ಕೂಡು ದಂತ ಕತ್ತರಿಸಿ ಕಾಡಾನೆಗೆ ಹೊಸ ಬದುಕು

| Published : May 20 2024, 01:31 AM IST / Updated: May 20 2024, 09:58 AM IST

ಸಾರಾಂಶ

ದಂತದ ಸಮಸ್ಯೆಯಿಂದಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ ವಲಯದಂಚಿನ ರೈತರ ಜಮೀನಿಗೆ ನುಗ್ಗಿ ದಾಂದಲೆ ಮಾಡುತ್ತಿದ್ದ ಕಾಡಾನೆಗೆ ಬಂಡೀಪುರ ಅರಣ್ಯ ಇಲಾಖೆ ಹೊಸ ಬದುಕು ನೀಡಿದೆ.

ರಂಗೂಪುರ ಶಿವಕುಮಾರ್‌

 ಗುಂಡ್ಲುಪೇಟೆ : ಸಮಸ್ಯೆಯಿಂದಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ ವಲಯದಂಚಿನ ರೈತರ ಜಮೀನಿಗೆ ನುಗ್ಗಿ ದಾಂದಲೆ ಮಾಡುತ್ತಿದ್ದ ಕಾಡಾನೆಗೆ ಬಂಡೀಪುರ ಅರಣ್ಯ ಇಲಾಖೆ ಹೊಸ ಬದುಕು ನೀಡಿದೆ. ಕಾಡಾನೆಯ ಕೂಡು ದಂತವನ್ನು ಕತ್ತರಿಸುವ ಮೂಲಕ ಯಾವುದೇ ಸಮಸ್ಯೆ ಇಲ್ಲದೆ ಆಹಾರ ಸೇವನೆಗೆ ಅನುವು ಮಾಡಿಕೊಟ್ಟಿದೆ.

ಕಳೆದ ಕೆಲ ಸಮಯದಿಂದ ತಾಲೂಕಿನ ಹಂಗಳ ಸುತ್ತಮುತ್ತಲ ರೈತರ ಜಮೀನಿನ ಫಸಲು ತಿಂದು ಹಾಳು ಮಾಡುತ್ತಿದ್ದ ಕೂಡು ದಂತದ  ಕಾಡಾನೆ ಹಾವಳಿಗೆ ರೈತರು ತತ್ತರಿಸಿದ್ದರು. ಆನೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಡ ಹೇರಿದ್ದರು. ಸೆರೆ ಹಿಡಿದ ಕಾಡಾನೆ ನಾಡಿಗೇಕೆ ಬಂದು ರೈತರ ಜಮೀನಿನ ಫಸಲು ತಿನ್ನುತ್ತಿತ್ತು ಎಂದು ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕ ಪ್ರಭಾಕರನ್‌ ಎಸ್‌.ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದ ಬಳಿಕ ಕಾಡಾನೆಗೆ ಕೂಡು ದಂತ ಕಾರಣ ಎಂದು ಖಚಿತಪಡಿಸಿಕೊಂಡಿದ್ದಾರೆ. ನಂತರ ಮೇಲಾಧಿಕಾರಿಗಳ ಅನುಮತಿ ಪಡೆದು ಆನೆಯ ಕೂಡು ದಂತವನ್ನು ಆಪರೇಷನ್ ಮಾಡಿ ಸ್ವಲ್ಪ ಕತ್ತರಿಸಿದ್ದಾರೆ. ತರುವಾಯ ಆನೆ ನೈಸರ್ಗಿಕವಾಗಿ ಆಹಾರ ಸೇವನೆ ಮಾಡುವಂತೆ ಕಾಳಜಿ ವಹಿಸಿದೆ. ಈ ರೀತಿ ಮಾಡಿರುವುದು ಇದೇ ಮೊದಲು.

ಆಹಾರ ತಿನ್ನಲು ಒದ್ದಾಟ: ಈ ಆನೆಯದ್ದು ಅಪರೂಪದ ಸಮಸ್ಯೆಯಾಗಿತ್ತು. ಸೆರೆ ಹಿಡಿದ ಕಾಡಾನೆಗೆ ಎರಡು ದಂತ ಅಡ್ಡಾದಿಡ್ಡಿಯಾಗಿ ಬೆಳೆದು ಒಂದಕ್ಕೊಂದು ಕೂಡಿಕೊಂಡಿದ್ದ ಕಾರಣ ಸೊಂಡಿಲು ಮೇಲೆತ್ತಲೂ ಸಾಧ್ಯವಾಗದ ಸ್ಥಿತಿ ಇತ್ತು. ಇದರಿಂದ ಕಾಡಲ್ಲಿ ಮರದ ಸೊಪ್ಪು, ಹಣ್ಣು ತಿನ್ನಲೂ ಆಗುತ್ತಿರಲಿಲ್ಲ. ನೀರನ್ನೂ ಸೊಂಡಿಲ ಮೂಲಕ ತೆಗೆದುಕೊಂಡು ಮೈಮೇಲೆ ಸಿಂಪಡಿಸಿಕೊಳ್ಳಲೂ ಪರದಾಡುತ್ತಿತ್ತು. ಇದರಿಂದಾಗಿ ಸುಲಭವಾಗಿ ಸಿಗುವ ಆಹಾರಕ್ಕಾಗಿ ಕಾಡಂಚಿನ ಗ್ರಾಮದ ರೈತರ ಜಮೀನಿಗೆ ನುಗ್ಗುತ್ತಿತ್ತು. ಕಬ್ಬು, ಬಾಳೆ, ಟೊಮೆಟೋ ಮತ್ತಿತರ ತೋಟಗಾರಿಕೆ ಬೆಳೆ ತಿಂದು ಹಸಿವು ನೀಗಿಸಿಕೊಳ್ಳುತ್ತಿತ್ತು. ಇದು ಕಾಂಡಂಚಿನ ರೈತರ ಪಾಲಿಗೆ ತಲೆನೋವಾಗಿ ಪರಿಣಮಿಸಿತ್ತು. ದಂತ ಚಿಕಿತ್ಸೆ ಬಳಿಕ ಗುಂಡ್ರೆ ವಲಯದ ಕಾಡಿನಲ್ಲಿ ಈ ಆನೆ ಆರಾಮಾಗಿ ಓಡಾಡಿಕೊಂಡಿದೆ.

ಹಂಗಳ ಸುತ್ತಮುತ್ತ ದಾಂಧಲೆ ನಡೆಸುತ್ತಿದ್ದ ಆನೆ ಸೆರೆ ಹಿಡಿದ ಬಳಿಕ ಆಹಾರ ಸೇವನೆಗೆ ತೊಂದರೆಯಾಗುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ದಂತ ಕತ್ತರಿಸಲಾಗಿದೆ. ಆ ಬಳಿಕ ಆನೆಯು ಸೊಂಡಿಲು ಮೇಲೆತ್ತಿ ಸರಾಗವಾಗಿ ಆಹಾರ ಸೇವನೆ ಮಾಡುತ್ತಿದೆ. ಸದ್ಯದಲ್ಲೇ ಕಾಡಾನೆಗಳ ಹಿಂಡು ಸೇರಲಿದೆ.

-ಪ್ರಭಾಕರನ್‌, ಡಿಸಿಎಫ್‌, ಬಂಡೀಪುರ