ಸಾರಾಂಶ
ಬಾಣಂತಿ ಸಾವಿನ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು, ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು.
ಮೃತ ಬಾಣಂತಿ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ಜಿಲ್ಲಾ ಉಸ್ತುವಾರಿ ಸಚಿವ
ಕನ್ನಡಪ್ರಭ ವಾರ್ತೆ ಕುಕನೂರುಬಾಣಂತಿ ಸಾವಿನ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು, ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲೂಕಿನ ಆಡೂರು ಗ್ರಾಮದಲ್ಲಿ ಮೃತ ಬಾಣಂತಿ ರೇಣುಕಾ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ಅವರು, ವೈದ್ಯರು ಹಾಗೂ ಆರೋಗ್ಯ ಅಧಿಕಾರಿಗಳೊಂದಿಗೆ ಚರ್ಚಿಸಿ ಬಾಣಂತಿ ಸಾವಿಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಒದಗಿಸುತ್ತೇವೆ. ಇದರ ಬಗ್ಗೆ ಈಗಾಗಲೇ ಮಾತನಾಡಿದ್ದೇನೆ. ಸಾವಿನ ಮನೆಯಲ್ಲಿ ಸಂತಾಪದ ಸಮಯದಲ್ಲಿ ನಾವೂ ಎಂದಿಗೂ ರಾಜಕೀಯ ಮಾತನಾಡುವುದಿಲ್ಲ. ಸತ್ಯ ಶೋಧನಾ ಸಮಿತಿಯವರು ಬಂದು ಸಾವಿನ ಮನೆಯಲ್ಲಿ ರಾಜಕೀಯ ಮಾತನಾಡಿದ್ದಾರೆ. ರಾಜಕೀಯ ಬಿಟ್ಟು ವಾಸ್ತವಾಂಶ ಮಾತನಾಡಲಿ. ರಾಜ್ಯದಲ್ಲಿ ಬಾಣಂತಿಯರ ಸಾವಿನಲ್ಲಿ ರಾಜಕೀಯ ಬೆರೆಸುವ ಕಾರ್ಯ ಬಿಜೆಪಿ ಮಾಡುತ್ತಿದೆ. ಇದು ಸರಿಯಲ್ಲ. ಸಾವಿನ ನೋವು ಅವರಿಗೆ ತಿಳಿದಿಲ್ಲ. ಸಿಎಂ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರದಲ್ಲಿ ಆಸ್ಪತ್ರೆಗೆ ಸೌಕರ್ಯ, ಹೊಸ ಆಸ್ಪತ್ರೆ ಹಾಗೂ ಜನಪರ ಕಾರ್ಯ ಮಾಡುತ್ತಿದ್ದೇವೆ. ಆಡೂರು ಗ್ರಾಮದ ಬಾಣಂತಿ ರೇಣುಕಾ ಸಾವಿನ ಬಗ್ಗೆ ತನಿಖೆ ಮಾಡಿಸುತ್ತೇನೆ ಎಂದರು.ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿ, ರಾಷ್ಟ್ರದಲ್ಲಿ ಲಕ್ಷ ಜನರ ಹೆರಿಗೆಯಲ್ಲಿ 94 ಜನರ ಸಾವಿನ ಅನುಪಾತವಿದೆ. ರಾಜ್ಯದಲ್ಲಿ ಸಾವಿರಕ್ಕೆ 14 ಇದೆ. ಇದಕ್ಕೆ ಅಪೌಷ್ಠಿಕತೆ ಸಹ ಕಾರಣವಾಗಿದೆ. ಉತ್ತರ ಪ್ರದೇಶ, ರಾಜಸ್ಥಾನದಲ್ಲಿ ಬಾಣಂತಿಯರ ಸಾವಿನ ಸಂಖ್ಯೆ ಅಧಿಕವಾಗಿದೆ ಎಂದರು.
ಬಾಣಂತಿ ರೇಣುಕಾ ಸಾವಿನಲ್ಲಿ ಸತ್ಯಶೋಧನಾ ಸಮಿತಿಯವರು ರಾಜಕೀಯ ಮಾತನಾಡಿ ಹೋಗಿದ್ದಾರೆ. ಕನಿಷ್ಠ ಪಕ್ಷ ಸೌಜನ್ಯಕ್ಕಾದರೂ ಬಡ ಕುಟುಂಬಕ್ಕೆ ಕೈಗೆ ಆದ ನೆರವು ನೀಡಿಲ್ಲ. ಕೇಂದ್ರದಲ್ಲಿ ಬಿಜೆಪಿಯ ಪ್ರಧಾನಿ ನರೇಂದ್ರ ಮೋದಿ ಪ್ರಧಾನಿ ಇದ್ದಾರಲ್ಲಾ, ಅವರಿಗೆ ಹೇಳಿ ₹ 5 ಲಕ್ಷ ಬಾಣಂತಿಯರ ಸಾವಿಗೆ ಪರಿಹಾರ ಕೊಡಿಸಲಿ ನೋಡೋಣ ಎಂದು ಸವಾಲು ಹಾಕಿದರು.ಬಾಣಂತಿ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವೈಯಕ್ತಿಕವಾಗಿ ₹20 ಸಾವಿರ ಸಹಾಯಧನ ನೀಡಿದರು.
ಸಂಸದ ರಾಜಶೇಖರ ಹಿಟ್ನಾಳ, ಜಿಲ್ಲಾಧಿಕಾರಿ ನಲಿನ ಅತುಲ್, ಎಸ್ಪಿ ಡಾ. ರಾಮ ಅರಸಿದ್ದಿ ಮುಖಂಡರಿದ್ದರು.