ಮುಂಡರಗಿ ತೋಂಟದಾರ್ಯ ಮಠದಲ್ಲಿ ಬುಧವಾರ ಆಷಾಢ ಮಾಸದ ಅಂಗವಾಗಿ ಜರುಗುತ್ತಿರುವ ಪ್ರವಚನ ಕಾರ್ಯಕ್ರಮದಲ್ಲಿ ಗುರುಪೂರ್ಣಿಮೆ ಹಾಗೂ ಹಡಪದ ಅಪ್ಪಣ್ಣನವರ ಜಯಂತಿ ನಡೆಯಿತು.
ಮುಂಡರಗಿ: ಸಮಾಜದಲ್ಲಿ ಹಣ, ಅಧಿಕಾರ ಮತ್ತು ಜಾತಿ ಶ್ರೇಷ್ಠತೆಯ ವ್ಯಸನ ಹೆಚ್ಚಾಗಿದೆ. ಆದರೆ ಇತಿಹಾಸದಲ್ಲಿ ಉಳಿಯುವುದು ಮನುಷ್ಯತ್ವ ಮಾತ್ರ. ಮನುಷ್ಯನನ್ನು ಮನುಷ್ಯನನ್ನಾಗಿ ಪ್ರೀತಿಸಬೇಕು. ಪ್ರತಿಯೊಬ್ಬರೂ ಜಾತಿ ಭೇದ ಮರೆತು, ಮನುಷ್ಯತ್ವ ಮೈಗೂಡಿಸಿಕೊಳ್ಳಬೇಕು ಎಂದು ಜ. ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿಯ ತೋಂಟದಾರ್ಯ ಮಠದಲ್ಲಿ ಬುಧವಾರ ಆಷಾಢ ಮಾಸದ ಅಂಗವಾಗಿ ಜರುಗುತ್ತಿರುವ ಪ್ರವಚನ ಕಾರ್ಯಕ್ರಮದಲ್ಲಿ ಗುರುಪೂರ್ಣಿಮೆ ಹಾಗೂ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯುನ್ನತ ಸ್ಥಾನವಿದೆ. ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ. ಜಾತಿ ಶ್ರೇಷ್ಠತೆಯ ವ್ಯಸನ ಸಮಾಜಕ್ಕೆ ಅಂಟಿದ ದೊಡ್ಡ ರೋಗ. 12ನೇ ಶತಮಾನದಲ್ಲಿ ಬಸವಣ್ಣನವರು ಮತ್ತು ಶರಣರು ಈ ಜಾತಿ ಶ್ರೇಷ್ಠತೆ ಹೋಗಲಾಡಿಸಿ ಪ್ರತಿಯೊಬ್ಬರಿಗೂ ಜ್ಞಾನದ ಬಾಗಿಲು ತೆರೆದರು. ಭಾರತದ ಅತ್ಯಂತ ಪ್ರಾಚೀನ ಗುರು ಆದಿಯೋಗಿ ಶಿವ. ದಲಿತ ಮತ್ತು ಕೆಳವರ್ಗದ ಸಮುದಾಯದಿಂದ ಬಂದ ಶಿವನ ಜ್ಞಾನವನ್ನುಇಡೀ ಜಗತ್ತಿಗೆ ಪೌರಾಣಿಕ ಕಲ್ಪನೆಯಲ್ಲಿ ತಲುಪಿಸಿದವರು ವ್ಯಾಸ ಮಹರ್ಷಿಗಳು ಎಂದರು.ಪ್ರವಚನಕಾರ ಶರಣಬಸವ ದೇವರು ಮಾತನಾಡಿ, ಶರಣ ಸಂಸ್ಕೃತಿ ಮತ್ತು ವಚನ ಸಾಹಿತ್ಯಕ್ಕೆ ಹಡಪದ ಅಪ್ಪಣ್ಣ ಹಾಗೂ ಹಡಪದ ಲಿಂಗಮ್ಮನವರ ಕೊಡುಗೆ ಅನನ್ಯವಾದುದು. ಬಸವಣ್ಣನವರ ಜತೆ ನಿಕಟ ಬಾಂಧವ್ಯ ಹೊಂದಿದ್ದ ಅಪ್ಪಣ್ಣನವರು ಮತ್ತು ಆಧ್ಯಾತ್ಮಿಕ ಎತ್ತರಕ್ಕೇರಿದ ಲಿಂಗಮ್ಮನವರ ತತ್ತ್ವಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದರು.
ವೈದ್ಯ ಡಾ. ಅನ್ನದಾನಿ ಮೇಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಡಪದ ಅಪ್ಪಣ್ಣ ಅವರು ಮತ್ತು ಬಸವಾದಿ ಶರಣರು ವಚನಗಳ ಮೂಲಕ ಸಮಸಮಾಜ ಕಟ್ಟುವುದಕ್ಕೆ ಶ್ರಮವಹಿಸಿದರು ಎಂದರು.ತಾಲೂಕು ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ಈರಣ್ಣ ಹಡಪದ ಮಾತನಾಡಿ, ಗುರುವಿನ ಸೇವೆ ಮಾಡಿದರೆ ನಮಗೆ ಸಂಸ್ಕಾರ ದೊರೆಯುತ್ತದೆ. ಗುರು ಕರುಣೆಯಿಂದ ಬದುಕಿನಲ್ಲಿ ಸನ್ಮಾರ್ಗ ಕಂಡುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದರು.
ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹಾಗೂ ಶರಣಬಸವ ದೇವರಿಗೆ ಭಕ್ತರಿಂದ ಗುರುವಂದನೆ ಸಲ್ಲಿಸಲಾಯಿತು. ಕಸ್ತೂರೆವ್ವ ನಾವಿ, ಸಿ.ಕೆ. ಗಣಪ್ಪನವರ, ಎಸ್.ಎಸ್. ಗಡ್ಡದ, ಕೊಟ್ರೇಶ ಅಂಗಡಿ, ಶಿವಯೋಗಿ ಕೊಪ್ಪಳ, ಪಾಲಾಕ್ಷಿ ಗಣದಿನ್ನಿ, ವೀರೇಶ ಕೊಳೂರಮಠ ಉಪಸ್ಥಿತರಿದ್ದರು.