ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಸಚಿವ ಸ್ಥಾನ ದೊರೆಯಲಿ ಎಂದು ಪ್ರಾರ್ಥಿಸಿ ಹಲಗೂರು ಗ್ರಾಪಂ ಮಾಜಿ ಸದಸ್ಯ ಜಮೀಲ್ ಪಾಷಾ ಅವರಿಂದ ಹಜರತ್-ಇ-ಸೈದಿನ ಮರ್ದಾನೆ ಗೈಬ್ ದರ್ಗಾದಲ್ಲಿ ವಿಶೇಷ ಪೂಜೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಸಚಿವ ಸ್ಥಾನ ದೊರೆಯಲಿ ಎಂದು ಪ್ರಾರ್ಥಿಸಿ ಹಲಗೂರು ಗ್ರಾಪಂ ಮಾಜಿ ಸದಸ್ಯ ಜಮೀಲ್ ಪಾಷಾ ದರ್ಗಾದಲ್ಲಿ ಸೋಮವಾರ ವಿಶೇಷ ಪೂಜೆ ಸಲ್ಲಿಸಿದರು.

ಮಳವಳ್ಳಿ ಸಮೀಪದ ಶಿವನಸಮುದ್ರ ಬಳಿಯ ಹಜರತ್-ಇ-ಸೈದಿನ ಮರ್ದಾನೆ ಗೈಬ್ ದರ್ಗಾದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ಕಳೆದ 40 ವರ್ಷಗಳಿಂದಲೂ ಕಾಂಗ್ರೆಸ್ ಬಲವರ್ಧನೆಗಾಗಿ ಶಾಸಕ ನರೇಂದ್ರಸ್ವಾಮಿ ಅವರು ಶ್ರಮಿಸುತ್ತಲೇ ಬಂದಿದ್ದಾರೆ ಎಂದರು.

ಜೆಡಿಎಸ್ ಪ್ರಬಲವಿರುವ ಮಂಡ್ಯ ಜಿಲ್ಲೆಯಲ್ಲಿ ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲಾದ್ಯಂತ ಪಕ್ಷವನ್ನು ಸಂಘಟಿಸಿ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಪಿ.ಎಂ.ನರೇಂದ್ರಸ್ವಾಮಿ ಪಾತ್ರ ಅಪಾರವಾಗಿದೆ. ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಪದವೀಧರರ ಕ್ಷೇತ್ರ ಮತ್ತು ಸ್ಥಳೀಯ ಸಂಸ್ಥೆಯ ಸ್ಥಾನಗಳನ್ನು ಗೆಲ್ಲುವ ಜೊತೆಗೆ ಮತ್ತು ಎಂಡಿ‌ಸಿಸಿ ಬ್ಯಾಂಕ್ ಮತ್ತು ಮನ್ಮುಲ್ ಸೇರಿದಂತೆ ಸಹಕಾರಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ದೊರಕಿಸಿಕೊಡುವಲ್ಲಿ ಶಾಸಕರ ಸಾಕಷ್ಟು ಶ್ರಮವಿದೆ ಎಂದು ಹೇಳಿದರು.

ವಿವಿಧ ಖಾಸಗಿ ಕಂಪನಿಗಳ ಸಿಎಸ್ಆರ್ ಅನುದಾನ ತರುವ ಮೂಲಕ ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಿ, ಮಲ್ಟಿ ಮೀಡಿಯಾ ವ್ಯವಸ್ಥೆ ಕಲ್ಪಿಸಿ ಡಿಜಿಟಲ್ ಸ್ಪರ್ಶ ನೀಡಿದ್ದಾರೆ. ಕ್ಷೇತ್ರದಲ್ಲಿ ಶಿಕ್ಷಣ ಕ್ರಾಂತಿಗೆ ಪಣ ತೊಟ್ಟಿದ್ದಾರೆ. ಜನರ ಪರ ಕೆಲಸ ಮಾಡುತ್ತಾ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇವರ ಅನುಭವ ಆಧರಿಸಿ ಮುಂದಿನ ಮಂತ್ರಿ ಮಂಡಲದಲ್ಲಿ ನರೇಂದ್ರಸ್ವಾಮಿ ಅವರಿಗೆ ಸಚಿವ ಸ್ಥಾನ ದೊರಕಲಿ ಎಂದು ಇಂದು ಪೂಜೆ ಸಲ್ಲಿಸುತ್ತಿರುವುದಾಗಿ ಹೇಳಿದರು.

ಈ ವೇಳೆ ಮಾಜಿ ಪುರಸಭಾ ಸದಸ್ಯ ನೂರುಲ್ಲಾ, ಮುಖಂಡರಾದ ಅಸ್ಗರ್, ಮುನೀರ್, ತನ್ವೀರ್, ಮಸೂದ್ ಪಾಷಾ, ಯಾಸೀರ್ ಸೇರಿದಂತೆ ಹಲವರು ಭಾಗವಹಿಸಿದ್ದರು.