ಸನ್ಮಾರ್ಗದಿಂದ ಮುನ್ನೆಡೆಯಲು ಭಗವದ್ಗೀತೆ ಪ್ರೇರಣೆ ನೀಡುತ್ತದೆ.
ಭಗವದ್ಗೀತಾ ಅಭಿಯಾನ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಯಲ್ಲಾಪುರಭಗವದ್ಗೀತೆಯು ನಮ್ಮ ಜೀವನಕ್ಕೆ ಮಾರ್ಗದರ್ಶಿಯಾಗಿದೆ. ಸನ್ಮಾರ್ಗದಿಂದ ಮುನ್ನೆಡೆಯಲು ಭಗವದ್ಗೀತೆ ಪ್ರೇರಣೆ ನೀಡುತ್ತದೆ ಎಂದು ದುಬೈನ ಅಬುದಾಬಿ ನಗರದ ಬ್ರಾಹ್ಮಣ ಸಭಾದ ಪ್ರಮುಖ ಅನಂತ ಭಟ್ಟ ಬಾಲೀಗದ್ದೆ ಹೇಳಿದರು.
ಪಟ್ಟಣದ ನಾಯಕನಕೆರೆ ಶಾರದಾಂಬಾ ಪಾಠಶಾಲಾ ಸಭಾಭವನದಲ್ಲಿ ನಡೆದ ಭಗವದ್ಗೀತಾ ಅಭಿಯಾನದ ತಾಲೂಕಾ ಮಟ್ಟದ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ನಮ್ಮ ಸನಾತನ ಧರ್ಮವು ಅವಿನಾಶಿ ಹಾಗೂ ನಿತ್ಯ ಸತ್ಯವಾಗಿದೆ. ನಮ್ಮ ಚಿತ್ತ ಶುದ್ಧಿ ಇದ್ದರೆ ನಮಗೆ ಭಗವಂತನ ಅನುಗ್ರಹ ದೊರೆಯುತ್ತದೆ. ಕೇವಲ ಹಣ ಗಳಿಸುವ ಉದ್ದೇಶದಿಂದ ಯಾವುದೇ ಕೆಲಸ ಮಾಡಿದರೂ ಅದು ನಮ್ಮ ಜೀವನಕ್ಕೆ ಸಾರ್ಥಕತೆ ತರುವುದಿಲ್ಲ. ಭಗವದ್ಗೀತೆಯ ಸಂದೇಶಗಳನ್ನು ಜಿವನದಲ್ಲಿ ಅಳವಡಿಸಿಕೊಂಡರೆ ಜೀವನ ಧನ್ಯವಾಗುತ್ತದೆ. ಜ್ಞಾನದ ದರ್ಶನವಾಗುತ್ತದೆ. ಭಗವದ್ಗೀತೆಯನ್ನು ನಿತ್ಯ ಓದಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕಾ ಭಗವದ್ಗೀತಾ ಅಭಿಯಾನ ಸಮಿತಿಯ ಅಧ್ಯಕ್ಷ ಜಿ.ಎನ್. ಭಟ್ಟ ತಟ್ಟಿಗದ್ದೆ ಮಾತನಾಡಿ, ಸ್ವರ್ಣವಲ್ಲೀ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಭಗವದ್ಗೀತಾ ಅಭಿಯಾನಕ್ಕೆ ಈ ವರ್ಷ ಯಲ್ಲಾಪುರ ತಾಲೂಕಿನಲ್ಲಿ ಉತ್ತಮ ಸ್ಪಂದನೆ ದೊರೆತಿದೆ. ತಾಲೂಕಿನಾದ್ಯಂತ ೪೦೦ಕ್ಕೂ ಹೆಚ್ಚು ಸ್ಥಳಗಳಲ್ಲಿ ಅಭಿಯಾನ ರೂಪದಲ್ಲಿ ಗೀತಾ ಆರಾಧನೆ ಅತ್ಯಂತ ಉತ್ಸಾಹದಿಂದ ನಡೆದಿದೆ. ಈ ಮೂಲಕ ರಾಜ್ಯದಲ್ಲಿಯೇ ಅತೀ ಹೆಚ್ಚು ಕೇಂದ್ರಗಳಲ್ಲಿ ಅಭಿಯಾನ ನಡೆದ ತಾಲೂಕು ಎಂಬ ಹೆಗ್ಗಳಿಕೆಗೆ ಯಲ್ಲಾಪುರ ತಾಲೂಕು ಪಾತ್ರವಾಗಿದೆ ಎಂದರು.ವೇದಿಕೆಯಲ್ಲಿ ಭಗವದ್ಗೀತಾ ಅಭಿಯಾನದ ಪ್ರಮುಖರಾದ ಡಾ. ಶಂಕರ ಭಟ್ಟ ಬಾಲೀಗದ್ದೆ, ಕೆ.ಜಿ. ಬೋಡೆ, ಎಸ್.ವಿ. ಭಟ್ಟ, ಕೆ.ಟಿ. ಹೆಗಡೆ, ವಿ.ಟಿ. ಭಟ್ಟ, ದೇವಾಲಯದ ವ್ಯವಸ್ಥಾಪಕ ಎನ್.ಎಸ್. ಭಟ್ಟ, ಪಾಠಶಾಲೆಯ ಅಧ್ಯಾಪಕರಾದ ಡಾ. ಶಿವರಾಮ ಭಾಗ್ವತ್, ರಮಾ ದೀಕ್ಷಿತ ಮುಂತಾದವರು ಇದ್ದರು. ಅಭಿಯಾನ ಸಮಿತಿಯ ಪ್ರಮುಖ ಲಕ್ಷಿನಾರಾಯಣ ಗುಮ್ಮಾನಿ ನಿರ್ವಹಿಸಿದರು.