ನರಗುಂದ: ಉತ್ತರ ಕರ್ನಾಟಕದಲ್ಲಿ ಹೋರಾಟದ ನಾಡು ಎಂದು ಕರೆಯುವ ನರಗುಂದಕ್ಕೆ ಹೊಸ ರೈಲ್ವೆ ಮಾರ್ಗ ಪ್ರಾರಂಭ ಮಾಡಬೇಕೆಂದು ರೈಲ್ವೆ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಚನ್ನು ನಂದಿ ಅವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಿದರು.
ಭಾನುವಾರ ಪಟ್ಟಣದ ಶಾಸಕ ಸಿ.ಸಿ. ಪಾಟೀಲರ ನಿವಾಸಕ್ಕೆ ಖಾಸಗಿ ಕಾರ್ಯಕ್ರಮ ನಿಮಿತ್ತ ಆಗಮಿಸಿದ್ದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ನೀಡಿ ಮಾತನಾಡಿ, 1857ರಲ್ಲಿ ಈ ಭಾಗದ ವೀರ ಬಾಬಾಸಾಹೇಬರು ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದರು. 1980ರಲ್ಲಿ ರೈತ ವಿರೋಧಿ ಸರ್ಕಾರಗಳ ವಿರುದ್ಧ ರೈತರು ರೈತ ಹೋರಾಟ ಮಾಡಿದ ನಾಡು ನರಗುಂದವಾಗಿದೆ.ಮೇಲಾಗಿ ಕರ್ನಾಟಕ ಕೇಸರಿ ಎಂದು ಕರೆಯುವ ಜಗನ್ನಾಥರಾವ ಜೋಶಿ ಅವರ ಜನ್ಮಸ್ಥಳವಾಗಿದೆ. ಈ ಭಾಗದಲ್ಲಿ ಪ್ರಸಿದ್ಧ ದೇವಾಲಯಗಳಾದ ಯಲ್ಲಮ್ಮನಗುಡ್ಡ, ಗೊಡಚಿ ವೀರಭದ್ರಶ್ವರ ದೇವಸ್ಥಾನ, ರೋಣ ತಾಲೂಕಿನ ಇಟಗಿ ಭೀಮಾಂಬಿಕಾದೇವಿ ದೇವಸ್ಥಾನಗಳಿಗೆ ಪ್ರತಿವರ್ಷ ಲಕ್ಷಾಂತರ ಭಕ್ತರು ಬರುತ್ತಾರೆ.
ಸದ್ಯ ನರಗುಂದವು ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿದೆ. ಘಟಪ್ರಭಾದಿಂದ ನರಗುಂದ ಮಾರ್ಗವಾಗಿ ಕುಷ್ಟಗಿಯವರೆಗೆ ಹೊಸ ರೈಲ್ವೆ ಮಾರ್ಗ ಪ್ರಾರಂಭಿಸಬೇಕೆಂದು ಮನವಿ ಮಾಡಿದರು.ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ರೈಲ್ವೆ ಹೋರಾಟಗಾರರ ಮನವಿ ಸ್ವೀಕರಿಸಿ, ಈ ಬಗ್ಗೆ ಈಗಾಗಲೇ ಕೇಂದ್ರ ಸಚಿವ ಸಂಪುಟದಲ್ಲಿ ಚರ್ಚೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಸಿ.ಸಿ. ಪಾಟೀಲ, ರೈಲ್ವೆ ಹೋರಾಟ ಸಮಿತಿಯ ಪದಾಧಿಕಾರಿಗಳಾದ ರಾಘವೇಂದ್ರ ಗುಜಮಾಗಡಿ, ನಾಗೇಶ ಅಪೋಜಿ, ಜೆ.ಆರ್. ಕದಂ, ಮಾರುತಿ ಭೋಸಲೆ, ವಿಠಲ ಮುಧೋಳೆ, ವಾಸು ಜೋಗಣ್ಣವರ, ಶಿವಾನಂದ ಮುತ್ತವಾಡ, ಉಮೇಶಗೌಡ ಪಾಟೀಲ, ಇದ್ದರು.ಪ್ರತಿಭಾ ಪುರಸ್ಕಾರ: ನಾಳೆ ಪೂರ್ವಭಾವಿ ಸಭೆ ಶಿರಹಟ್ಟಿ: ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ತಾಲೂಕು ಘಟಕದ ಆಶ್ರಯದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ತೇರ್ಗಡೆ ಹೊಂದಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮವನ್ನು ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ತುಳಿ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ.ಜೂ. ೧೦ರಂದು ತಾಲೂಕಿನ ಬೆಳ್ಳಟ್ಟಿ ಗ್ರಾಮದ ಎಪಿಎಂಸಿ ಸಭಾ ಭವನದಲ್ಲಿ ಮಧ್ಯಾಹ್ನ ೩ ಗಂಟೆಗೆ ಈ ಕಾರ್ಯಕ್ರಮದ ಕುರಿತು ಚರ್ಚಿಸಲು ಪೂರ್ವಭಾವಿ ಸಭೆ ಕರೆಯಲಾಗಿದೆ. ತಾಲೂಕಿನ ಕಮಿಟಿಯ ಎಲ್ಲ ಪದಾಧಿಕಾರಿಗಳು, ಸಮಾಜದ ಹಿರಿಯರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಸಲಹೆ. ಸೂಚನೆ ನೀಡಬೇಕು ಎಂದು ಸಂಘದ ಕಾರ್ಯದರ್ಶಿ ಶರಣಪ್ಪ ಹೊಂಬಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.