ಕುಷ್ಟಗಿ ತಾಲೂಕಿನಲ್ಲಿ ಮೆಕ್ಕೆಜೋಳ ಮತ್ತು ತೊಗರಿಬೇಳೆ ಬೆಳೆದ ಲಕ್ಷಾಂತರ ರೈತರು ಮಾರುಕಟ್ಟೆ ದರ ಕುಸಿತದಿಂದ ನಷ್ಟದ ಅಂಚಿನಲ್ಲಿ ನಿಂತಿರುವ ಹಿನ್ನೆಲೆಯಲ್ಲಿ, ಸರ್ಕಾರ ತಕ್ಷಣ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ನಜೀರಸಾಬ ಮೂಲಿಮನಿ ಹೇಳಿದರು.

ಹನುಮಸಾಗರ: ತಾಲೂಕಿನಲ್ಲಿ ಮೆಕ್ಕೆಜೋಳ ಮತ್ತು ತೊಗರಿಬೇಳೆ ಬೆಳೆದ ಲಕ್ಷಾಂತರ ರೈತರು ಮಾರುಕಟ್ಟೆ ದರ ಕುಸಿತದಿಂದ ನಷ್ಟದ ಅಂಚಿನಲ್ಲಿ ನಿಂತಿರುವ ಹಿನ್ನೆಲೆಯಲ್ಲಿ, ಸರ್ಕಾರ ತಕ್ಷಣ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ನಜೀರಸಾಬ ಮೂಲಿಮನಿ ಹೇಳಿದರು.

ಗ್ರಾಮದ ಎಪಿಎಂಸಿ ಆವರಣದಲ್ಲಿ ಸೋಮವಾರ ನಡೆದ ರೈತ ನಾಯಕರ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು. ಈ ಬಾರಿ ಕೊಪ್ಪಳ ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆ ಅತ್ಯಧಿಕ ಪ್ರಮಾಣದಲ್ಲಿ ಬೆಳೆದಿದ್ದರೂ, ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ದರ ಅತಿ ಕಡಿಮೆ ಇರುವುದನ್ನು ಅರ್ಧಕ್ಕಿಂತ ಹೆಚ್ಚು ರೈತರು ಈಗಾಗಲೇ ಮಾರಾಟಕ್ಕೆ ಮುಂದಾಗಿದ್ದಾರೆ. ಆದರೆ ದರವು ಉತ್ಪಾದನಾ ವೆಚ್ಚವನ್ನೂ ಮುಚ್ಚದ ಮಟ್ಟಿಗೆ ಇಳಿದಿದೆ. ಮೆಕ್ಕೆಜೋಳ ಬೆಳೆದ ರೈತರು ಕಂಗಾಲಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಪ್ರತಿ ಕ್ವಿಂಟಲ್‌ಗೆ ₹1000 ಧನಸಹಾಯ ನೀಡಬೇಕು. ಮೆಕ್ಕೆಜೋಳದ ಕಡಿಮೆ ದರದಿಂದಾದ ನಷ್ಟ ಪರಿಗಣಿಸಿ, ತೊಗರಿಬೇಳೆ ಖರೀದಿ ಕೇಂದ್ರವೂ ತಕ್ಷಣ ತೆರೆಯಬೇಕು. ತೊಗರಿಬೇಳೆ ಬೆಳೆದ ರೈತರು ಸರ್ಕಾರದ ನಿರ್ಲಕ್ಷ್ಯದಿಂದ ಗೊಂದಲದಲ್ಲಿ ಸಿಲುಕಿದ್ದಾರೆ. ತೊಗರಿಗೂ ಖರೀದಿ ಕೇಂದ್ರ ತೆರೆಯುವಲ್ಲಿ ಮಂದಗತಿ ಕಂಡುಬರುತ್ತಿದೆ. ರೈತರನ್ನು ಅಂತರಾಳಕ್ಕೆ ತಳ್ಳುವ ಕೆಲಸ ನಿಲ್ಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ರೈತ ಮುಖಂಡರು ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ 22ಕ್ಕೂ ಹೆಚ್ಚು ಬೆಳೆಗಳನ್ನು ಬೆಳೆಯುತ್ತಾರೆ. ಆದರೆ ಸೂಕ್ತ ದರ ಮಾತ್ರ ಸಿಗುತ್ತಿಲ್ಲ. ಸೂಕ್ತ ಬೆಲೆ ನಿಗದಿ ಇಲ್ಲದಿರುವುದು. ಸರ್ಕಾರದ ಬೆಂಬಲದ ಸಾಲು ಸಾಲಿನ ಕೊರತೆ, ಮಾರುಕಟ್ಟೆಯ ಅನಿಶ್ಚಿತತೆ ಇವೆಲ್ಲವೂ ರೈತರ ಬದುಕನ್ನು ಕುಗ್ಗಿಸುತ್ತಿವೆ. ಕೆಲವು ಜಿಲ್ಲೆಗಳಲ್ಲಿ ಮಳೆಯ ಅತಿಯಾಗಿ ಬೆಳೆ ನಾಶವಾಗಿದ್ದು, ಕೆಲವೆಡೆ ಮಳೆ ಬರದೇ ಬೆಳೆ ಒಣಗಿ ಹಾನಿಯಾಗಿದೆ. ಇದರಿಂದ ರೈತರು ದ್ವಿಗುಣ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಎಚ್ಚರಗೊಳ್ಳಬೇಕು. ರೈತನ ಕಷ್ಟಕ್ಕೆ ರಾಜಕೀಯದ ಬಣ್ಣ ಹಚ್ಚಬಾರದು. ಸರಿಯಾದ ದರ, ಸಮಯಕ್ಕೆ ಖರೀದಿ ಕೇಂದ್ರ ಹಾಗೂ ಹಾನಿಗೆ ಪರಿಹಾರ ಇವು ಸರ್ಕಾರದ ಕರ್ತವ್ಯ. ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಯಮನೂರಪ್ಪ ಮಡಿವಾಳರ, ಶರಣಪ್ಪ ಬಾಚಲಾಪುರ, ಬಸವರಾಜ ಮೋಟಗಿ, ಮುತ್ತಣ್ಣ ಹಲಕುಲಿ, ಮುತ್ತಣ್ಣ ಕಟಗಿ, ಇಸ್ಮಾಯಿಲ್ ಸಾಬ್ ತಹಶೀಲ್ದಾರ್, ಹಸನಸಾಬ ಕಸಾಬ, ಕಾಡಪ್ಪ ಗದ್ದಿ, ಮಂಜುನಾಥ್ ಎಮ್ಮಿ, ಯಮನೂರು ಮುದುಗಲ್ಲ ಇದ್ದರು.