ಹಾನಗಲ್ಲ: ಬಾಳಂಬೀಡ ಏತ ನೀರಾವರಿ ಕಾಮಗಾರಿ ಕಳಪೆಯಾಗಿದ್ದು ತನಿಖೆಗೊಳಪಡಿಸಬೇಕು, ಸರ್ಕಾರಿ ಕೆರೆ ರಾಜಕಾಲುವೆಗಳ ಅತಿಕ್ರಮಣ ತೆರವುಗೊಳಿಸಬೇಕು, ಸರ್ಕಾರಿ ದಾರಿ ಅತಿಕ್ರಮಣ ತೆರವುಗೊಳಿಸಬೇಕು ಎಂದು ಭಾರತೀಯ ಕೃಷಿ ಕಾರ್ಮಿಕ ರೈತ ಸಂಘಟನೆ ತಾಲೂಕು ತಹಸೀಲ್ದಾರ್‌ರಿಗೆ ಒತ್ತಾಯಿಸಿದೆ.

ಗುರುವಾರ ಇಲ್ಲಿನ ತಾಲೂಕು ತಹಸೀಲ್ದಾರ ವಿಠಲ್ ಚೌಗುಲಾ ಅವರಿಗೆ ಮನವಿ ಸಲ್ಲಿಸಿ, ಬಾಳಂಬೀಡ ಏತ ನೀರಾವರಿ ೩೮೮ ಕೋಟಿ ರು.ಗಳ ಕಾಮಗಾರಿಯಾಗಬೇಕಾದ ಯೋಜನೆ, ಇದು ಕಳಪೆಯಾಗಿದೆ. ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕು. ಇದಕ್ಕೆ ನೀಡಿದ ಅನುದಾನದ ಬಳಕೆ ಬಗೆಗೆ ತನಿಖೆ ಮಾಡಿಸಬೇಕು. ಗುತ್ತಿಗೆದಾರರ ಕಳಪೆ ಕಾಮಗಾರಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮರ್ಪಕ ನೀರು ಒದಗಿಸುವಲ್ಲಿ ವಿಫಲವಾಗಿದೆ. ಯೋಜನೆ ಆರಂಭವಾಗಿ ೩ ವರ್ಷಗಳು ಕಳೆದರೂ ಕೆರೆಗಳಿಗೆ ಸಮರ್ಪಕ ನೀರು ಬರುತ್ತಿಲ್ಲ. ನಿರ್ವಹಣೆ ನೆಪದಲ್ಲಿ ಪ್ರತಿ ವರ್ಷ ೫೦ ಲಕ್ಷ ರು. ಖರ್ಚು ಹಾಕಲಾಗುತ್ತಿದೆ ಎಂದು ಆಪಾದಿಸಿದ್ದಾರೆ.

ಅಲ್ಲದೆ ತಾಲೂಕಿನಲ್ಲಿರುವ ಅತಿಕ್ರಮಣಗೊಂಡು ಕೆರೆಗಳು ಹಾಗೂ ಸರ್ಕಾರಿ ರಸ್ತೆಗಳನ್ನು ತೆರವುಗೊಳಿಸಬೇಕು. ಈ ಕೆರೆಗಳ ಒತ್ತುವರಿ ಹಾಗೂ ರಸ್ತೆಗಳ ಅತಿಕ್ರಮಣದಿಂದ ರೈತರು ಹಾಗೂ ಸಾರ್ವಜನಿಕರಿಗೆ ಅನಾನುಕೂಲವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದು, ಕೂಡಲೇ ರೈತರನ ಅನುಕೂಲಕ್ಕಾಗಿ ಈ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಭಾರತೀಯ ಕೃಷಿ ಕಾರ್ಮಿಕ ರೈತ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್. ಪಾಟೀಲ, ತಾಲೂಕು ಅಧ್ಯಕ್ಷ ಮಹರುದ್ರಪ್ಪ ಕೂಸನೂರ, ತಾಲೂಕು ಮಹಿಳಾ ಅಧ್ಯಕ್ಷೆ ಶೀಲಾ ಭದ್ರಾವತಿ, ನಸೀಮಾಬಾನು ಲೋಹಾರ, ಖುರ್ಷಿದ ಕಬ್ಬೂರ, ಮಾಲಿಂಗಪ್ಪ ಬಿದರಮಳಿ, ಪುಷ್ಪಾ ಅಗಸೀಬಾಗಿಲು, ತೌಸಿಫ್ ಹಸನಾಬಾದಿ, ಚನ್ನಬಸಯ್ಯ ದೊಡ್ಡಕಂತಿಮಠ, ಬಸವಣ್ಣಪ್ಪ ಬಸಾಪುರ, ರಾಜಣ್ಣ ಕುದರೀಹಾಳ ಮೊದಲಾದವರು ಈ ಸಂದರ್ಭದಲ್ಲಿದ್ದರು.