ತಾಲೂಕಿನ ತುಂಗಭದ್ರಾ ನದಿ ತೀರದ ಮೈಲಾರಲಿಂಗೇಶ್ವರ ಜಾತ್ರೆಯ ಕಾರ್ಣಿಕ ನುಡಿಯ ಮೇಲೆ ಅಪಾರ ನಂಬಿಕೆ ಹೊಂದಿರುವ ಭಕ್ತರು, ರಾಜ್ಯ ಅಂತರಾಜ್ಯಗಳಿಂದ ದೈವವಾಣಿ ಕಾರ್ಣಿಕ ನುಡಿ ಆಲಿಸಲು ಆಗಮಿಸಿ ಸ್ವಾಮಿ ದರ್ಶನ ಪಡೆಯುತ್ತಾರೆ.
ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ಶತಮಾನಗಳ ಕಾಲ ಇತಿಹಾಸವಿರುವ ಸುಕ್ಷೇತ್ರ ಮೈಲಾರಲಿಂಗೇಶ್ವರ ಜಾತ್ರೆಯ ಕೇಂದ್ರವಾದ ಕಾರ್ಣಿಕ ಸ್ಥಳ ಡೆಂಕಣ ಮರಡಿ ಪುಣ್ಯ ಭೂಮಿಯಲ್ಲಿ ಫೆ.4ರಂದು ಸಂಜೆ 5.30ಕ್ಕೆ ನಡೆಯುವ ಭಂಡಾರ ಒಡೆಯನ ಭವಿಷ್ಯ ವಾಣಿ ಆಲಿಸಲು ಲಕ್ಷಾಂತರ ಭಕ್ತ ಗಣ ಕಾತುರದಿಂದ ಕಾಯುತ್ತಿದೆ.ತಾಲೂಕಿನ ತುಂಗಭದ್ರಾ ನದಿ ತೀರದ ಮೈಲಾರಲಿಂಗೇಶ್ವರ ಜಾತ್ರೆಯ ಕಾರ್ಣಿಕ ನುಡಿಯ ಮೇಲೆ ಅಪಾರ ನಂಬಿಕೆ ಹೊಂದಿರುವ ಭಕ್ತರು, ರಾಜ್ಯ ಅಂತರಾಜ್ಯಗಳಿಂದ ದೈವವಾಣಿ ಕಾರ್ಣಿಕ ನುಡಿ ಆಲಿಸಲು ಆಗಮಿಸಿ ಸ್ವಾಮಿ ದರ್ಶನ ಪಡೆಯುತ್ತಾರೆ.
ಕಾರ್ಣಿಕ ಸ್ಥಳ ಡೆಂಕಣ ಮರಡಿಯಲ್ಲಿ ಶಿವ- ಪಾರ್ವತಿಯರು ಮೈಲಾರಲಿಂಗ- ಗಂಗಿಮಾಳಮ್ಮನ ವೇಷದಲ್ಲಿ ಬಂದು ಡೆಂಕಣ ಮರಡಿಯಲ್ಲಿ ಮಲ್ಲಾಸುರ- ಮಣಿಕಾಸುರರನ್ನು ಸಂಹರಿಸಿದ, ವಿಜಯದ ಸಂಕೇತವಾಗಿ ಭಕ್ತರ ಆಶಯದಂತೆ ಶುಭ ನುಡಿಯನ್ನು ದೇವವಾಣಿ ಕಾರ್ಣಿಕ ಎಂದು ಹೇಳಲಾಗುತ್ತಿದೆ.ಫೆ.4ರಂದು ಸಂಜೆ 5.30ಕ್ಕೆ ಡೆಂಕಣ ಮರಡಿಯಲ್ಲಿ ರಥ ಸಪ್ತಮಿ ದಿನದಿಂದ 11 ದಿನಗಳ ಕಾಲ ಉಪವಾಸ ವ್ರತದಲ್ಲಿರುವ ಕಾರ್ಣಿಕ ನುಡಿಯುವ ಗೊರವಯ್ಯ, 20 ಅಡಿ ಉದ್ದದ ಐತಿಹಾಸಿಕ ತುಪ್ಪ ಸವರಿದ ಬಿಲ್ಲನ್ನು ಏರಿ ಸದ್ದಲೇ...! ಎಂದಾಗ, ನೆರೆದಿರುವ ಲಕ್ಷಾಂತರ ಭಕ್ತರು, ಪಶು, ಪಕ್ಷಿ ಸೇರಿದಂತೆ ಎಲ್ಲ ಕಡೆಗೂ ನಿಶ್ಯಬ್ಧವಾಗುತ್ತದೆ. ಆ ಕ್ಷಣದಲ್ಲೇ ಗೊರವಯ್ಯ ಕಾರ್ಣಿಕ ನುಡಿಯುವುದು ಸಂಪ್ರದಾಯ. ಇದು 125ನೇ ವರ್ಷದ ಕಾರ್ಣಿಕ ನುಡಿಯಾಗಿದೆ.
ಮೈಲಾರಲಿಂಗೇಶ್ವರನ ಕಾರ್ಣಿಕದ ನುಡಿಯಲ್ಲಿ ವರ್ಷದ ಮಳೆ, ಬೆಳೆ, ರಾಜಕೀಯ ಏಳು-ಬೀಳು, ಆರ್ಥಿಕ ವಾಣಿಜ್ಯ ಸ್ಥಿತಿಗತಿಗಳು ಸೇರಿದಂತೆ ಇನ್ನಿತರ ದೇಶದ ಭವಿಷ್ಯ ಈ ಕಾರ್ಣಿಕದಲ್ಲಿ ಅಡಗಿರುತ್ತದೆ. ಕಳೆದ ವರ್ಷ 124ನೇ ವರ್ಷ ತುಂಬಿದ ಕೊಡ ತುಳುಕಿತಲೇ ಪರಾಕ್ ಎಂದು ಗೊರವಯ್ಯ ದೇವವಾಣಿಯನ್ನು ನುಡಿದಿದ್ದನು.ಪ್ರತಿ ವರ್ಷ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯು ಸತ್ಯಾಂಶ ಸಾರುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಕಾರ್ಣಿಕ ನುಡಿಯಲ್ಲಿ ಭಕ್ತರು ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿ ಹುಣ್ಣಿಮೆ, ಅಮವಾಸ್ಯೆ ಸೇರಿದಂತೆ ಇತರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ದೇವಸ್ಥಾನದ ವಂಶ ಪಾರಂಪರ್ಯ ಧರ್ಮದರ್ಶಿ ಗುರು ವೆಂಕಪ್ಪಯ್ಯ ಒಡೆಯರ್, ಅರ್ಚಕ ಪ್ರಮೋದ್ ಭಟ್, ಭಗಣಿ ಗೂಟ ಪವಾಡ ಮಾಡುವ ಕಂಚವೀರರು, ಸರಪಳಿ ಪವಾಡ ಮಾಡುವ ಗೊರವರು ಸೇರಿದಂತೆ ವಿವಿಧ ಸ್ವಾಮಿ ಸೇವೆ ಮಾಡುವ ಬಾಬುದಾರರು ಇರಲಿದ್ದಾರೆ.
ಕಾರ್ಣಿಕ ನುಡಿಯುವ ಘಟನಾವಳಿ:ಕಳೆದ 125 ವರ್ಷಗಳಿಂದ ನಡೆದು ಬಂದ ಮೈಲಾರಲಿಂಗೇಶ್ವರ ಕಾರ್ಣಿಕದಲ್ಲಿ ಭವಿಷ್ಯವಾಣಿ ಅಡಗಿದೆ ಎಂಬುದಕ್ಕೆ 1856ರಲ್ಲಿ ಕೆಂಪು ನೊಣಗಳಿಗೆ ಕಷ್ಟ ಪ್ರಾಪ್ತಿಯಾದೀತಲೇ ಪರಾಕ್ ಎಂಬ ಕಾರ್ಣಿಕ ನುಡಿಯ ಹಿನ್ನೆಲೆಯಲ್ಲಿ ಬ್ರಿಟಿಷರ ವಿರುದ್ಧ ಸಿಪಾಯಿ ದಂಗೆ ನಡೆಯಿತು. 1984ರಲ್ಲಿ ಇಬ್ಬನಿ ಕರಗಿತಲೇ ಪರಾಕ್ ಕಾರ್ಣಿಕ ನುಡಿದಾಗ, ದೇಶದ ಅಂದಿನ ಮಹಿಳಾ ಪ್ರಧಾನಿ ಇಂದಿರಾಗಾಂಧಿ ಮೃತಪಟ್ಟರು. 1991ರಲ್ಲಿ ಮುತ್ತು ಒಡೆದು ಮೂರು ಭಾಗ ಆದಿತಲೇ ಪರಾಕ್ ಎಂಬ ಕಾರ್ಣಿಕ ನುಡಿದಾಗ, ಪ್ರಧಾನಿ ರಾಜೀವ್ ಗಾಂಧಿ ಬಾಂಬ್ ಸ್ಫೋಟದಿಂದ ನಿಧನ ಹೊಂದಿದ ನಿದರ್ಶನಗಳಿವೆ ಎನ್ನುತ್ತಾರೆ ದೇವಸ್ಥಾನದ ವಂಶ ಪಾರಂಪರ್ಯ ಧರ್ಮದರ್ಶಿ ಗುರು ವೆಂಕಪ್ಪಯ್ಯ ಒಡೆಯರ್. ಇಂತಹ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕ ನುಡಿಯಲ್ಲಿ ದೇಶದ ಭವಿಷ್ಯವೇ ಅಡಗಿದೆ ಎಂಬ ಸತ್ಯಾಂಶ ಕಂಡು ಬರುತ್ತದೆ. ಈ ಬಾರಿಯ ಕಾರ್ಣಿಕ ನುಡಿಯಲ್ಲಿ ಏನು ಅಡಗಿದೆ ಎಂಬ ಕಾತುರದಲ್ಲಿ ಭಕ್ತರಿದ್ದಾರೆ.ಕುರಿಹಾಲು ಮೊಸರಾಯ್ತು...!
ರಾಣಿಬೆನ್ನೂರು ತಾಲೂಕಿನ ಮೇಡ್ಲೇರಿ ಸೇರಿದಂತೆ ಸುತ್ತಮುತ್ತಲಿನ ಕುರಿಗಾಹಿಗಳು, ಮೈಲಾರಲಿಂಗೇಶ್ವರ ಸ್ವಾಮಿ ಸ್ಮರಿಸಿ ತಮ್ಮ ಕುರಿಹಟ್ಟಿಯಲ್ಲಿರುವ ಕುರಿ ಹಾಲನ್ನು ಕರೆದು ಮಣ್ಣಿನ ಮಡಿಕೆಯಲ್ಲಿ ಹಾಕಿ ತಲೆಮೇಲಿಟ್ಟುಕೊಂಡು ಸುಕ್ಷೇತ್ರಕ್ಕೆ ಪಾದಯಾತ್ರೆ ಬರುತ್ತಾರೆ. ತುಂಗಭದ್ರಾ ನದಿಯನ್ನು ದಾಟಿದ ತಕ್ಷಣವೇ ಆ ಹಾಲು ಮೊಸರಾಗುತ್ತದೆ. ಅದೇ ಮೊಸರನ್ನು ದೇವರಿಗೆ ಅರ್ಪಿಸಿದ ಬಳಿಕ ಎಲ್ಲರೂ ಪ್ರಸಾದ ಸ್ವೀಕರಿಸಿದರು.ಪೊಲೀಸ್ ಬಂದೋಬಸ್ತ್:
ಮೈಲಾರ ಕಾರ್ಣಿಕೋತ್ಸವಕ್ಕೆ ಅಪಾರ ಸಂಖ್ಯೆ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. 4 ಎಎಸ್ಪಿ, 8 ಡಿವೈಎಸ್ಪಿ. 25 ಸಿಪಿಐ, 68 ಪಿಎಸ್‌ಐ, 101 ಎಎಸ್‌ಐ, 1134 ಎಚ್‌ಸಿ, ಪಿಸಿ, 94 ಮಹಿಳಾ ಪಿಸಿ, 882 ಗೃಹರಕ್ಷಕ ಸಿಬ್ಬಂದಿ, 5 ಕೆಎಸ್‌ಆರ್‌ಪಿ ತುಕಡಿ, 6 ಡಿಎಆರ್ ತುಕಡಿ ನೇಮಿಸಿ ರಸ್ತೆ ಸಂಚಾರ, ದೇವರ ದರ್ಶನ, ನದಿತೀರ, ಜಾತ್ರೆ ಸ್ಥಳ, ಕಾರ್ಣಿಕ ಸ್ಥಳ ಕೆಂಡಣ ಮರಡಿ ಸೇರಿದಂತೆ ವಿವಿಧ ಕಡೆಗಳಲ್ಲಿ ಪೊಲೀಸ್‌ರನ್ನು ನಿಯೋಜನೆ ಮಾಡಲಾಗಿದೆ.