ಗದಗ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕಂದಾಯ, ಆಡಳಿತ ಹಾಗೂ ಇಲಾಖಾ ಕಾರ್ಯಕಲಾಪಗಳ ಪ್ರಗತಿ ಪರಿಶೀಲನಾ ಸಭೆ ಬೆಳಗಾವಿ ಪ್ರಾದೇಶಿಕ ಆಯುಕ್ತೆ ಜಾನಕಿ ಅಧ್ಯಕ್ಷತೆಯಲ್ಲಿ ನಡೆಯಿತು.

ಗದಗ: ಸಾರ್ವಜನಿಕ ಸೇವೆ ಮತ್ತು ಬಾಕಿ ಕಡತಗಳ ವಿಲೇವಾರಿಯಲ್ಲಿ ಅನಗತ್ಯ ವಿಳಂಬ ಧೋರಣೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ, ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಬಾರದು ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ. ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಕಂದಾಯ, ಆಡಳಿತ ಹಾಗೂ ಇಲಾಖಾ ಕಾರ್ಯಕಲಾಪಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಭೆಯಲ್ಲಿ ಇಲಾಖಾವಾರು ಪರಿಶೀಲನೆ ನಡೆಸಿದ ಆಯುಕ್ತರು, ವಿವಿಧ ವಿಭಾಗಗಳಲ್ಲಿ ಬಾಕಿ ಉಳಿದಿರುವ ಆಡಳಿತಾತ್ಮಕ ಕಡತಗಳು, ಸಾರ್ವಜನಿಕ ಅರ್ಜಿಗಳು ಹಾಗೂ ಜಮೀನು ಮತ್ತು ಕಂದಾಯಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳ ಕುರಿತು ಸುದೀರ್ಘವಾಗಿ ಚರ್ಚಿಸಿದರು.

ಹಲವು ವರ್ಷಗಳಿಂದ ಅಥವಾ ತಿಂಗಳುಗಳಿಂದ ವಿಲೇವಾರಿಯಾಗದೇ ಬಾಕಿ ಉಳಿದಿರುವ ಕಡತಗಳನ್ನು ತಕ್ಷಣವೇ ಪರಿಶೀಲಿಸಿ, ನಿಯಮಾನುಸಾರ ವಿಲೇವಾರಿ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಹಾಗೂ ಅಪೀಲುಗಳಿಗೆ ಸಂಬಂಧಿಸಿದಂತೆ ನಿಗದಿತ ಸಮಯದೊಳಗೆ ನಿಖರವಾದ ಮಾಹಿತಿ ಒದಗಿಸಬೇಕು. ಅರ್ಜಿಗಳನ್ನು ಅನಗತ್ಯವಾಗಿ ಮುಂದೂಡುವ ಧೋರಣೆ ಬಿಡಬೇಕು. ಅಧಿಕಾರಿಗಳು ಕೇವಲ ಕಚೇರಿಯ ಕಡತಗಳಿಗಷ್ಟೇ ಸೀಮಿತವಾಗದೆ, ಅಗತ್ಯವಿದ್ದಲ್ಲಿ ಖುದ್ದು ಸ್ಥಳ ಪರಿಶೀಲನೆ ನಡೆಸಬೇಕು. ಉಪವಿಭಾಗ ಮಟ್ಟದಲ್ಲಿ ನಿಯಮಿತವಾಗಿ ಸಭೆಗಳನ್ನು ನಡೆಸಿ ಕಂದಾಯ ಪ್ರಗತಿ ಸಾಧಿಸಬೇಕು ಎಂದು ಹೇಳಿದರು.

ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ಪ್ರಸಿದ್ಧ ಹಾಗೂ ಸರ್ಕಾರದ ನಿಯಂತ್ರಣದಲ್ಲಿರುವ ದೇವಾಲಯಗಳಲ್ಲಿ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸುಸೂತ್ರವಾಗಿ ಸೇವೆಗಳನ್ನು ತಲುಪಿಸಬೇಕು. ಅರ್ಚಕರು, ದೇವಾಲಯದ ಸಿಬ್ಬಂದಿ ಹಾಗೂ ತಹಸೀಲ್ದಾರ್‌ಗಳು ಆಡಳಿತಾತ್ಮಕ ಜವಾಬ್ದಾರಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು.

ಆಧಾರ್ ಹಾಗೂ ಆರ್‌ಟಿಸಿ ಜೋಡಣೆ: ಅರ್ಚಕರು ಹಾಗೂ ದೇವಾಲಯದ ಆಸ್ತಿ, ಸೇವೆಗಳಿಗೆ ಸಂಬಂಧಿಸಿದಂತೆ ಆಧಾರ್ ಮತ್ತು ಭೂ ದಾಖಲೆಗಳ (ಆರ್‌ಟಿಸಿ) ಮಾಹಿತಿಗಳನ್ನು ಕಡ್ಡಾಯವಾಗಿ ನವೀಕರಿಸಿ ಸರಿಪಡಿಸಬೇಕು ಎಂದು ಹೇಳಿದರು.

ತಹಸೀಲ್ದಾರ್ ಮತ್ತು ಶಿರಸ್ತೇದಾರರ ಜವಾಬ್ದಾರಿ: ತಾಲೂಕು ಮಟ್ಟದಲ್ಲಿ ತಹಸೀಲ್ದಾರ್‌ಗಳು ಹಾಗೂ ಗ್ರೇಡ್-2 ತಹಸೀಲ್ದಾರ್‌ಗಳು ದೇವಾಲಯಗಳ ಪೂಜಾ ವಿಧಿ-ವಿಧಾನಗಳು ಮತ್ತು ಸಿಬ್ಬಂದಿ ನಿರ್ವಹಣೆಯ ಪ್ರಗತಿಯನ್ನು ಖುದ್ದಾಗಿ ಪರಿಶೀಲಿಸಬೇಕು. ದೇವಾಲಯಗಳ ಸುರಕ್ಷತೆಗೆ ಹಾಗೂ ಪಾರದರ್ಶಕತೆಗೆ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಿ, ನಿರಂತರವಾಗಿ ಮಾನಿಟರ್ ಮಾಡಬೇಕು. ದೇವಾಲಯಗಳ ಆದಾಯ, ಹುಂಡಿ ಎಣಿಕೆ ಹಾಗೂ ಖರ್ಚು-ವೆಚ್ಚಗಳ ಲೆಕ್ಕಪತ್ರಗಳನ್ನು ನಿಯಮಿತವಾಗಿ ಪರಿಶೋಧಿಸಿ ವರದಿ ಸಲ್ಲಿಸಬೇಕು ಎಂದರು.

ಈ ವೇಳೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್‌ ಮಾತನಾಡಿದರು. ಧಾರ್ಮಿಕ ದತ್ತಿ ಹಾಗೂ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳ ಆಡಳಿತಾತ್ಮಕ ವಿಷಯಗಳು, ತಹಸೀಲ್ದಾರ್ ಹಾಗೂ ಮುಜರಾಯಿ ಅಧಿಕಾರಿಗಳ ಕರ್ತವ್ಯ ನಿರ್ವಹಣೆ ಮತ್ತು ವಿವಿಧ ಸೇವೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಉಪವಿಭಾಗಾಧಿಕಾರಿ ಗಂಗಪ್ಪ ಎಂ., ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರು ಇದ್ದರು.