ಕನ್ನಡಪ್ರಭ ವಾರ್ತೆ ಬೀಳಗಿ

ವಿಶ್ವಕರ್ಮ ಸಮಾಜ ದೇಶದ ಅತ್ಯಂತ ಪ್ರಾಚೀನ ಕುಶಲಕರ್ಮಿಗಳ ಸಮಾಜವಾಗಿದ್ದು, ದೇಶದ ಮೊದಲ ನಗರ ನಿರ್ಮಾಣ ಮಾಡಿದವರೂ ವಿಶ್ವಕರ್ಮರು ಆಗಿದ್ದಾರೆ ಎಂದು ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಕಾಳಿಕಾಕಮಠೇಶ್ವರ ದೇವಸ್ಥಾನದ ದಶಮಾನೋತ್ಸವ ಹಾಗೂ ಯುಗಾದಿ ಸಂಭ್ರಮದ ನಿಮಿತ್ತ ದೇವಸ್ಥಾನ ಸಿದ್ದೇಶ್ವರ ಗುಡಿ ರಸ್ತೆ ಪಕ್ಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ವಿಶ್ವಕರ್ಮರು ಜಗತ್ತಿನಲ್ಲಿ ಸುವರ್ಣ ನಗರಗಳನ್ನು ನಿರ್ಮಿಸಿದವರಾಗಿದ್ದು, ಕರ್ಮ ವೃತ್ತಿ, ವೈಷ್ಯ ವೃತ್ತಿ ಹಾಗೂ ಭಿಕ್ಷಾ ವೃತ್ತಿ ಎಂಬ ಮೂರು ಪ್ರಮುಖ ವೃತ್ತಿಗಳು ಸಮಾಜದಲ್ಲಿ ಅಸ್ತಿತ್ವದಲ್ಲಿವೆ. ಈ ಮೂರು ವೃತ್ತಿಗಳನ್ನು ತೆಗೆದು ಹಾಕಿದರೆ ನಾಲ್ಕನೇ ವೃತ್ತಿಯೇ ಇರುವುದಿಲ್ಲ ಎಂದು ಹೇಳಿದರು.

ವಿಶ್ವಕರ್ಮ ಸಮಾಜದವರು ತಾಮ್ರ, ಕಬ್ಬಿಣ ಸೇರಿದಂತೆ ವಿವಿಧ ಧಾತುಗಳನ್ನು ಬಳಸಿ ಕಲಾತ್ಮಕ ವಸ್ತುಗಳನ್ನು ತಯಾರಿಸುವಲ್ಲಿ ಪರಿಣತರಾಗಿದ್ದಾರೆ. ಪ್ರಾಚೀನ ಕಾಲದಿಂದಲೂ ಮನೆಮಟ್ಟದಲ್ಲೇ ಸಾಕಷ್ಟು ಧಾತುಗಳನ್ನು ತಯಾರಿಸಿ, ವಿದೇಶಿ ವ್ಯಾಪಾರಿಗಳಿಗೂ ಮಾರಾಟ ಮಾಡುತ್ತಿದ್ದರು. ಸುಮಾರು 350ಕ್ಕೂ ಅಧಿಕ ಪ್ರಕಾರದ ಧಾತುಗಳನ್ನು ತಯಾರಿಸುವ ಮೂಲಕ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ತಿಳಿಸಿದರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಪದ್ಮಶ್ರೀ ಪುರಸ್ಕೃತ ಹಾಗೂ ಮಾಜಿ ದಿವ್ಯಾಂಗ ಅಧಿನಿಯಮದ ರಾಜ್ಯ ಆಯುಕ್ತ ಡಾ.ಕೆ.ಎಸ್. ರಾಜಣ್ಣ, ಸಾಧನೆ ಮಾಡಲು ಅಂಗಾಂಗಗಳು ಮುಖ್ಯವಲ್ಲ, ದೃಢ ಸಂಕಲ್ಪ ಮುಖ್ಯ. ಅಂಗವಿಕಲರಿಗೆ ರಾಜಕೀಯವಾಗಿ ಹೆಚ್ಚಿನ ಅವಕಾಶಗಳು ಸಿಗಬೇಕು. ಅಂಗವಿಕಲರ ಇಲಾಖೆಯ ರಾಜ್ಯ ಆಯುಕ್ತರನ್ನಾಗಿ ಅಂಗವಿಕಲ ವ್ಯಕ್ತಿಯನ್ನೇ ನೇಮಿಸಬೇಕು. ವಿಶೇಷ ಚೇತನ ಮಕ್ಕಳನ್ನು ದೇವರಂತೆ ಕಂಡು, ಅವರಿಗೆ ಅನುಕಂಪದ ಬದಲು ಅವಕಾಶಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ಪ್ರಾಧ್ಯಾಪಕ ಡಾ. ವೀರೇಶ ಬಡಿಗೇರ ಅವರು ಕಾರ್ಯಕ್ರಮದ ಪ್ರಸ್ತಾವಿಕ ನುಡಿಗಳನ್ನಾಡಿದರು. ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಕಾಳಿ ಪುತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ಅಭಿಷೇಕ, ಮಂಗಳಾರತಿ ಹಾಗೂ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಜರುಗಿತು. ಪುರವಂತರ ಸೇವೆಯೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು. ಕಾರ್ಯಕ್ರಮ ಆವರಣದಲ್ಲಿ ವಿವಿಧ ಕಲಾಕಾರರು ಮಳಿಗೆ ನೋಡುಗರ ಗಮನ ಸೆಳೆಯಿತು,ಸಂಜೆ ಆರಂಭಗೊಳ್ಳುತ್ತಿರುವ ಲಕ್ಷ ದೀಪೋತ್ಸವ ಭಕ್ತರ ಕಣ್ಮನ ಸೆಳೆಯಿತು.

ತಾಲೂಕು ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಅಧ್ಯಕ್ಷ ನಾಗರಾಜ ಟಂಕಸಾಲಿ, ಮುಧೋಳ ತಾಲೂಕು ಶಿರೋಳದ ಶಂಕರಾರೂಡ ಮಹಾಸ್ವಾಮಿಜೀ,ಚಿಕ್ಕಾಲಗುಂಡಿಯ ಶರಣಾನಂದ ಶ್ರೀಗಳು, ವಿಜಯಪೂರದ ಕೃಷಿ ಹಾಗೂ ಗಣ್ಯ ವ್ಯಾಪಾರಸ್ಥರಾದ ಈರಣ್ಣ ಪತ್ತಾರ, ಪ್ರಕಾಶ ಸೋನಾರ, ಭಾಗ್ಯಲಕ್ಷ್ಮಿ ರಾಜಣ್ಣ, ಶಿಕ್ಷಕ ಎಸ್.ಎಸ್ ಬಡಿಗೇರ, ವಿನಯ ಟಂಕಸಾಲಿ, ಕಿರಣ್ ಬಡಿಗೇರ,ಚಂದ್ರಕಾoತ ಪತ್ತಾರ, ಅನಿಲ ಬಡಿಗೇರ, ದೇವೇಂದ್ರ ಬಡಿಗೇರ, ರಮೇಶ ಪತ್ತಾರ (ಬೆಳ್ಳೂಬ್ಬಿ) ಶ್ರೀನಿವಾಸ ಟಂಕಸಾಲಿ ಇತರರು ಇದ್ದರು.