ಸಿದ್ದು ಚಿಕ್ಕಬಳ್ಳೇಕೆರೆ
ಕನ್ನಡಪ್ರಭ ವಾರ್ತೆ ಬೆಂಗಳೂರುರಾಜ್ಯದಲ್ಲಿ ಆಲ್ಕೋಹಾಲ್ ಇನ್ ಬೇವರೇಜ್ (ಎಐಬಿ) ಆಧಾರಿತ ತೆರಿಗೆ ಪದ್ಧತಿ ಜಾರಿಯಿಂದ ಹಲವು ಮದ್ಯ, ಬಿಯರ್‌ಗಳ ಬೆಲೆ ಗಣನೀಯವಾಗಿ ಕಡಿಮೆಯಾಗಿದ್ದರೂ ಬಹುತೇಕ ಮದ್ಯದಂಗಡಿಯವರು ಈ ಬ್ರಾಂಡ್‌ಗಳ ಬೆಲೆ ಕಡಿಮೆ ಮಾಡದೇ ಗ್ರಾಹಕರಿಗೆ ‘ಟೋಪಿ’ ಹಾಕುತ್ತಿದ್ದಾರೆ.
ಹಲವು ದಶಕಗಳಿಂದ ರಾಜ್ಯದಲ್ಲಿ ಬಲ್ಕ್ ಲೀಟರ್ ಆಧರಿತ ತೆರಿಗೆ ಪದ್ಧತಿ ಇದ್ದು ಇದೇ ಮೊದಲ ಬಾರಿಗೆ ದೇಶದಲ್ಲೇ ಪ್ರಥಮವಾಗಿ ಕರ್ನಾಟಕದಲ್ಲಿ ಮೇ 11 ರಿಂದ ಮದ್ಯದಲ್ಲಿನ ಆಲ್ಕೋಹಾಲ್ ಪ್ರಮಾಣ ಆಧರಿಸಿದ ಎಐಬಿ ತೆರಿಗೆ ಪದ್ಧತಿ ಜಾರಿಯಾಗಿದೆ. ಇದರಿಂದಾಗಿ ಬಹುತೇಕ ಬಿಯರ್‌ಗಳ ಬೆಲೆ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ವಿಸ್ಕಿ, ರಮ್ ಮತ್ತಿತರ ಹಲವು ದೇಶಿಯ ಮದ್ಯಗಳ ದರವೂ ಕಡಿಮೆಯಾಗಿದೆ. ಆದರೆ ಇದರ ‘ಲಾಭ’ ಗ್ರಾಹರಿಗೆ ವರ್ಗವಾಗುತ್ತಿಲ್ಲ.ವಿದೇಶಗಳಲ್ಲಿ ಎಐಬಿ ಪದ್ಧತಿ ಅನುಸರಿಸುವುದು ಸಾಮಾನ್ಯವಾಗಿದ್ದು, ರಾಜ್ಯದಲ್ಲಿ ಅಬಕಾರಿ ರಾಜಸ್ವ ಹೆಚ್ಚಿಸಿಕೊಳ್ಳಲು ಇದನ್ನು ಅಳವಡಿಸಿಕೊಳ್ಳಲಾಗಿದೆ. ಇದರಿಂದ ಬಿಯರ್ ಮತ್ತು ಬಹಳಷ್ಟು ಪ್ರೀಮಿಯಂ ಬ್ರ್ಯಾಂಡ್‌ಗಳು ಅಗ್ಗವಾಗಿವೆ. ಆದರೆ ಬಹುತೇಕ ವೈನ್ ಸ್ಟೋರ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ಇನ್ನೂ ಹಳೆಯ ದರದಲ್ಲೇ ಮದ್ಯ ಮಾರಾಟ ಮಾಡುತ್ತಿವೆ. ಕೆಲ ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆಗಳ ಕತೆಯೂ ಇದಕ್ಕೆ ಹೊರತಲ್ಲ.
ಲೇಬಲ್ ಬದಲಾವಣೆ ವಿಳಂಬವೇ ‘ಆದಾಯ’:
ಈ ಬಗ್ಗೆ ಗ್ರಾಹಕರು ಪ್ರಶ್ನಿಸಿದರೆ, ‘ನಮ್ಮಲ್ಲಿ ಹಳೆಯ ಸ್ಟಾಕ್ ಇದೆ. ಆದ್ದರಿಂದ ಕಡಿಮೆ ಬೆಲೆಗೆ ನೀಡುವುದಿಲ್ಲ’ ಎಂದು ಸಬೂಬು ಹೇಳುತ್ತಿದ್ದಾರೆ. ಬೆಲೆ ಇಳಿಕೆಯಾಗಿದ್ದರೂ ಬಾಟಲ್ ಮೇಲಿನ ಲೇಬಲ್‌ಗಳಲ್ಲಿ ಇನ್ನೂ ಹೊಸ ದರ ನಮೂದಾಗಿಲ್ಲ. ಕಂಪನಿಗಳ ಸಾಮರ್ಥ್ಯಕ್ಕೆ ಅನುಸಾರ ಅದಕ್ಕೆ ಇನ್ನೂ ಒಂದು ವಾರ ಕಾಲಾವಕಾಶ ಬೇಕಾಗಬಹುದು. ಆದರೆ ಕರ್ನಾಟಕ ರಾಜ್ಯ ಪಾನೀಯ ನಿಗಮ (ಕೆಎಸ್‌ಬಿಸಿಎಲ್)ವು ಹಳೆಯ ಲೇಬಲ್ ಇದ್ದರೂ ಕಡಿಮೆ ದರಕ್ಕೇ ಮದ್ಯದಂಗಡಿಗಳಿಗೆ ಬಿಯರ್ ಸರಬರಾಜು ಮಾಡುತ್ತಿದೆ.
ಆದರೆ, ಮದ್ಯಪ್ರಿಯರಿಗೆ ಇದ್ಯಾವುದರ ಅರಿವಿಲ್ಲದಿರುವುದರಿಂದ ಬಹುತೇಕ ಮದ್ಯದಂಗಡಿಗಳಲ್ಲಿ ಬಾಟಲ್‌ಗಳ ಮೇಲಿನ ಹಳೆಯ ದರವನ್ನೇ ತೋರಿಸಿ ಗ್ರಾಹಕರಿಂದ ಅಧಿಕ ಹಣ ವಸೂಲಿ ಮಾಡಲಾಗುತ್ತಿದೆ. ಮತ್ತೊಂದೆಡೆ, ಬೆಲೆ ಹೆಚ್ಚಳವಾದ ಮದ್ಯದ ಬ್ರ್ಯಾಂಡ್‌ಗಳನ್ನು(ಲೇಬಲ್‌ನಲ್ಲಿ ಕಡಿಮೆ ದರವಿದ್ದರೂ) ಅಧಿಕ ಬೆಲೆಗೆ ಮಾರುವುದನ್ನು ಮಾತ್ರ ಮದ್ಯದಂಗಡಿಯವರು ಮರೆಯುತ್ತಿಲ್ಲ.650 ಎಂಎಲ್ ಬಿಯರ್‌ಮೊದಲಿನ ದರಪ್ರಸ್ತುತ ದರಕಿಂಗ್‌ಫಿಶರ್ ಪ್ರೀಮಿಯಂ185110ಕಿಂಗ್‌ಫಿಶರ್ ಸ್ಟ್ರಾಂಗ್190180ಬಡ್‌ವೈಸರ್ ಪ್ರೀಮಿಯಂ225205ಬುಲೆಟ್ ಲೇಜರ್10090ನಾಕೌಟ್ ಸ್ಟ್ರಾಂಗ್180175ಯುಬಿ ಪ್ರೀಮಿಯಂ160135ಯುಬಿ ಸ್ಟ್ರಾಂಗ್165135ಟುಬರ್ಗ್190145
ಅಂಗಡಿಗಳ ವಿರುದ್ಧ ಕಠಿಣಕ್ರಮ: ಜಂಟಿ ಆಯುಕ್ತ ಎಚ್ಚರಿಕೆ
ಸಿಎಲ್-2 (ಎಂಆರ್‌ಪಿ ಔಟ್‌ಲೆಟ್), ಸಿಎಲ್- 11ಸಿ (ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆ) ಗಳಲ್ಲಿ ನೂತನ ನೀತಿಯಂತೆ ಬಿಯರ್‌ಗಳಿಗೆ ಕಡಿಮೆ ದರ ಪಡೆಯಲೇಬೇಕು. ಇಲ್ಲದಿದ್ದರೆ ಇಂಥ ಅಂಗಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಇಲಾಖೆ ಜಂಟಿ ಆಯುಕ್ತ (ಐಎಂಎಲ್) ನಾಗರಾಜಪ್ಪ ಎಚ್ಚರಿಕೆ ನೀಡಿದ್ದಾರೆ. ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಹೊಸ ಎಂಆರ್‌ಪಿಯನ್ನು ಪ್ರತಿ ಸಿಎಲ್-2, ಸಿಎಲ್ 11ಸಿ ಮದ್ಯದಂಗಡಿಗಳಲ್ಲಿ ಪ್ರದರ್ಶಿಸಲು ಸೂಚಿಸುವಂತೆ ಈಗಾಗಲೇ ಎಲ್ಲ ಜಿಲ್ಲೆಗಳ ಅಬಕಾರಿ ಡಿಸಿಗಳಿಗೆ ಪತ್ರ ಬರೆಯಲಾಗಿದೆ. ದರಪಟ್ಟಿ ಪ್ರದರ್ಶಿಸದಿದ್ದರೆ ಸಂಬಂಧಪಟ್ಟ ಇನ್ಸ್‌ಪೆಕ್ಟರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಧಿಕ ದರ ವಸೂಲಿ ಮಾಡಿದರೆ ಅಂಥ ಮದ್ಯದಂಗಡಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.