ಹೊಸಪೇಟೆ: ದೀನ ದಲಿತರ, ಹಿಂದುಳಿದ ವರ್ಗ ಹಾಗೂ ಗ್ರಾಮೀಣ ಭಾಗದ ಜನರ ನೈಜ ಸಮಸ್ಯೆಗಳನ್ನು ಹತ್ತಿರದಿಂದ ಕಂಡು ಬೆಳೆದ ಡಿ. ದೇವರಾಜ ಅರಸು ಅವರು ರಾಜ್ಯ ರಾಜಕೀಯ ಇತಿಹಾಸದಲ್ಲಿ ಸಾಮಾಜಿಕ ನ್ಯಾಯದ ಹರಿಕಾರರಾಗಿ ಗುರುತಿಸಿಕೊಂಡಿದ್ದಾರೆ ಎಂದು ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎಫ್.ಟಿ. ಹಳ್ಳಿಕೇರಿ ಹೇಳಿದರು.

ನಗರದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಸಂಯುಕ್ತಾಶ್ರಯದಲ್ಲಿ ಜಿಪಂ ಸಭಾಂಗಣದಲ್ಲಿ ಗುರುವಾರ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಡಿ. ದೇವರಾಜ ಅರಸು ಅವರು ಕೇವಲ ರಾಜಕಾರಣಿಯಾಗಿರಲಿಲ್ಲ. ಬದಲಾಗಿ ಬಡವರು, ರೈತರು, ದಲಿತರು, ಹಿಂದುಳಿದವರು ಮತ್ತು ಅವಕಾಶ ವಂಚಿತರ ಬದುಕಿನಲ್ಲಿ ಬದಲಾವಣೆ ತರಲು ಪ್ರಯತ್ನಿಸಿದ ಜನಪರ ನಾಯಕರಾಗಿದ್ದರು ಎಂದರು.

ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿ, ದೇವರಾಜ ಅರಸು ಅವರು ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಶೋಷಿತ ವರ್ಗಗಳ ಧ್ವನಿಗೆ ಆಡಳಿತದಲ್ಲಿ ಹೊಸ ಶಕ್ತಿ ನೀಡಿದ ದೂರದೃಷ್ಟಿಯ ನಾಯಕರು ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಶಿವಮೂರ್ತಿ ಮಾತನಾಡಿ, ಸಾಮಾಜಿಕ ನ್ಯಾಯ, ಸಮ ಸಮಾಜ ನಿರ್ಮಾಣದ ಕನಸು ಕಂಡ ಧೀಮಂತ ವ್ಯಕ್ತಿ ಡಿ. ದೇವರಾಜ ಅರಸು ಎಂದು ಬಣ್ಣಿಸಿದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಜಿಲ್ಲೆಗೆ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ, ಅಪರ ಜಿಲ್ಲಾಧಿಕಾರಿ ಈ. ಬಾಲಕೃಷ್ಣ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಿ. ಶಶಿಕಲಾ ಇದ್ದರು.