ಸಾರಾಂಶ
ಭಾವನಾತ್ಮಕ ವಿಷಯ ಕೆರಳಿಸಿ ಯುವರಕಲ್ಲಿ ಜಾತಿ ವಿಷ ಬಿತ್ತುವ ಕೆಲಸವು ಕೋಮುವಾದಿ ಶಕ್ತಿಗಳಿಂದ ನಡೆಯುತ್ತಿದೆ.
ಬಸವಕಲ್ಯಾಣ: ಭಾವನಾತ್ಮಕ ವಿಷಯ ಕೆರಳಿಸಿ ಯುವರಕಲ್ಲಿ ಜಾತಿ ವಿಷ ಬಿತ್ತುವ ಕೆಲಸವು ಕೋಮುವಾದಿ ಶಕ್ತಿಗಳಿಂದ ನಡೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಸಮಧಾನ ವ್ಯಕ್ತಪಡಿಸಿದರು.
ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ದಲಿತ ಪ್ಯಾಂಥರ್‌ವತಿಯಿಂದ ಆಯೋಜಿಸಲಾಗಿದ್ದ ಭೀಮಾ ಕೋರೆಗಾಂವ್ ವಿಜಯ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯಾ ನಂತರ ದೇಶದಲ್ಲಿ ಅಸಮಾನತೆ, ಜಾತಿಯತೆ ಇನ್ನೂ ಉಳಿದಿದೆ. ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ತುಳಿಯುವ ಕೆಲಸ ಈಗಲೂ ನಡೆಯುತ್ತಿದೆ. ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಜಾತಿ ಧರ್ಮದ ಹೆಸರಿನಲ್ಲಿ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ ಎಂದರು.ಸ್ವಾಭಿಮಾನಕ್ಕಾಗಿ ನಡೆದ ಈ ಯುದ್ಧ ಐತಿಹಾಸಿಕವಾಗಿತ್ತು. ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಆಶಯಗಳಿಗೆ ಇಂದು ಅಪಾಯ ಎದುರಾಗಿದೆ. ಸಂವಿಧಾನ ರಕ್ಷಣೆಗಾಗಿ ನಾವು ನೀವೆಲ್ಲರೂ ಕಟಿಬದ್ಧರಾಗಬೇಕಿದೆ ಎಂದು ಖಂಡ್ರೆ ಮನವಿ ಮಾಡಿದರು.
ನ್ಯಾಯವಾದಿ ಚಿಂತಕ ಡಾ. ತಾತ್ಯಾರಾವ್ ಕಾಂಬಳೆ ಮಾತನಾಡಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರ, ಜೀವನ ಚರಿತ್ರೆಯ, ತತ್ವಜ್ಞಾನವನ್ನು ಯುವಕರು ಅಧ್ಯಯನ ಮಾಡಬೇಕು. ಉತ್ತಮ ಚಾರಿತ್ರ್ಯ ನಿರ್ಮಿಸಿಕೊಳ್ಳಬೇಕೆಂದರು.ಮಾಜಿ ಎಂಎಲ್‌ಸಿ ವಿಜಯಸಿಂಗ್, ಕಾಂಗ್ರೆಸ್ ಮುಖಂಡ ಧನರಾಜ ತಾಳಂಪಳ್ಳಿ ಮಾತನಾಡಿ, ಭೀಮಾ ಕೋರೆಗಾಂವ ವಿಜಯೋತ್ಸವವನ್ನು ರವಿ ಗಾಯಕವಾಡ ಅವರು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ದಲಿತ ಪ್ಯಾಂಥರ್ ತಾಲೂಕು ಅಧ್ಯಕ್ಷ ರವಿ ಗಾಯಕವಾಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾಭಿಮಾನದಿಂದ ಬದುಕಬೇಕೆಂದರು. ಕಲಬುರಗಿ ಬುದ್ಧ ವಿಹಾರದ ಸಂಗಾನಂದ ಭಂತೆ ಹಾಗೂ ಸಿದ್ದರಾಮ ಶರಣರು ಬೆಲ್ದಾಳ ಸಾನಿಧ್ಯವಹಿಸಿದ್ದರು.