ಹಳಿಯಾಳ ತಾಲೂಕಿನಾದ್ಯಂತ ವಿಶ್ವ ಪರಿಸರ ದಿನಾಚರಣೆ
ಕನ್ನಡಪ್ರಭ ವಾರ್ತೆ ಹಳಿಯಾಳಪರಿಸರವು ನಮ್ಮಿಂದ ಏನನ್ನೂ ಅಪೇಕ್ಷೆ ಮಾಡದೇ ಉಚಿತವಾಗಿ ಶುದ್ಧ ವಾತಾವರಣ, ಮಳೆ, ಗಾಳಿಯನ್ನು, ಬೆಳಕು ನೆರಳನ್ನು ನೀಡುತ್ತಿದೆ. ಮಾನವನ ಬದುಕಿಗೆ ಪರಿಸರವು ನೀಡುವ ಉಚಿತ ಸೌಲಭ್ಯಗಳ ಎದುರು, ನಾವು ಪರಿಸರ ಸಂರಕ್ಷಣೆಗೆ ಮಾಡುವ ಕಾಳಜಿಯು ಏನೋ ಅಲ್ಲ ಎಂದು ಹಳಿಯಾಳ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶೆ ಸುಜಾತಾ ಪಾಟೀಲ ಹೇಳಿದರು.
ತಾಲೂಕಿನ ಮಾಗವಾಡ ಗ್ರಾಮದ ರಾಜ್ಯ ಹೆದ್ದಾರಿ ಪಕ್ಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ತಾಲೂಕು ಮಟ್ಟದ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.ಪರಿಸರ ಸಂರಕ್ಷಣೆ ಒಂದೇ ದಿನಕ್ಕೆ ಸೀಮಿತವಾಗಿರಬಾರದು. ಬದಲಾಗಿ ನಮ್ಮ ಬದುಕಿನ ಅವಿಭಾಜ್ಯ ಕರ್ತವ್ಯವಾಗಬೇಕು. ನಮ್ಮ ಕೈಲಾದಷ್ಟು ನಮ್ಮ ಅಕ್ಕಪಕ್ಕದ ಪರಿಸರವನ್ನು ಸ್ವಚ್ಛ ಹಾಗೂ ಹಸಿರುವಾಗಿಡುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ನಮ್ಮ ಅಳಿಲು ಸೇವೆ ಸಲ್ಲಿಸೋಣ ಎಂದರು.
ಹಳಿಯಾಳ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತಕುಮಾರ ಕೆ.ಸಿ. ಅಧ್ಯಕ್ಷತೆ ವಹಿಸಿದ್ದರು. ಹಳಿಯಾಳ ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶೆ ಗೀತಾ, ಹಳಿಯಾಳ ಅರಣ್ಯ ವಿಭಾಗದ ಮಾಜಿ ಎ.ಸಿ.ಎಫ್. ಬೀರಪ್ಪ, ವಿ.ಆರ್.ಡಿ. ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು, ಪಿಎಸ್‌ಐ ಬಸವರಾಜ ಮಬನೂರ, ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರದ ದಿನೇಶ ನಾಯ್ಕ, ವಾಸುದೇವ ವಾಡೇಕರ, ಸುಕುಮಾರ ಉಪಾಧ್ಯಾಯ ಇದ್ದರು.
ಹಳಿಯಾಳ ಅರಣ್ಯ ವಿಭಾಗ, ತಾಲೂಕು ಕಾನೂನು ಸೇವಾ ಸಮಿತಿ, ಪೋಲಿಸ್ ಇಲಾಖೆ, ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರದ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಳಿಯಾಳ ವಲಯ ಅರಣ್ಯಾಧಿಕಾರಿ ಬಸವರಾಜ ಎಂ. ಆಯೋಜಿಸಿದ್ದರು.
ರಸ್ತೆಯುದ್ದಕ್ಕೂ ಶುಚಿತ್ವ:ಮಾಗವಾಡ ಗ್ರಾಮದಿಂದ ಹಿಡಿದು ಹಳಿಯಾಳ ಎಪಿಎಂಸಿವರೆಗೆ ರಸ್ತೆಯ ಎರಡೂ ಬದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಸಾಮಗ್ರಿಗಳು, ಘನತ್ಯಾಜ್ಯವನ್ನು ದೇಶಪಾಂಡೆ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ತೆರವು ಮಾಡಿದರು. ಪರಿಸರ ಸಂರಕ್ಷಣೆ ಮತ್ತು ಹಮಾಮಾನ ಬದಲಾವಣೆಯ ನಿಯಂತ್ರಣಕ್ಕೆ ಅನುಸರಿಸಬೇಕಾದ ಅಗತ್ಯ ಕ್ರಮಗಳ ಕುರಿತು ಜಾಗ್ರತೆ ಮೂಡಿಸಿದರು.
ವಿಶ್ವ ಪರಿಸರ ದಿನಾಚರಣೆ ನಿಮಿತ್ತ ತಾಲೂಕಿನೆಲ್ಲೆಡೆ ಶಾಲಾ-ಕಾಲೇಜುಗಳಲ್ಲಿ ಇಕೋ ಕ್ಲಬ್ ಸಹಯೋಗದಲ್ಲಿ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಡಲಾಯಿತು.