ಕಾರಟಗಿ: ಇಲ್ಲಿನ ಹೊರ ವಲಯದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಆಡಳಿತ,ಬೋಧನಾ ಸಿಬ್ಬಂದಿ ಮತ್ತು ವಸತಿ ನಿಲಯದಲ್ಲಿನ ಅವ್ಯವಸ್ಥೆ,ಆಡಳಿತ ವೈಫಲ್ಯ,ಶಿಷ್ಟಾಚಾರ ಪಾಲನೆ ಗಾಳಿಗೆ ತೂರಿದ ಕುರಿತು ಜಿಲ್ಲಾಡಳಿತಕ್ಕೆ ವಿದ್ಯಾರ್ಥಿಗಳು ಲಿಖಿತ ದೂರು ನೀಡಿದ ಹಿನ್ನೆಲೆಗೆ ಗುರುವಾರ ವಿಚಾರಣಾ ಸಮಿತಿ ಪಾಲಿಟೆಕ್ನಿಕ್‌ಗೆ ಭೇಟಿ ನೀಡಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತು ಸಿಬ್ಬಂದಿಯನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದೆ.

ಜಿಲ್ಲಾಧಿಕಾರಿ ವಿದ್ಯಾರ್ಥಿಗಳ ದೂರನ್ನು ಗಂಭೀರವಾಗಿ ಪರಿಗಣಿಸಿ ವಿಚಾರಣೆಗೆ ಆದೇಶ ನೀಡಿದ ಹಿನ್ನೆಲೆಗೆ ಕೊಪ್ಪಳದ ಸರ್ಕಾರಿ ಪಾಲೆಟೆಕ್ನಿಕ್ ಪ್ರಾಚಾರ್ಯ ಕೆ. ವೀರೇಶ ಕುಮಾರ ಮತ್ತು ಉಪನ್ಯಾಸಕ ಬಿ.ಸುರೇಶ ಇವರಿದ್ದ ವಿಚಾರಣಾ ತಂಡ ಗುರುವಾರ ಬೆಳಗ್ಗೆ ನಾಗನಕಲ್ ಸರ್ಕಾರಿ ಪಾಲಿಟೆಕ್ನಿಕ್‌ಗೆ ಭೇಟಿ ನೀಡಿ ಇಲ್ಲಿನ ಪ್ರಭಾರಿ ಪ್ರಾಚಾರ್ಯ ಎಚ್. ಶೃತಿ, ಸಿಬ್ಬಂದಿ ಮತ್ತು ಉಪನ್ಯಾಸಕರಿಗೆ ಇನ್ನು ಮುಂದೆ ಸರ್ಕಾರದ ನಿಯಮಾವಳಿ ಪಾಲನೆ ಮಾಡಿ, ವಿದ್ಯಾರ್ಥಿಗಳಿಗೆ ಪಾಠ ಮಾಡಿ ಜತೆಗೆ ಶಿಸ್ತು ಶಿಷ್ಟಾಚಾರ ಪರಿಪಾಲನೆ ಮಾಡಿ ಎಂದು ಕಟ್ಟುನಿಟ್ಟಾಗಿ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.

ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಸರ್ಕಾರದ ನಿಯಮ, ವೇಳಾ ಪಟ್ಟಿಗಳ ಅನುಸಾರ ಪಠ್ಯ ಮತ್ತು ಪಠ್ಯೇತರ ಚುಟುವಟಿಕೆ ಜಾರಿಗೊಳಿಸಬೇಕೆ ಹೊರತು ಇದು ಕೊಂಡವಾಡವಲ್ಲ ಎಂದು ವಿಚಾರಣಾ ಸಮಿತಿ ಸದಸ್ಯರು ಎಚ್ಚರಿಸಿದರು. ಮೊದಲು ಸಭಾಂಗಣದಲ್ಲಿ ಎಲ್ಲರನ್ನೂ ಕೂಡಿ ಸರ್ಕಾರಿ ಪಾಲೆಟ್ನಿಕ್‌ನ ನೀತಿ ನಿಯಮ, ಶಿಕ್ಷಣ ಇಲಾಖೆಯ ಶಿಷ್ಟಾಚಾರಗಳ ಪಾಲನೆ, ಬೋಧನೆ ಕುರಿತು ವಿವರಿಸಿದರು.

ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿಯೇ ಇಂಥ ಸೌಲಭ್ಯ ಹೊಂದಿದ ಪಾಲಿಟೆಕ್ನಿಕ್ ಇಲ್ಲ.ಪ್ರಭಾರಿ ಪ್ರಾಚಾರ್ಯರು ಮತ್ತು ಬೋಧನಾ ಸಿಬ್ಬಂದಿ ನಡುವೆ ಸಮನ್ವಯದ ಕೊರತೆಯಿಂದ ಇಷ್ಟೇಲ್ಲ ರಾದ್ಧಾಂತವಾಗಿದೆ. ನೀವು ಪಾಠ ಕಲಿತು ಮಕ್ಕಳಿಗೆ ತಾಂತ್ರಿಕ ಪಾಠ ಕಲಿಸಿ. ಜತೆಗೆ ದೂರಿನ ಪ್ರಕಾರ ಯಾವುದೇ ಶರಣರ, ಮಹನೀಯರ ಜಯಂತಿ ಆಚರಿಸುವ ಪರಿಪಾಠ ಇಲ್ಲಿ ಇಲ್ಲ. ರಾಷ್ಟ್ರೀಯ ಹಬ್ಬಕ್ಕೆ ಧ್ವಜಾರೋಹಣ ಮಾಡುತ್ತಿಲ್ಲ ಎನ್ನುವ ದೂರು ಇದೆ. ಇದು ತಪ್ಪ. ಇದು ಸರ್ಕಾರಿ ಕಾಲೇಜು.ಇದು ಕೊಂಡಾವಡವಲ್ಲ ಎಂದು ತರಾಟೆಗೆ ತಗೆದುಕೊಂಡರು.

ನಂತರ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ ಸಮಿತಿ ಸದಸ್ಯರು ವಸತಿ ನಿಲಯದ ಲೋಪ ಕುರಿತು ಮಾಹಿತಿ ಪಡೆಯಿತು. ವಿದ್ಯಾರ್ಥಿಗಳು ನಿಭೀರ್ತಿಯಿಂದ ವಸತಿ ನಿಲಯದ ಸಮಸ್ಯೆ, ಕಳಪೆ ಊಟದ ಕುರಿತು ದೂರಿದರು.


ವಿಚಾರಣಾ ಸಮಿತಿ ಬೆಳಗ್ಗೆ ೧೦ಗಂಟೆಯಿಂದ ಸಂಜೆ ೪ರವರೆಗೂ ಪಾಲಿಟೆಕ್ನಿಕ್ ಆವರಣದಲ್ಲಿ ಇದ್ದು ಎಲ್ಲವನ್ನೂ ಸಂಪೂರ್ಣವಾಗಿ ವಿಚಾರಣೆ ನಡೆಸಿ ಮಾಹಿತಿ ಪಡೆಯಿತು. ಇನ್ನು ಉಪನ್ಯಾಸಕ ಸಿಬ್ಬಂದಿ ನಿತ್ಯ ವೇಳಾಪಟ್ಟಿ ವೇಳೆ ಬರುವುದಿಲ್ಲ ಎನ್ನುವುದು ಬೆಳಕಿಗೆ ಬಂದರೆ, ಕಚೇರಿ ಸಿಬ್ಬಂದಿ ಅವಧಿಗೆ ಮುನ್ನವೇ ಜಾಗ ಖಾಲಿ ಮಾಡುತ್ತಾರೆ ಎನ್ನುವುದು ಸಹ ಬಯಲಾಯಿತು.

ಇನ್ನು ವಿದ್ಯಾರ್ಥಿ ನಿಲಯದ ವಾರ್ಡ್ ಇಂದು ಗೈರಾಗಿದ್ದರಿಂದ ವಿಚಾರಣ ಸಮಿತಿ ಗಂಭೀರವಾಗಿ ಪರಿಗಣಿಸಿತು. ಪಾಲಿಟೆಕ್ನಿಕ್ ಸುತ್ತಮುತ್ತ ಬೀಡಾಂಗಡಿ, ಚಹಾ ಅಂಗಡಿ, ಅಕ್ರಮ ಮದ್ಯ ಮಾರಾಟದ ಅಂಗಡಿಗಳು ಇರುವುದನ್ನು ವಿದ್ಯಾರ್ಥಿಗಳು ವಿವರಿಸಿದರು. ತಂಡ ಶೀಘ್ರವೇ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವುದಾಗಿ ವಿಚಾರಣಾ ನಡೆಸಿದ ಸದಸ್ಯರು ವಿದ್ಯಾರ್ಥಿಗಳಿಗೆ ತಿಳಿಸಿದರು.