ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಬಿಳಿಸುಳಿ ರೋಗ ನಿಯಂತ್ರಿಸಲು ಅಧ್ಯಯನಕ್ಕೆ ತಜ್ಞರ ತಂಡ ಮಂಗಳವಾರ ಜಿಲ್ಲೆಯ ವಿವಿಧ ಆಯ್ದ ಪ್ರದೇಶಗಳಿಗೆ ಭೇಟಿ ನೀಡಿ ಮಣ್ಣಿನ ಮಾದರಿ, ಬಿತ್ತನೆ ಬೀಜ ಇತ್ಯಾದಿಗಳ ಮಾದರಿಯನ್ನು ಸಂಗ್ರಹಿಸಿದೆ. ಅವುಗಳನ್ನು ಪರೀಕ್ಷೆಗೆ ಒಳಪಡಿಸಿ ೧೫ ದಿನಗಳಲ್ಲಿ ವಿಸ್ತೃತ ವರದಿ ನೀಡಲಿದ್ದಾರೆ ಎಂದು ಸಂಸದರಾದ ಶ್ರೇಯಸ್ ಎಂ ಪಟೇಲ್ ತಿಳಿಸಿದ್ದಾರೆ.ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಬಿಳಿಸುಳಿ ರೋಗ ವೀಕ್ಷಣೆಗೆ ಕೇಂದ್ರದ ವಿಜ್ಞಾನಿಗಳ ತಂಡ ಜಿಲ್ಲೆಯ ಆಲೂರು, ಹೊಳೆನರಸೀಪುರ, ಅರಕಲಗೂಡು, ಬೇಲೂರು ತಾಲೂಕುಗಳಲ್ಲಿ ಆಯ್ದ ಭಾಗಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿರುವ ತಂಡದೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಿಳಿಸುಳಿ ರೋಗ ನಿಯಂತ್ರಿಸಲು ಅಧ್ಯಯನಕ್ಕಾಗಿ ತಜ್ಞರ ತಂಡವನ್ನು ಜಿಲ್ಲೆಗೆ ಕಳುಹಿಸಿಕೊಡುವಂತೆ ಕೇಂದ್ರ ಕೃಷಿ ಸಚಿವರಲ್ಲಿ ಮನವಿ ಮಾಡಿಲಾಗಿತ್ತು. ಅದರಂತೆ ತಜ್ಞರ ತಂಡದವರು ಜಿಲ್ಲೆಯ ವಿವಿಧ ಆಯ್ದ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ ಎಂದರು.
ಬಿಳಿಸುಳಿ ರೋಗ ನಿಯಂತ್ರಿಸಲು ತಜ್ಞರ ತಂಡ ವರದಿಯನ್ನು ಸಲ್ಲಿಸಿದ ನಂತರ ಕೇಂದ್ರ ಸಚಿವರನ್ನು ಭೇಟಿ ಮಾಡಿ ಅನುಸರಿಸಬೇಕಾದ ಸೂಕ್ತ ಕ್ರಮಗಳನ್ನು ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಸಮನ್ವಯತೆಯನ್ನು ನಡೆಸಿ ವರದಿಯಲ್ಲಿ ನೀಡುವ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದರು ತಿಳಿಸಿದರು. ಮೆಕ್ಕೆಜೋಳ ಸಂಬಂಸಿದಂತೆ ಪ್ರಾದೇಶಿಕ ಕೇಂದ್ರವನ್ನು ಹಾಸನ ಜಿಲ್ಲೆಗೆ ಮಾಡಿಕೊಡುವಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಮಾಡುವುದಾಗಿ ಇದರಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯ ಮೆಕ್ಕೆಜೋಳ ಬೆಳೆಗಾರಿಗೆ ಒಳ್ಳೆಯದಾಗುತ್ತದೆ ಎಂದು ಸಂಸದರು ತಿಳಿಸಿದರು.ತಜ್ಞರು ಹೇಳುವ ಪ್ರಕಾರ ಒಂದೇ ಭೂಮಿಯಲ್ಲಿ ಒಂದೇ ಬೆಳೆಯ ಪುನರಾವರ್ತನೆ ಈ ರೋಗಕ್ಕೆ ಪ್ರಮುಖ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಅತಿಯಾದ ಪೂರ್ವ ಮುಂಗಾರು ಮಳೆ ಬಂದಿದ್ದು ಕೂಡ ಇದಕ್ಕೆ ಕಾರಣವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ತಜ್ಞರ ವರದಿ ಬಂದ ನಂತರ ವರದಿಯಲ್ಲಿರುವ ಅಂಶಗಳನ್ನು ಅನುಸರಿಸಲು ರೈತರಿಗೆ ಮಾಹಿತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ವೇಳೆಯಲ್ಲಿ ಹೈದರಾಬಾದ್‌ನ ಐಸಿಎಆರ್- ಐಐಎಂಆರ್ ಡಬ್ಲ್ಯೂಎನ್‌ಸಿಯ ಎಐಸಿಆರ್‌ಪಿ (ಮೆಕ್ಕೆಜೋಳ) ವಿಭಾಗದ ನೋಡಲ್ ಅಧಿಕಾರಿ ಡಾ. ಸುನಿಲ್ ನೀಲಂ, ಹೈದರಾಬಾದ್ ಕೇಂದ್ರದ ಮೆಕ್ಕೆಜೋಳ ರೋಗಶಾಸ್ತ್ರಜ್ಞ ಡಾ. ಮಲ್ಲಿಕಾರ್ಜುನ, ಮಂಡ್ಯ ಕೇಂದ್ರ ಮೆಕ್ಕೆಜೋಳ ರೋಗಶಾಸ್ತ್ರಜ್ಞ ಡಾ. ಇ. ಮಲ್ಲಿಕಾರ್ಜುನ, ಧಾರವಾಡ ಯುಎಎಸ್ ನ ಮೆಕ್ಕೆಜೋಳ ರೋಗಶಾಸ್ತ್ರಜ್ಞ ಡಾ. ಪ್ರೇಮಾ, ಧಾರವಾಡ ಯುಎಎಸ್‌ನ ಎಸ್‌ಆರ್ ಅಗ್ರಾನೊಮಿಸ್ಟ್ ಡಾ. ಸಲಾಕಿನ್‌ಕೋಪ್, ಜಂಟಿ ಕೃಷಿ ನಿರ್ದೇಶಕರಾದ ರಮೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.