ಕರ್ತವ್ಯ ಲೋಪ: ಹಾಸ್ಟೆಲ್‌ ವಾರ್ಡನ್ ಗುರುಲಿಂಗಮ್ಮ ಅಮಾನತು

| Published : Jul 12 2024, 01:31 AM IST

ಕರ್ತವ್ಯ ಲೋಪ: ಹಾಸ್ಟೆಲ್‌ ವಾರ್ಡನ್ ಗುರುಲಿಂಗಮ್ಮ ಅಮಾನತು
Share this Article
  • FB
  • TW
  • Linkdin
  • Email

ಸಾರಾಂಶ

ಗುಲ್ಬರ್ಗ ವಿ.ವಿ. ಆವರಣದಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧೀನದ ಮೆಟ್ರಿಕ್ ನಂತರದ ಸ್ನಾತಕ್ಕೋತ್ತರ ಬಾಲಕೀಯರ ವಸತಿ ನಿಲಯದ ವಿದ್ಯಾರ್ಥಿನಿಯರು ಮಂಗಳವಾರ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರಿಂದ ಸ್ಥಳಕ್ಕೆ ರಾತ್ರಿಯೇ ಜಿಲ್ಲಾ ಬಿ.ಸಿ.ಎಂ ಅಧಿಕಾರಿ ಪ್ರಭು ದೊರೆ ಭೇಟಿ ನೀಡಿ ವಿದ್ಯಾರ್ಥಿನಿಯರೊಂದಿಗೆ ನಡೆಸಿದ ಸಂವಾದ ಫಲಪ್ರದವಾದ ಹಿನ್ನೆಲೆಯಲ್ಲಿ ತಡರಾತ್ರಿ 11 ಗಂಟೆಗೆ ವಿದ್ಯಾರ್ಥಿನಿಯರು ಪ್ರತಿಭಟನೆ ವಾಪಸ್ ಪಡೆದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಸರಿಯಾಗಿ ಊಟ ಪೂರೈಸುತ್ತಿಲ್ಲ, ನಿಲಯದಲ್ಲಿ ನೀರಿಲ್ಲ ಎಂದು ಗುಲ್ಬರ್ಗ ವಿ.ವಿ. ಆವರಣದಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧೀನದ ಮೆಟ್ರಿಕ್ ನಂತರದ ಸ್ನಾತಕ್ಕೋತ್ತರ ಬಾಲಕೀಯರ ವಸತಿ ನಿಲಯದ ವಿದ್ಯಾರ್ಥಿನಿಯರು ಮಂಗಳವಾರ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರಿಂದ ಸ್ಥಳಕ್ಕೆ ರಾತ್ರಿಯೇ ಜಿಲ್ಲಾ ಬಿ.ಸಿ.ಎಂ ಅಧಿಕಾರಿ ಪ್ರಭು ದೊರೆ ಭೇಟಿ ನೀಡಿ ವಿದ್ಯಾರ್ಥಿನಿಯರೊಂದಿಗೆ ನಡೆಸಿದ ಸಂವಾದ ಫಲಪ್ರದವಾದ ಹಿನ್ನೆಲೆಯಲ್ಲಿ ತಡರಾತ್ರಿ 11 ಗಂಟೆಗೆ ವಿದ್ಯಾರ್ಥಿನಿಯರು ಪ್ರತಿಭಟನೆ ವಾಪಸ್ ಪಡೆದರು.

ಏತನ್ಮಧ್ಯೆ ಹಾಸ್ಟೆಲ್‌ನಲ್ಲಿ ಸವಲತ್ತುಗಳನ್ನು ನಿಭಾಯಿಸುವ ವಿಷಯದಲ್ಲಿ ವಿಫಲರಾಗಿರುವ ಆರೋಪದಡಿಯಲ್ಲಿ ಕರ್ತವ್ಯ ಲೋಪ,ವಾರ್ಡನ್ ಗುರುಲಿಂಗಮ್ಮ ಅಮಾನತ್ತು ಮಾಡಿ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಬುಧವಾರ ಆದೇಶ ಹೊರಡಿಸಿದ್ದಾರೆ.

ವಸತಿ ನಿಲಯದಲ್ಲಿ ಪ್ರತಿನಿತ್ಯ ನಮಗೇ ಬೇಕಾದಷ್ಟು ಪ್ರಮಾಣದಲ್ಲಿ ನೀರು ಪೂರೈಕೆಯಾಗುತ್ತಿಲ್ಲ, ಮೆನು ಚಾರ್ಟ್ ಪ್ರಕಾರ ಊಟ ನೀಡುತ್ತಿಲ್ಲ, ಚರಂಡಿ ತುಂಬಿದ್ದು ಸ್ವಚ್ಚಗೊಳಿಸಿಲ್ಲ ಎಂಬುದು ವಿದ್ಯಾರ್ಥಿನಿಯರ ವಾದವಾಗಿತ್ತು. ಬಿ.ಸಿ.ಎಂ ಅಧಿಕಾರಿ ಪ್ರಭು ದೊರೆ ಮಾತನಾಡಿ, ತಮ್ಮೆಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ ನಂತರ ವಿದ್ಯಾರ್ಥಿನಿಯರು ರಾತ್ರಿ ಊಟ ಮಾಡುವ ಮೂಲಕ ಧರಣಿ ಕೈಬಿಟ್ಟರು.

ಹಾಸ್ಟೆಲ್‌ನಲ್ಲಿದ್ದ ಮೂರು ಬೋರವೆಲ್ ಪೈಕಿ ಎರಡು ಕೆಟ್ಟಿದ್ದರಿಂದ ನೀರಿನ ಸಮಸ್ಯೆ ಉಂಟಾಗಿದೆ. ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು. ಮೆನು ಚಾರ್ಟ್ ಪ್ರಕಾರ ಊಟ-ಉಪಹಾರ ನೀಡಲಾಗುವುದು, ಚರಂಡಿ ಸ್ವಚ್ಚತೆಯನ್ನು ಸಹ ಮಾಡಿಸಲಾಗುವುದು ಎಂದು ಅಧಿಕಾರಿಗಳು ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಿಕೊಟ್ಟರು.

ಇನ್ನು ಬುಧವಾರ ಬೆಳಿಗ್ಗೆಯೂ ವಸತಿ ನಿಲಯಕ್ಕೆ ಭೇಟಿ ನೀಡಿದ ಪ್ರಭು ದೊರೆ ಅವರು ಬೋರವೆಲ್ ದುರಸ್ತಿ ಮಾಡಿಸಿದ್ದರು. ಪರಿಣಾಮ ಹೆಚ್ಚು ನೀರು ಬರುತ್ತಿದೆ.

ಕರ್ತವ್ಯ ಲೋಪ,ವಾರ್ಡನ್ ಗುರುಲಿಂಗಮ್ಮ ಅಮಾನತು: ವಸತಿ ನಿಲಯದಲ್ಲಿನ ಸಮಸ್ಯೆಗಳನ್ನು ಸರಿಯಾಗಿ ಸ್ಪಂದಿಸದೆ ಮತ್ತು ನಿಲಯವನ್ನು ಸಮರ್ಪಕವಾಗಿ ನಿರ್ವಹಿಸದೆ ಕರ್ತವ್ಯ ನಿರ್ಲಕ್ಷ ಮತ್ತು ಬೇಜಾವಾಬ್ದಾರಿತನ ತೋರಿರುವ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ನಿಲಯದ ನಿಲಯ ಪಾಲಕರಾದ ಗುರುಲಿಂಗಮ್ಮ ಅವರನ್ನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು- 1957ರ ನಿಯಮ 10(1)ಡಿ ರಂತೆ ಅಮಾನತು ಮಾಡಿ ಜಿಲ್ಲಾ ಪಂಚಾಯ್ತಿ ಸಿ.ಇ.ಓ ಭಂವರ್ ಸಿಂಗ್ ಮೀನಾ ಬುಧವಾರ ಆದೇಶ ಹೊರಡಿಸಿದ್ದಾರೆ.

ಅಮಾನತುಗೊಂಡ ನೌಕರರು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ನಿಯಮ 98(ಎ) (ಡಿ)ರ ಪ್ರಕಾರ ಜೀವನಾಂಶ ಭತ್ಯೆ ಪಡೆಯಲು ಅರ್ಹರಿದ್ದು, ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೇ ಕೇಂದ್ರಸ್ಥಾನ ಬಿಡತಕ್ಕದ್ದಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.