೂಚಿಸಿತ್ತು. ಆದರೆ, ಕಂದಾಯ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಪ್ರವರ್ಗ-ಎ ನಕಲಿ ಜಾತಿ ಪ್ರಮಾಣಪತ್ರ ಪಡೆಯುವ ಮೂಲಕ ಒಳ ಮೀಸಲಾತಿಯ ಆಶಯಗಳನ್ನು ಬುಡಮೇಲು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕೂಡ್ಲಿಗಿ ತಾಲೂಕಿನ ಬಡಲಡಕು ಗ್ರಾಮದ ಪ್ರವರ್ಗ-ಸಿ ಸುಡುಗಾಡುಸಿದ್ಧ ಜಾತಿಯ ಮಹಿಳೆಯೊಬ್ಬರು ಮಾದಿಗ ವರ್ಗ-ಎ ಎಂದು ಜಾತಿ ಪ್ರಮಾಣಪತ್ರ ಪಡೆದಿರುವುದು ಕಂದಾಯ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸ್ಪಷ್ಟ ನಿದರ್ಶನವಾಗಿದೆ ಎಂದು ದೂರಿದರು.

ಜಾತಿ ಪ್ರಮಾಣಪತ್ರ ಒದಗಿಸುವಾಗ ಕಂದಾಯ ಅಧಿಕಾರಿಗಳು ಸ್ಥಳವಾಸದ ಜೊತೆಗೆ ಖುದ್ದು ದಾಖಲಾತಿ ಪರಿಶೀಲಿಸಿ ನಕಲಿ ಜಾತಿ ಪ್ರಮಾಣಪತ್ರ ವಿತರಣೆಯನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿದರು.

ಪದಾಧಿಕಾರಿಗಳಾದ ಕೆಚ್ಚಿನಬಂಡಿ ದುರುಗಪ್ಪ, ಲಿಂಗರಾಜ್ ಶಿವಾನಂದನಗರ, ಕಿತ್ತನೂರು ದುರುಗಪ್ಪ, ತೆಲಗೋಳು ಮೈಲಾರೆಪ್ಪ, ಯಡ್ರಾಮನಹಳ್ಳಿ ಮರಿಯಪ್ಪ, ಜಿಲ್ಲಾ ಸಂಘಟನಾ ಸಂಚಾಲಕರಾದ ಆನಂದಳ್ಳಿ ಪ್ರಭು, ಕೋಗಳಿ ಉಮೇಶ್, ಮೇಘರಾಜ್, ಒಂಟಿ ನಾಗರಾಜ್, ಗಣೇಶ್ ಅಲಬೂರು, ತಾಲೂಕು ಸಂಘಟನಾ ಸಂಚಾಲಕರಾದ ಮರಿಯಪ್ಪ ದಸಮಾಪುರ, ಫಕೀರಪ್ಪ ಕಡಲಬಾಳು, ನೆಲ್ಕುದ್ರಿ ಶಿವಮೂರ್ತಿ ಹಾಗೂ ದೂಪದಹಳ್ಳಿ ಕೋಟೆಪ್ಪ ಇದ್ದರು.


ಜಾತಿ ಪ್ರಮಾಣಪತ್ರ ವಿತರಣೆಯಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ದಸಂಸ ತಾಲೂಕು ಪದಾಧಿಕಾರಿಗಳು ತಹಸೀಲ್ದಾರ್ ಕವಿತಾ ಅವರಿಗೆ ಮನವಿ ಸಲ್ಲಿಸಿದರು.