ಕನ್ನಡಪ್ರಭ ವಾರ್ತೆ ಮದ್ದೂರು
ಕೆಆರ್‌ಎಸ್ ಜಲಾಶಯದಿಂದ ನಾಲೆಗಳ ಮೂಲಕ ಕೊನೇ ಭಾಗದ ಜಮೀನುಗಳಿಗೆ ನೀರು ಹರಿಸಿ ಬೆಳೆ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ ತಾಲೂಕಿನ ರೈತ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಬೆಳಗ್ಗೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ರೈತ ಸಂಘದ ಮುಖಂಡ ಕೀಳಘಟ್ಟ ನಂಜುಂಡಯ್ಯ ಹಾಗೂ ಅಣ್ಣೂರು ಮಹೇಂದ್ರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪಟ್ಟಣದ ಶಿವಪುರದ ಕೊಪ್ಪ ವೃತ್ತದ ಬೆಂಗಳೂರು- ಮೈಸೂರು ಹಳೇ ಹೆದ್ದಾರಿಯಲ್ಲಿ ಪ್ರತಿಭಟನೆಗಿಳಿದು ಕೆಲ ಕಾಲ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಜಿಲ್ಲೆಯ ಕಾಂಗ್ರೆಸ್ ಶಾಸಕರುಗಳ ವಿರುದ್ಧ ಘೋಷಣೆ ಕೂಗಿ ಕೆಆರ್ ಎಸ್ ಜಲಾಶಯದಿಂದ ತಾಲೂಕಿನ ಎಲ್ಲಾ ನಾಲೆಗಳ ಮೂಲಕ ನೀರುಹರಿಸಿ ಒಣಗುತ್ತಿರುವ ಕಬ್ಬು, ಭತ್ತ ,ರಾಗಿ, ಹಾಗೂ ರೇಷ್ಮೆ ಬೆಳೆ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಸೋ.ಶಿ.ಪ್ರಕಾಶ್, ಪ್ರಭುಲಿಂಗ, ಸಿದ್ದೇಗೌಡ, ಶೆಟ್ಟಿಹಳ್ಳಿ ಚಿಕ್ಕಮರಿಗೌಡ, ರಾಮಣ್ಣ, ಬೂದನೂರು ಪುಟ್ಟಸ್ವಾಮಿ, ನಿಂಗೇಗೌಡ ಮತ್ತಿತರರು ಭಾಗವಹಿಸಿದ್ದರು.ನಂತರ ರೈತರು ರೈಲಿನ ಮೂಲಕ ರಾಮನಗರ ಜಿಲ್ಲೆಯ ಬಿಡದಿಯ ಬೈರಮಂಗಲಕ್ಕೆ ತೆರಳಿ ಬಿಡದಿ ಟೌನ್ ಶಿಪ್ ವಿರೋಧಿಸಿ ಅಲ್ಲಿನ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ಯಾವುದೇ ಕಾರಣಕ್ಕೂ ಟೌನ್ ಶೀಪ್ ನಿರ್ಮಾಣಕ್ಕೆ ಅವಕಾಶ ನೀಡಬೇಡಿ. ನಿಮ್ಮ ಹೋರಾಟಕ್ಕೆ ಮಂಡ್ಯ ಜಿಲ್ಲೆಯ ರೈತರ ಸಂಪೂರ್ಣ ಬೆಂಬಲವಿದೆ ಎಂದು ರೈತರಿಗೆ ಆತ್ಮಸ್ಥೈರ್ಯ ತುಂಬಿದರು.