ಯಾರಿಗೂ ಹೆದರಿ ಅಭಿವೃದ್ಧಿ ಕಾಮಗಾರಿ ಮಾಡುತ್ತಿಲ್ಲ

| Published : Nov 17 2025, 12:15 AM IST

ಸಾರಾಂಶ

ಜನರಿಗೆ ಶಾಶತ್ವಗಾಗಿ ನೆಲೆಗೊಳ್ಳುವಂತಹ ದೂರದೃಷ್ಟಿಯನ್ನು ಇಟ್ಟುಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು. ಕ್ಷೇತ್ರದ ಯುವಕ ಯುವತಿಯರಿಗೆ ಜನತೆಗೆ ಉದ್ಯೋಗಾವಕಾಶಗಳು ಸಿಗುವಂತಾಗಬೇಕು, ಅದರ ಮೂಲಕ ಆರ್ಥಿಕ ಸಬಲರಾಗಬೇಕು. ಅಭಿವೃದ್ಧಿ ಎಂಬ ಪದಕ್ಕೆ ಮೊದಲು ಅವರಿಗೆ ಅರ್ಥ ಗೊತ್ತಿಲ್ಲ. ಅದನ್ನು ಮೊದಲು ತಿಳಿಯಲಿ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಯಾರಿಗೂ ಹೆದರಿ ಕಾಮಗಾರಿಗಳನ್ನು ಮಾಡುತ್ತಿಲ್ಲ. ಬದಲಾಗಿ ಅಭಿವೃದ್ಧಿ ಎಂಬುದು ನಮ್ಮ ಕುಟುಂಬದ ರಕ್ತದಲ್ಲಿದೆ. ಯಾರಿಂದಲೂ ಅಭಿವೃದ್ಧಿ ವಿಚಾರ ಕಲಿಯಬೇಕಾಗಿಲ್ಲ ಎಂದು ಮಾಜಿ ಶಾಸಕರ ಹೆಸರು ಹೇಳದೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಟಾಂಗ್ ನೀಡಿದರು.

ನಗರದ ಮಾಳ್ಳಪಲ್ಲಿಯ ಅಂಜನಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ನವೆಂಬರ್ ೨೪ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಶಿಡ್ಲಘಟ್ಟಕ್ಕೆ ಬರುತ್ತಿದ್ದ ಅಂದು ನಮ್ಮ ಚಿಂತಾಮಣಿ ಕ್ಷೇತ್ರದಿಂದ ೨೫ ಸಾವಿರಕ್ಕೂ ಅಧಿಕ ಜನರು ಅ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಿದೆಯೆಂದರು.

ಕ್ಷೇತ್ರದ ಅಭಿವೃದ್ಧಿಗೆ ಅದ್ಯತೆ

ಪ್ರಜಾಪ್ರಭುತ್ವದ ಮೇಲೆ ಅಪಾರ ಗೌರವವಿದೆ. ಸೋಲು-ಗೆಲವು ಸಹಜವಾಗಿದ್ದು ಅದನ್ನು ನಾನು ಕಂಡಿದ್ದು, ನಾನು ಮತ್ತು ನಮ್ಮ ಕುಟುಂಬ ಯಾವಾಗಲೂ ಕ್ಷೇತ್ರದ ಅಭಿವೃದ್ಧಿಗೆ ಅದ್ಯತೆಯನ್ನು ನೀಡುತ್ತೇವೆ ಮತ್ತು ಅದರ ಕಲೆ, ಇಚ್ಛಾಶಕ್ತಿ ನಮ್ಮಲ್ಲಿದೆ. ಜನರಿಗೆ ಶಾಶತ್ವಗಾಗಿ ನೆಲೆಗೊಳ್ಳುವಂತಹ ದೂರದೃಷ್ಟಿಯನ್ನು ಇಟ್ಟುಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು. ಕ್ಷೇತ್ರದ ಯುವಕ ಯುವತಿಯರಿಗೆ ಜನತೆಗೆ ಉದ್ಯೋಗಾವಕಾಶಗಳು ಸಿಗುವಂತಾಗಬೇಕು, ಅದರ ಮೂಲಕ ಆರ್ಥಿಕ ಸಬಲರಾಗಬೇಕೆಂದು ನಮ್ಮ ಜವಾಬ್ದಾರಿ ಎಂದರು.

ತಮ್ಮನ್ನು ಟೀಕಿಸಿದವರು ಅಧಿಕಾರದಲ್ಲಿದ್ದಾಗ ವಿಧಾನಸಭೆಯ ಕಲಾಪಗಳಲ್ಲಿ ನನ್ನ ಮತ್ತು ನನ್ನ ಕುಟುಂಬದ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿಕೊಂಡು ಕಾಲಹರಣ ಮಾಡಿದ್ದೀರಿಯೇ ಹೊರತು ಅಭಿವೃದ್ಧಿ ಕೆಲಸಗಳನ್ನು ಮಾಡಲಿಲ್ಲ. ಅಭಿವೃದ್ಧಿ ಎಂಬ ಪದಕ್ಕೆ ಮೊದಲು ಅವರಿಗೆ ಅರ್ಥ ಗೊತ್ತಿಲ್ಲ. ಅದನ್ನು ಮೊದಲು ತಿಳಿಯಲಿ. ಪಿಎಲ್‌ಡಿ ಬ್ಯಾಂಕ್‌ನ ಪುನಶ್ಚೇತನವನ್ನು ಏಕೆ ಮಾಡಲಿಲ್ಲವೆಂದು ಪ್ರಶ್ನಿಸಿದರು.

ಕಾನೂನು ಉಲ್ಲಂಘನೆ ಮಾಡಿಲ್ಲ

ಕಾನೂನು ಬಿಟ್ಟು ಯಾವುದೇ ಕೆಲಸಗಳನ್ನು ಮಾಡಿಲ್ಲ ನಮ್ಮ ಕುಟುಂಬಕ್ಕಾಗಿ ಯಾವುದೇ ಕೆಲಸಗಳನ್ನು ಮಾಡಿಕೊಂಡಿಲ್ಲವೆಂದು, ಭಯವೆಂಬುದು ನಮ್ಮ ರಕ್ತದಲ್ಲೇ ಇಲ್ಲ. ಭಯವೆಂಬುದು ಅವರ ರಕ್ತದಲ್ಲಿರಬಹುದು. ಬೇಕಿದ್ದರೆ ರಕ್ತ ಪರೀಕ್ಷೆ ಮಾಡಿಸಿಕೊಳ್ಳಲಿ ಎಂದು ಹೇಳಿದರು.

ಉಸ್ತುವಾರಿ ಸಚಿವನಾದ ತಾವು ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದೇನೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದು ಶಿಡ್ಲಘಟ್ಟದ ಹನುಮಂತಪುರ ಗೇಟ್ ಬಳಿ ನಡೆಯಲಿರುವ ಸಭೆಗೆ ಭಾಗವಹಿಸಿ ಚಿಂತಾಮಣಿ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಒಗ್ಗಟ್ಟನ್ನು ಪ್ರದರ್ಶಿಸಬೇಕೆಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

ಅಂರಾ ಮಟ್ಟದ ಕ್ರೀಡಾಂಗಣ

ರಾಜಣ್ಣರ ಸಹಕಾರದಿಂದ ಡಿಸಿಸಿ ಬ್ಯಾಂಕ್‌ನ್ನು ಬೇರೆಡೆಗೆ ಸ್ಥಳಾಂತರ ಮಾಡಲು ಪ್ರಯತ್ನವನ್ನು ನಡೆಸಿದ್ದು ಆದರಂತೆ ಯುವಜನ ಸಬಲೀಕರಣದಿಂದ ೨ಕೋಟಿ ೮೦ ಲಕ್ಷ ಹಣ ಡಿಸಿಸಿ ಬ್ಯಾಂಕ್ ಸ್ಥಳಾಂತರಕ್ಕೆ ನೀಡಲಾಗಿದೆ. ಡಿಸಿಸಿ ಬ್ಯಾಂಕ್ ಇದ್ದ ಸ್ಥಳದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು. ಹಿಂದಿನವರು ಮಾಡದ ಅಭಿವೃದ್ಧಿ ಕೆಲಸಗಳನ್ನು ತಾವು ಮಾಡುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣವನ್ನು ೯ ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲಾಗುವುದು. ಅಲ್ಲದೆ ಮಸ್ತೇನಹಳ್ಳಿ ಕೈವಾರ ಪಟ್ಟಣ ಪಂಚಾಯತಿಯನ್ನಾಗಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಮುಂಬರುವ ದಿನಗಳಲ್ಲಿ ಗ್ರಾಪಂ, ತಾಪಂ, ಜಿಪಂ, ನಗರಸಭೆ, ಸ್ಥಳೀಯ ಚುನಾವಣೆಗಳು, ಎಪಿಎಂಸಿ, ಹಾಲು ಉತ್ಪಾದಕರ ಸಹಕಾರ ಸಂಘ ಸೇರಿದಂತೆ ನಾನಾ ಚುನಾವಣೆಗಳಲ್ಲಿ ಕಾರ್ಯಕರ್ತರನ್ನು ಮುಖಂಡರನ್ನು ಗೆಲ್ಲಿಸಿಕೊಳ್ಳಬೇಕು ಹಾಗೂ ಚಿಮೂಲ್ ರಚನೆಯಾಗಿದ್ದು ಅದರ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲು ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದ ವಿವಿಧ ಪದಾಧಿಕಾರಿಗಳು, ಮುಖಂಡರುಗಳು, ನಗರಸಭಾ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.