ಲಕ್ಷ್ಮೇಶ್ವರ: ಕನ್ನಡ ನಾಡು ನುಡಿಗೆ ಹೋರಾಡಿದ ಮಹನೀಯರ ಹೆಸರುಗಳನ್ನು ನಾಡಿನ ವಿವಿಧ ವಿಮಾನ ನಿಲ್ದಾಣಗಳಿಗೆ ನಾಮಕರಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡಬೇಕು ಎಂದು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದ ಅಸ್ಮಿತಗೆ ಕೊಡುಗೆ ನೀಡಿದ ನಾಡಿನ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಕಿತ್ತೂರು ಚೆನ್ನಮ್ಮ, ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣ, ಕಿತ್ತೂರಿನ ಸ್ವಾತಂತ್ರ್ಯಕ್ಕಾಗಿ ಜೀವ ತೆತ್ತ ಸಂಗೊಳ್ಳಿ ರಾಯಣ್ಣ, ರಾಷ್ಟ್ರಕವಿ ಕುವೆಂಪು, ಡಾ. ರಾಜಕುಮಾರ ಅವರ ಹೆಸರುಗಳನ್ನು ರಾಜ್ಯದ ವಿವಿಧ ವಿಮಾನ ನಿಲ್ದಾಣಗಳಿಗೆ ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.

ಕಳೆದ 20 ವರ್ಷಗಳಿಂದ ನಾಮಕರಣ ವಿಷಯದಲ್ಲಿ ಹೋರಾಟ‌ ಮಾಡುತ್ತಾ ಬಂದಿದ್ದೇವೆ. ಈಗ ಧಾರವಾಡ ಜಿಲ್ಲೆಯ ಅಕ್ಕಪಕ್ಕದ ಜಿಲ್ಲೆಯ ಜನರನ್ನು ಒಗ್ಗೂಡಿಸಿ ಹೋರಾಟ ಮಾಡುವ ಮೂಲಕ ಇನ್ನಷ್ಟು ವೇಗ ನೀಡುವ ಉದ್ದೇಶದಿಂದ ಇಲ್ಲಿ ಪತ್ರಿಕಾಗೋಷ್ಠಿ ನಡೆಸುವುದಾಗಿ ತಿಳಿಸಿದರು.

ಈ ಕುರಿತು ಮೇ 2ರಂದು ಹುಬ್ಬಳ್ಳಿಯ ಕ್ಯುಬಿಕ್ಸ್‌ ಹೋಟೆಲ್‌ನಲ್ಲಿ ಪೂರ್ವಭಾವಿ ಸಭೆ ಮಾಡುವುದಾಗಿ ತಿಳಿಸಿದರು. ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಚಲನಚಿತ್ರ ನಟರು, ಶಾಸಕರು, ಗಣ್ಯರು ಭಾಗವಹಿಸುವರು ಎಂದರು.

ಈ ವೇಳೆ ಸೋಮಣ್ಣ ಬೆಟಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಕಲ್ಲೂರ, ಫಕ್ಕೀರಪ್ಪ ಮದ್ರಾಸಿ, ಶೇಖಣ್ಣ ಕಾಳೆ, ಶರಣು ಗೋಡಿ, ನಾಗೇಶ್ ಅಮರಾಪೂರ, ಮುದಕಣ್ಣ ಗದ್ದಿ, ಯುವ ಮುಖಂಡ ನೀಲಪ್ಪ ಪಡಗೇರಿ ಇದ್ದರು. ಮೇ 24ರಂದು ವೀರಶೈವ ಲಿಂಗಾಯತ ಮಹಾಸಭೆಗೆ ಚುನಾವಣೆ


ನರಗುಂದ: ಮೇ 24ರಂದು ಅಖಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಲಿದೆ. ಒಟ್ಟು 21 ಸ್ಥಾನಗಳಿವೆ. 1 ಅಧ್ಯಕ್ಷ ಸ್ಥಾನ, 20 ಕಾರ್ಯಕಾರಿ ಸಮಿತಿ ಸದ್ಯಸರ ಆಯ್ಕೆ ನಡೆಯಲಿದೆ. ಇದರಲ್ಲಿ 13 ಪುರುಷರು, 7 ಮಹಿಳೆಯರು ಸ್ಪರ್ಧೆಗೆ ಅವಕಾಶವಿದೆ.ನಾಮಪತ್ರ ಸಲ್ಲಿಸಲು ಏ. 29ರಿಂದ ಮೇ 6ರ ವರೆಗೆ, ನಾಮಪತ್ರ ಪರಿಶೀಲನೆ ಮೇ 7ರಂದು ನಡೆಯಲಿದೆ. ಮೇ 10ರಂದು ನಾಮಪತ್ರ ಹಿಂಪಡೆಯಬಹುದು. ಮತದಾನ ಮೇ 24ರಂದು ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಎಸ್.ಆರ್. ಪಾಟೀಲ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.