ರಾಜ್ಯಾದ್ಯಂತ ಮಹಿಳೆಯರ ಸ್ವಾವಲಂಬನೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಾರಿಗೊಳಿಸಿರುವ ಯೋಜನೆಗಳು ಸಮಾಜಕ್ಕೆ ಮಾದರಿಯಾಗಿವೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಕನ್ನಡಪ್ರಭ ವಾರ್ತೆ ತರೀಕೆರೆ
ರಾಜ್ಯಾದ್ಯಂತ ಮಹಿಳೆಯರ ಸ್ವಾವಲಂಬನೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಾರಿಗೊಳಿಸಿರುವ ಯೋಜನೆಗಳು ಸಮಾಜಕ್ಕೆ ಮಾದರಿಯಾಗಿವೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.ತಾಲೂಕಿನಲ್ಲಿ ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟ, ಸಾಮೂಹಿಕ ಶ್ರೀ ಸತ್ಯನಾರಾಯಣಸ್ವಾಮಿ ಪೂಜಾ ಸಮಿತಿ, ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ, ವಿವಿಧ ಸಂಘ-ಸಂಸ್ಥೆಗಳು ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಸಮೀಪದ ಬಳ್ಳಾವರ ವಲಯದ ರೋಪ್ ಲೈನ್ ಗ್ರಾಮದ ಅಯ್ಯಪ್ಪ ಸ್ವಾಮಿ ದೇವಸ್ಥಾನ ಆವರಣದಲ್ಲಿ ಏರ್ಪಾಡಾಗಿದ್ದ ವಲಯ ಮಟ್ಟದ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ, ಧಾರ್ಮಿಕ ಸಭೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ರಾಜ್ಯಾದ್ಯಂತ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುವಂತೆ ಪ್ರೋತ್ಸಾಹಿಸುವ ಉದ್ದೇಶದಿಂದ ಗ್ರಾಮಾಭಿವೃದ್ಧಿ ಯೋಜನೆ ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ, ಅವುಗಳು ಮಹಿಳೆಯರ ಆರ್ಥಿಕ, ಸಾಮಾಜಿಕ ಸಬಲೀಕರಣಕ್ಕೆ ಮಹತ್ವದ ಪಾತ್ರ ವಹಿಸುತ್ತಿವೆ, ಸ್ವಸಹಾಯ ಸಂಘಗಳ ಸದಸ್ಯರಿಗೆ ಉದ್ಯೋಗಾಧಾರಿತ ತರಬೇತಿ ಹಾಗೂ ಸಾಲ ಸೌಲಭ್ಯಗಳ ಮೂಲಕ ಲಕ್ಷಾಂತರ ಮಹಿಳೆಯರು ಸ್ವತಂತ್ರ ಬದುಕಿನತ್ತ ಹೆಜ್ಜೆ ಇಡುತ್ತಿದ್ದಾರೆ ಎಂದು ಹೇಳಿದರು.ಸೂರ್ಯನಾರಾಯಣ ಶರ್ಮ ಉಪನ್ಯಾಸ ನೀಡಿ, ಸಂಸ್ಕೃತಿ ಮತ್ತು ಸಂಸ್ಕಾರಗಳು ಪ್ರತಿ ಮನೆಮನೆಗಳಲ್ಲಿ ಬೆಳೆಯಬೇಕು. ನಮ್ಮ ಧರ್ಮ ಮತ್ತು ಆಚರಣೆಗಳ ಕುರಿತು ವಿಶೇಷ ಒಲವು ಹೊಂದುವುದು ಇಂದಿನ ಅಗತ್ಯ, ಉತ್ತಮ ಧಾರ್ಮಿಕ ಸಂಸ್ಕಾರಗಳು ಮಾನವನ ಜೀವನಕ್ಕೆ ದಾರಿ ತೋರಿಸುವುದರ ಜತೆ ಉತ್ತಮ ಚಾರಿತ್ರ್ಯ ವ್ಯಕ್ತಿ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಶಾಂತಿ, ಆತ್ಮಸ್ಥೈರ್ಯ ಮತ್ತು ಸಾಮಾಜಿಕ ಸೌಹಾರ್ದತೆ ಹೆಚ್ಚುತ್ತದೆ,ಇಂದಿನ ಯುವ ಪೀಳಿಗೆ ಧರ್ಮ, ಸಂಸ್ಕೃತಿ ಮತ್ತು ಸಂಸ್ಕಾರಗಳ ಮಹತ್ವವನ್ನು ಅರಿತುಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ, ಕುಟುಂಬ, ಸಮಾಜ ಹಾಗೂ ರಾಷ್ಟ್ರ ಎಲ್ಲವೂ ಸದೃಢವಾಗುತ್ತವೆ ಎಂದು ಹೇಳಿದರು.
ತಾಲೂಕು ಯೋಜನಾಧಿಕಾರಿ ಕುಸುಮಾಧರ್ ಮಾತನಾಡಿ, ಯೋಜನೆ ವತಿಯಿಂದ ತಾಲೂಕಿನ ವಲಯ ಮಟ್ಟದಲ್ಲಿ ಗ್ರಾಮಸ್ಥರ ಸಹಯೋಗದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ, ಲಕ್ಷ್ಮಿ ಪೂಜೆ ಹಾಗೂ ಇತರ ಧಾರ್ಮಿಕ ಪೂಜಾ ಕಾರ್ಯಕ್ರಮ ಮೂಲಕ ಸದಸ್ಯರು ಮತ್ತು ಗ್ರಾಮಸ್ಥರಲ್ಲಿ ಧಾರ್ಮಿಕ ಕಾರ್ಯಕ್ರಮದ ಮಹತ್ವವನ್ನುತಿಳಿಸುತ್ತಿದ್ದೇವೆ ಎಂದರು.
ತಿಗಡ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನೀಲಮ್ಮ ಮಾತನಾಡಿ, ಗ್ರಾಮ ಮಟ್ಟದಲ್ಲಿ ನಡೆಯುತ್ತಿರುವ ಇಂತಹ ಧಾರ್ಮಿಕ ಕಾರ್ಯಕ್ರಮಗಳು ನಮಗೆ ಹೆಮ್ಮೆಯಾಗಿದೆ, ಇಂತಹ ಕಾರ್ಯಕ್ರಮಗಳು ಪ್ರತಿ ಗ್ರಾಮಗಳಲ್ಲೂ ನಡೆಯಲಿ ಎಂದು ಶುಭ ಹಾರೈಸಿದರು.ಅರ್ಚಕ ಶ್ರೀನಿವಾಸ್ ಸತ್ಯನಾರಾಯಣ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ರಮೇಶ್ ರಂಜನ್, ಮುಖಂಡರಾದ ಮೋಹನ್ ದಾಸ್, ರಾಧಾಕೃಷ್ಣ, ಮಂಜುನಾಥ್ ವಲಯದ ಮೇಲ್ವಿಚಾರಕ ವಸಂತ್, ಸೇವಾಪ್ರತಿನಿಧಿ ಕಲ್ಪನಾ, ವಲಯದ ಎಲ್ಲ ಒಕ್ಕೂಟದ ಪದಾಧಿಕಾರಿಗಳು, ಸ್ವಸಹಾಯ ಸಂಘಗಳ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.