ಬದುಕಿನ ದಾರಿ ತೋರುವ ಧರ್ಮಾಚರಣೆ: ಶ್ರೀ ರಂಭಾಪುರಿ ಶ್ರೀ ಗಳು

| Published : Sep 28 2024, 01:23 AM IST

ಬದುಕಿನ ದಾರಿ ತೋರುವ ಧರ್ಮಾಚರಣೆ: ಶ್ರೀ ರಂಭಾಪುರಿ ಶ್ರೀ ಗಳು
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ಸುಖಾಪೇಕ್ಷಿಯಾದ ಮನುಷ್ಯನ ಸುಖದ ಮೂಲ ಧರ್ಮಾಚರಣೆಯಲ್ಲಿದ್ದು. ಕಣ್ಣೀರಿನ ಹನಿ ಜೀವನದಲ್ಲಿ ಹೇಗಿರಬೇಕೆಂದು ಕಲಿಸಿದರೆ ಧರ್ಮಾಚರಣೆ ಬದುಕಿನ ದಾರಿ ತೋರಿಸುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.

ಆಸಂದಿ ಗ್ರಾಮದ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ಮಠದ ಸಭಾಂಗಣದಲ್ಲಿ ನಡೆದ ಇಷ್ಟಲಿಂಗ ಮಹಾಪೂಜಾ

ಕನ್ನಡಪ್ರಭ ವಾರ್ತೆ ಕಡೂರು

ಸುಖಾಪೇಕ್ಷಿಯಾದ ಮನುಷ್ಯನ ಸುಖದ ಮೂಲ ಧರ್ಮಾಚರಣೆಯಲ್ಲಿದ್ದು. ಕಣ್ಣೀರಿನ ಹನಿ ಜೀವನದಲ್ಲಿ ಹೇಗಿರಬೇಕೆಂದು ಕಲಿಸಿದರೆ ಧರ್ಮಾಚರಣೆ ಬದುಕಿನ ದಾರಿ ತೋರಿಸುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.

ತಾಲೂಕಿನ ಆಸಂದಿ ಗ್ರಾಮದ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ಮಠದ ಸಭಾಂಗಣದಲ್ಲಿ ನಡೆದ ಇಷ್ಟಲಿಂಗ ಮಹಾಪೂಜಾ ಮತ್ತು ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹಾಲು ಸ್ವಚ್ಛವಾಗಿದ್ದು ಪಾತ್ರೆ ಸ್ವಚ್ಛ ಇರದಿದ್ದರೆ ಕೆಟ್ಟು ಹೋಗುತ್ತದೆ. ಮಾತು ಸ್ವಚ್ಛವಾಗಿದ್ದು ಮನಸ್ಸು ಸ್ವಚ್ಛವಿರದಿದ್ದರೆ ಮಾತಿಗೆ ಬೆಲೆ ಇರುವುದಿಲ್ಲ. ಕಷ್ಟದಲ್ಲಿ ಜೊತೆಗಿದ್ದವರನ್ನು ಸುಖ ಬಂದಾಗ ಮರೆಯಬಾರದು. ಬಂಗಾರ ವನ್ನು ಎಷ್ಟು ಚೂರು ಮಾಡಿದರೂ ಅದರ ಬೆಲೆ ಕಡಿಮೆಯಾಗಲ್ಲ. ಒಳ್ಳೆತನದಿಂದ ಸಂಪಾದಿಸಿದ ಗೌರವ ಎಂದಿಗೂ ಮಾಸುವುದಿಲ್ಲ ಎಂದರು.

ಶ್ರೀ ಜಗದ್ಗುರು ರೇವಣಸಿದ್ಧೇಶ್ವರರು ರಂಭಾಪುರಿ ಪೀಠದ ಪರಮಾಚಾರ್ಯರು. ನೊಂದವರ ಧ್ವನಿಯಾಗಿ ಜನರಿಗೆ ಸಂಸ್ಕಾರ ಪ್ರಜ್ಞೆ ಬೋಧಿಸಿದ ಮಹಾಪುರುಷರು. ಹಾಲು ಮತ ಸಮಾಜ ಬಾಂಧವರಿಗೆ ಭಕ್ತಿಯ ಶಕ್ತಿ ತುಂಬಿದವರು. ಶ್ರೀ ಜಗದ್ಗುರು ರೇವಣಸಿದ್ಧೇಶ್ವರರಿಗೂ ಶ್ರೀ ಬೀರಲಿಂಗೇಶ್ವರ ಸ್ವಾಮಿಗೂ ಇರುವ ಸಂಬಂಧವನ್ನು ಎಷ್ಟು ಕೊಂಡಾಡಿದರೂ ಸಾಲದು. ಆಸಂದಿ ಶ್ರೀ ಗುರು ರೇವಣಸಿದ್ಧೇಶ್ವರ ಮಠದ ಮತ್ತು ಬೇಗೂರು ಶ್ರೀ ಬೀರ ಲಿಂಗೇಶ್ವರಸ್ವಾಮಿ ಗುಡಕಟ್ಟಿನ ಗೌಡರು, ದೊಡ್ಡಿಗೌಡರು ಹಾಗೂ ಉಭಯ ಕಾರ್ಯಕಾರಿ ವಿಶ್ವಸ್ಥ ಮಂಡಳಿಯವರು ಇಷ್ಟಲಿಂಗ ಮಹಾಪೂಜಾ ಮತ್ತು ಧರ್ಮ ಜಾಗೃತಿ ಸಮಾರಂಭ ಸಂಘಟಿಸಿರುವುದು ಜಗದ್ಗುರುಗಳಿಗೆ ಅತ್ಯಂತ ಸಂತೋಷ ತಂದಿದೆ. ಈ ಮಹತ್ಕಾರ್ಯ ಸಾಧನೆಗೆ ಶ್ರಮಿಸುತ್ತಿರುವ ಹಾಲು ಮತ ಬಾಂಧವರಿಗೆ ಒಳ್ಳೆಯದಾಗಲೆಂದು ಹೃದಯ ತುಂಬಿ ಹಾರೈಸಿದರು. ಎಡೆಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಕಷ್ಟಗಳು ಬಂದಾಗ ಯಾರ ಹತ್ತಿರ ಸಲಹೆ ಕೇಳ ಬೇಕೆಂಬುದು ಮುಖ್ಯ ಏಕೆಂದರೆ ದುರ್ಯೋಧನ ಶಕುನಿ ಹತ್ತಿರ ಸಲಹೆ ಕೇಳುತ್ತಿದ್ದ. ಆದರೆ ಅರ್ಜುನ ಶ್ರೀ ಕೃಷ್ಣನ ಬಳಿ ಸಲಹೆ ಕೇಳುತ್ತಿದ್ದ ಎಂಬುದನ್ನು ಮನುಷ್ಯ ಅರಿಯಬೇಕು ಎಂದರು.

ಕಡೂರು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಬಾಳೆಹೊನ್ನೂರು ಮಠಕ್ಕೂ ಹಾಲುಮತ ಸಮಾಜಕ್ಕೂ ಅವಿನಾಭಾವ ಸಂಭಂದವಿದೆ. ಶ್ರೀ ಗುರುರೇವಣಸಿದ್ದರು ಹಾಲುಮತ ಸಮಾಜದ ಮೂಲಪುರುಷರು ಅವರ ಕೃಪೆ ಮತ್ತು ಆದೇಶದಂತೆ ಸಮಾಜ ಧರ್ಮದ ಹಾದಿಯಲ್ಲಿದೆ. ಶ್ರೀ ಮಠದ ಅಭಿವೃದ್ಧಿ ಕಾರ್ಯಗಳಿಗೆ ರಂಭಾಪುರಿ ಶ್ರೀಗಳ ಆಶೀರ್ವಾದ ಬೇಕು ಎಂದರು.

ಬೀರೂರು ಶ್ರೀ ರಂಭಾಪುರಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿದರು. ಹುಣಸಘಟ್ಟದ ಹಾಲುಸ್ವಾಮಿ ಮಠದ ಶ್ರೀ ಗುರುಮೂರ್ತಿ ಸ್ವಾಮೀಜಿ, ಕೆ. ಬಿದರೆ ದೊಡ್ಡಮಠದ ಶ್ರೀ ಪ್ರಭುಕುಮಾರ ಸ್ವಾಮೀಜಿ, ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿ, ಹಣ್ಣೆ ಮಠದ ಶ್ರೀ ಮರುಳಸಿದ್ಧ ಪಂಡಿತಾರಾಧ್ಯ ಸ್ವಾಮೀಜಿ, ಒಡೆಯರ್ ವಂಶಸ್ಥರು ಮತ್ತು ಮಠದ ಮನೆಯ ಶ್ರೀಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.

ಶ್ರೀ ಗುರು ರೇವಣಸಿದ್ಧೇಶ್ವರ ಮಠದ ವಿಶ್ವಸ್ಥ ಮಂಡಳಿ ಅಧ್ಯಕ್ಷ ರೇವಣಪ್ಪ, ಕಾರ್ಯದರ್ಶಿ, ಅಭಾವೀ ಮಹಾಸಭಾ ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಂ.ಲೋಕೇಶ್, ಉಪನ್ಯಾಸಕ ಆಸಂದಿ ಕುಮಾರ್, ತುರುವನಹಳ್ಳಿ ರೇಣುಕಪ್ಪ ಮತ್ತಿತರರು ಮಾತನಾಡಿದರು.

-- ಬಾಕ್ಸ್ --- ಆಸಂದಿ ಗ್ರಾಮದ ಪ್ರವೇಶದ್ವಾರದಿಂದ ದೇವಸ್ಥಾನದವರೆಗೆ ಶ್ರೀ ರಂಭಾಪುರಿ ಶ್ರೀಗಳನ್ನು ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯಲ್ಲಿ ಬರಮಾಡಿಕೊಂಡರು. ಆನಂತರ ಶ್ರೀ ರಂಭಾಪುರಿ ಜಗದ್ಗುರು ಶ್ರೀ ಮಠದ ಜೀರ್ಣೋದ್ಧಾರ ಕಾರ್ಯ ಶೀಘ್ರವಾಗಿ ಜರುಗಿ ಹಾಲುಮತ ಸಮಾಜ ಬಾಂಧವರಿಗೆ ಒಳ್ಳೆಯದಾಗಲೆಂದು ಸಂಕಲ್ಪಿಸಿ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಶುಭ ಹಾರೈಸಿದರು.27ಕೆಕೆಡಿಯು1.ಕಡೂರು ತಾಲೂಕು ಆಸಂದಿ ಗ್ರಾಮದಲ್ಲಿ ನಿರ್ಮಾಣ ಮಾಡಬೇಕೆಂದಿರುವ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ಮಠದ ಸಭಾಂಗಣದಲ್ಲಿ ಇಷ್ಟಲಿಂಗ ಮಹಾಪೂಜಾ ಹಾಗೂ ಜನ ಜಾಗೃತಿ ಧರ್ಮ ಸಮಾರಂಭ ನಡೆಯಿತು.