ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಬಾಲಕಿಯರ ಹಾಸ್ಟೆಲ್‌ನ ಸಮಸ್ಯೆಗಳನ್ನು ಬಗೆಹರಿಸದೆ ಸಮಸ್ಯೆ ಹೇಳಿಕೊಂಡು ಬರುವ ವಿದ್ಯಾರ್ಥಿನಿಯರಿಗೆ ಧಮ್ಕಿ ಹಾಕುತ್ತಿರುವ ಹಾಸ್ಟೆಲ್ ವಾರ್ಡನ್ ಅವರನ್ನು ವರ್ಗಾವಣೆ ಮಾಡಿ ಹಾಸ್ಟೆಲ್ ವ್ಯವಸ್ಥೆ ಸುಧಾರಿಸುವಂತೆ ಎಸ್‌ಎಫ್ಐ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಹೊಳೆನರಸೀಪುರ ತಾಲೂಕಿನ ಸಮಾಜಕಲ್ಯಾಣ ಇಲಾಖೆ ಮೆಟ್ರಿಕ್ ನಂತರ ಬಾಲಕೀಯರ ವಿದ್ಯಾರ್ಥಿನಿಲಯ ಅವ್ಯವಸ್ಥೆ ಕೂಪವಾಗಿದೆ. ಶೌಚಾಲಯ, ಕುಡಿಯುವ ನೀರು, ಗ್ರಂಥಾಲಯ ಮತ್ತು ಕೊಠಡಿಗಳು ಸೇರಿದಂತೆ ಯಾವುದೇ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ ಶೈಕ್ಷಣಿಕ ವಾತಾವರಣವಿಲ್ಲದೆ ಹೆಚ್ಚು ಸಮಸ್ಯೆಗಳನ್ನು ಪ್ರತಿನಿತ್ಯ ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳ ಬಗ್ಗೆ ನಿಲಯಪಾಲಕರಾದ ಚಂದ್ರಿಕಾರವರಿಗೆ ಹಲವು ಬಾರಿ ಬಗೆಹರಿಸುವಂತೆ ಒತ್ತಾಯಿಸಿದರೂ ಸಮಸ್ಯೆಗಳನ್ನು ಬಗೆಹರಿಸುವ ಬದಲು ಮಕ್ಕಳ ಮೇಲೆ ಧಮ್ಕಿ ಹಾಕಿ ಬೆದರಿಕೆ ದೌರ್ಜನ್ಯವೆಸಗುತ್ತಿದ್ದಾರೆ. ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಖಾಲಿ ಮಾಡಿಕೊಂಡು ಹೋಗಿ ಎಂದು ಬೆದರಿಕೆ ಹಾಕುತ್ತಿದ್ದಾರೆ. ತಾಲೂಕು ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಮಾಡಿದರೂ ಪ್ರಯೋಜವಾಗಿಲ್ಲ ಎಂದು ದೂರಿದರು.ಚಂದ್ರಿಕಾಗೆ ರಾಜಕೀಯ ಪ್ರಭಾವಿಗಳ ಸಂಪರ್ಕ ಇರುವುದರಿಂದ ಅವರನ್ನು ಏನು ಮಾಡಲು ಸಾಧ್ಯವಾಗಿರುವುದಿಲ್ಲ. ಹಾಸ್ಟೆಲ್‌ನಲ್ಲಿ ತೀರ ಕಳಪೆ ಗುಣಮಟ್ಟದ ಆಹಾರವನ್ನು ತಯಾರಿಸುವುದು ಮತ್ತು ಸ್ವಚ್ಛತೆ ಇಲ್ಲದಿರುವುದರಿಂದ ಈಗಾಗಲೆ ನಾನಾ ರೋಗಗಳು ಹರಡಿ ವಿದ್ಯಾರ್ಥಿನಿಯರು ಆಸ್ಪತ್ರೆ ಸೇರಿರುತ್ತಾರೆ. ಸಾಮಾಜಿಕವಾಗಿ ಶೋಷಣೆಗೆ ಒಳಗಾದ ಸಮುದಾಯದಿಂದ ದಲಿತ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿನಿಯರು ಇರುವ ಹಾಸ್ಟೆಲ್ ಇದಾಗಿದ್ದು, ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ವಾತಾವರಣ ನಿರ್ಮಿಸಲು ಬೇಕಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕೂಡಲೆ ಕಲ್ಪಿಸಬೇಕು. ಉತ್ತಮ ಗುಣಮಟ್ಟದ ಆಹಾರ ನೀಡಬೇಕು ಮತ್ತು ಬೇರೆಯ ನಿಲಯಪಾಲಕರನ್ನು ನಿಯೋಜಿಸಬೇಕು. ಇಲ್ಲವಾದಲ್ಲಿ ಎಸ್.ಎಫ್.ಐ. ಸಂಘಟನೆ ಹೋರಾಟ ಮಾಡಬೇಕಾಗುತ್ತದೆ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿರುತ್ತದೆ ಎಂದು ಹೇಳಿದರು. ಇದೇ ವೇಳೆ ಎಸ್.ಎಫ್.ಐ. ಜಿಲ್ಲಾ ಕಾರ್ಯದರ್ಶಿ ರಮೇಶ್, ಹಾಸ್ಟೆಲ್ ಘಟಕದ ಪದಾಧಿಕಾರಿಗಳಾದ ರಕ್ಷಿತ, ತೇಜಸ್ವಿನಿ, ಚಂದನ, ಸರಿತಾ, ಮಾನಸ, ನವ್ಯ, ಸೌಂದರ್ಯ ಇತರರು ಉಪಸ್ಥಿತರಿದ್ದರು.