ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಶರಣರು, ದಾರ್ಶನಿಕರು ತಮ್ಮ ವಚನಗಳ ಮೂಲಕ ಜಾತಿ, ಮೂಢನಂಬಿಕೆ, ಮೇಲು-ಕೀಳು ಎಂಬ ಭಾವನೆಯನ್ನು ಬೇರು ಸಮೇತ ಕಿತ್ತೆಸೆದು ಸರ್ವರಲ್ಲೂ ಸಮಾನತೆ ಸಾರಲು ಶ್ರಮಿಸಿದ್ದರು ಎಂದು ಮಂಗಳವಾರಪೇಟ ದೈವಮಂಡಳಿ ಅಧ್ಯಕ್ಷ ಶ್ರೀಶೈಲ ದಬಾಡಿ ಹೇಳಿದರು.ಸೋಮವಾರ ರಬಕವಿ-ಬನಹಟ್ಟಿ ತಹಸೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡ ಆದ್ಯ ವಚನಕಾರ ದೇವರ ದಾಸಿಮಯ್ಯ ಅವರ ಜಯಂತ್ಯುತ್ಸವ ಕಾರ್ಯಕ್ರದಲ್ಲಿ ಮಾತನಾಡಿ ಶರಣರು, ದಾರ್ಶನಿಕರು, ವಚನಕಾರರು ಎಂದಿಗೂ ಜಾತಿಯನ್ನು ಪ್ರತಿಪಾದಿಸಲಿಲ್ಲ. ಮನುಷ್ಯ ಜಾತಿಯೊಂದೇ ಶ್ರೇಷ್ಠ ಎಂದು ನಂಬಿ ಅದರಂತೇ ಬದುಕಿದ್ದರು. ಸರ್ವ ಧರ್ಮಗಳು ಸಮಾನವೆಂದು ಸಾರಿದರು ಎಂದು ಹೇಳಿದರು.
ರಬಕವಿ-ಬನಹಟ್ಟಿಯ ಪ್ರಾಧಿಕಾರ ಅಧ್ಯಕ್ಷ ದಾನಪ್ಪ ಹುಲಜತ್ತಿ ಮಾತನಾಡಿ, ತತ್ವ ಸಿದ್ಧಾಂತಗಳನ್ನು ಹೊಂದಿಲ್ಲದ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಜಾತೀಯತೆ ಹೆಮ್ಮರವಾಗಿ ಬೆಳೆಯುತ್ತಿದೆ. ತಂತ್ರಜ್ಞಾನ ಯುಗದಲ್ಲೂ ಮೌಢ್ಯ, ಶೋಷಣೆ, ಜೀವಂತವಾಗಿರುವುದು ದುರ್ದೈವದ ಸಂಗತಿ ಎಂದು ಬೇಸರಿಸಿದರು. ಗ್ರೇಡ್-೨ ತಹಸೀಲ್ದಾರ ಸದಾಶಿವ ಕಾಂಬಳೆ ಆದ್ಯ ವಚನಕಾರ, ನೇಕಾರ ಸಂತ ಜೇಡರ ದಾಸಿಮಯ್ಯ ಶರಣರಲ್ಲೇ ಅಗ್ರಗಣ್ಯರಾಗಿದ್ದು, ಸಾಮಾಜಿಕ ಕಳಕಳಿ ಮತ್ತು ದಾರ್ಶನಿಕತೆಯ ವಚನಗಳ ರಚಿಸುವ ಮೂಲಕ ಸರಳತೆ, ವೈಚಾರಿಕತೆ ಹಾಗೂ ನೇಯ್ಗೆಯ ರೂಪಕಗಳ ಮೂಲಕ ಕಟ್ಟಿದರು. ದಾಸಿಮಯ್ಯ ಹಾಗೂ ಅವರ ಪತ್ನಿ ದುಗ್ಗಳೆಯರು ಮಹಾನ್ ಶಿವಭಕ್ತರಾಗಿದ್ದರು. ನೇಕಾರ ವೃತ್ತಿಯ ಇವರು ವಚನ ಸಾಹಿತ್ಯ ಕ್ಷೇತ್ರವನ್ನು ಬಸವಣ್ಣನವರಿಗಿಂತ ಮೊದಲೇ ಭದ್ರ ಬುನಾದಿ ಹಾಕಿದ್ದ ಇವರು ಕ್ರಿ.ಶ.೧೦೪೦ರ ಕಾಲಘಟ್ಟದಲ್ಲಿ ಈಗಿನ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದೇನೂರಿನಲ್ಲಿ ವಾಸವಿದ್ದರು. ಮೂಲತಃ ಸಾಮಾನ್ಯ ವ್ಯಕ್ತಿಯಾಗಿದ್ದರೂ ಸಾಧನೆಯ ಮೂಲಕ ಅಸಾಮಾನ್ಯ ವ್ಯಕ್ತಿತ್ವ ಬೆಳೆಸಿಕೊಂಡರು. ರಾಮನಾಥ ಅಂಕಿತ ನಾಮದಡಿ ಜನವಾಣಿ ಮತ್ತು ದೇಸಿ ಛಂದಸ್ಸಿನ ಮಾರ್ಗದರ್ಶಿ ೧೭೬ ವಚನಗಳ ರಚಿಸಿದರು. ಸಂಕ್ಷಿಪ್ತ, ನೇರ ಮತ್ತು ಬದುಕಿನ ಅನುಭವಗಳನ್ನು ನೇಯ್ಗೆಯ ಪರಿಕರಗಳಾದ ಉಂಕೆ, ಅಣಿ, ಲಾಳಿ, ನೂಲು ಮೊದಲಾದ ಶಬ್ಧಗಳಿಂದ ಸಮಾಜ ವಿಮರ್ಶೆ ಕಟುವಾಗಿ ಹಾಗೂ ವಿಡಂಬನಾತ್ಮಕವಾಗಿ ವಚನಗಳು ರೂಪಿತಗೊಂಡಿವೆ. ಯೋಗ್ಯ ಗುರುವಿನ ಲಕ್ಷಣ, ಭಕ್ತಾಭಿಮಾನ, ದಾಸ್ಯಭಾವ, ಸಮರ್ಪಣಾಭಾವ, ಧರ್ಮ, ನೀತಿ ಮೊದಲಾದ ವಿಷಯಗಳಲ್ಲಿ ವಚನಗಳ ಮೂಲಕ ಪ್ರತಿಪಾದಿಸಿದ ಇವರು ಷಟ್‌ಸ್ಥಲಾಚರಣೆ ಹಾಗೂ ಶಿವಯೋಗ ಸಾಧನೆಗೆ ಅನುಸಂಧಾನ ಪ್ರಧಾನ ಮೆಟ್ಟಿಲು. ವ್ಯಕ್ತಿಗೆ ಸಮ್ಯಕ್ ಜ್ಞಾನೋದಯವಾದಾಗ ಅಂತರಂಗ-ಬಹಿರಂಗಗಳ ಸೂಕ್ಷ್ಮ ನಿರೀಕ್ಷಣೆಯ ವಿಮರ್ಶೆ ನಡೆದು, ಅಂತರಂಗ ಪರಿಶೋಧಿಸಿ ಕಲ್ಮಶ ದೂರೀಕರಿಸಿ ಆಂತರಂಗಿಕ ಶುದ್ಧತೆ ಪಡೆಯುವುದೇ ನಿಜವಾದ ಶಿವಯೋಗವೆಂದು ಘೋಷಿಸಿದವರೆಂದರು.ಉಪತಹಸೀಲ್ದಾರ ರಾಜಶೇಖರ ಸಾತಿಹಾಳ, ಶಾಂತಾ ಕೂಗಾಟೆ, ಗ್ರಾಮ ಆಡಳಿತಾಧಿಕಾರಿ ಸದಾಶಿವ ಕುಂಬಾರ, ಶಶಿಧರ ಕಡಪಡಿ, ನಗರಸಭೆ ವ್ಯವಸ್ಥಾಪಕ ಬಾಬುರಾವ ಕಮತಗಿ, ಹೊಳಬಸು ಚಿಂಚಖಂಡಿ, ಬಸವರಾಜ ಹೊಸೂರ, ರಾಮಣ್ಣಾ ಹುಲಕುಂದ, ಬಸವರಾಜ ಮನ್ಮಿ, ಮಹಾಂತೇಶ ಬದಾಮಿ, ಶಾಂತಾ ಸೊರಗಾಂವಿ, ವೀರಭದ್ರಪ್ಪ ಕುಳ್ಳಿ, ಶ್ರೀಶೈಲ ಗಣೇಶನವರ, ಶಿವಾನಂದ ಕುಳ್ಳಿ, ಮಾಲಾ ಬಾವಲತ್ತಿ, ಪೂರ್ಣಿಮಾ ಮಾಲೇಗಾಂವಿ, ಶೋಭಾ ಅಂಬಲಿ, ಹೇಮಲತಾ ಪಟ್ಟಣ, ಶ್ರೀಮಂತ ಹಿಡಕಲ್ ಸೇರಿದಂತೆ ಅನೇಕರಿದ್ದರು.