ಸಾರಾಂಶ
ಕೂಡ್ಲಿಗಿ: ಗ್ರಾಮೀಣ ಭಾಗದಲ್ಲಿ ರೈತರ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಬಗೆಹರಿಸುವ ಮತ್ತು ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವ ವ್ಯವಸ್ಥೆ ಆಗಬೇಕಿದ್ದು, ಗ್ರಾಮ ಲೆಕ್ಕಾಧಿಕಾರಿಗಳು ಸೇರಿ ಕಂದಾಯ ಇಲಾಖೆ ಅಧಿಕಾರಿಗಳು ರೈತರಿಗೆ ಅಗತ್ಯತೆ ಇದ್ದಾಗ ಬೇಗ ಸಿಗಬೇಕು. ಸೇವಾಮನೋಭಾವದಲ್ಲಿ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅಧಿಕಾರಿಗಳಿಗೆ ತಿಳಿಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ನಡೆದ ಕಂದಾಯ ಇಲಾಖೆ, ಉಪನೋಂದಣಿ ಹಾಗೂ ಉಪ ಖಜಾನೆ ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸಭೆಯಲ್ಲಿ ಮಾತನಾಡಿದರು.
ತಾಲೂಕಿನ ಕಂದಾಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದು ತಿಳಿದಿದ್ದು, ಇರುವ ನೌಕರರು ಒತ್ತಡದಲ್ಲಿ ಕೆಲಸ ನಿರ್ವಹಿಸುವಂತಾಗಿದೆ. ಹಳ್ಳಿಗಳಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಸಿಗುವುದಿಲ್ಲ. ಗ್ರಾಮಲೆಕ್ಕಾಧಿಕಾರಿಗಳ ಬಳಿ ಅಲೆದಾಡುವುದರಲ್ಲೇ ಸಾಕಾಗಲಿದೆ ಎಂದು ಹಲವರು ದೂರುತ್ತಿದ್ದಾರೆ. ಹೀಗಾಗಿ ಜನಸಾಮಾನ್ಯರು ಸಣ್ಣಪುಟ್ಟ ಕೆಲಸಕ್ಕೂ ಕಚೇರಿಗಳಿಗೆ ಅಲೆದಾಡುವುದನ್ನು ಅಧಿಕಾರಿಗಳು ತಪ್ಪಿಸಬೇಕು. ಕರ್ತವ್ಯದ ಬಗ್ಗೆ ನಿರ್ಲಕ್ಷ್ಯ ತೋರುತ್ತಾ ಕಾಲಹರಣ ಮಾಡುವುದು, ಸಬೂಬು ಹೇಳುವುದನ್ನು ಸಹಿಸುವುದಿಲ್ಲ. ಎಲ್ಲ ಇಲಾಖೆ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುವ ಮೂಲಕ ಮಾದರಿ ತಾಲೂಕಾಗಿಸಬೇಕಿದೆ ಎಂದರು. ಫೆಬ್ರವರಿಯೊಳಗೆ ಅಭಿಯಾನ:
ತಾಲೂಕು ಈ ಬಾರಿ ಬರಗಾಲಕ್ಕೆ ತುತ್ತಾಗಿ ರೈತರು, ಕಾರ್ಮಿಕರು ಸೇರಿ ಜನಸಾಮಾನ್ಯರು ತುಂಬಾ ತೊಂದರೆಯಲ್ಲಿದ್ದಾರೆ. ಹೀಗಾಗಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ ಸರ್ಕಾರದ ಸೌಲಭ್ಯವನ್ನು ಹೋಬಳಿ ಮಟ್ಟದಲ್ಲೇ ದೊರಕಿಸಿಕೊಡುವುದು ಹಾಗೂ ಪೋಡಿ, ಪೌತಿ ಹಾಗೂ ಪಿಂಚಣಿಮುಕ್ತ ಮಾಡುವ ಅಭಿಯಾನವನ್ನು ಫೆಬ್ರವರಿಯೊಳಗೆ ನಡೆಸಲಾಗುವುದು. ಆದ್ದರಿಂದ ಗ್ರಾಮೀಣ ಭಾಗದ ಕಂದಾಯ ಇಲಾಖೆಗೆ ಸಂಬಂಧಿಸಿದ ಜಮೀನು ಸೇರಿ ನಾನಾ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಸೂಚಿಸಿದರು.
ಈ ಸಂದರ್ಭದಲ್ಲಿ ತಾಪಂ ಇಒ ವೈ. ರವಿಕುಮಾರ್, ಉಪನೋಂದಣಾಧಿಕಾರಿ ವೈಶಾಲಿ, ಉಪಖಜಾನೆ ಅಧಿಕಾರಿ ಪ್ರಭುದೇವ್, ಪಪಂ ಮುಖ್ಯಾಧಿಕಾರಿ ಫಿರೋಜ್ ಖಾನ್, ತಹಸೀಲ್ದಾರ್ ಕಚೇರಿ ಶಿರಸ್ತೇದಾರರಾದ ಮಹಮದ್ ಗೌಸ್, ಚಂದ್ರಶೇಖರ್, ಗುಡೇಕೋಟೆ ಉಪ ತಹಸೀಲ್ದಾರ್ ಕೊಟ್ರಮ್ಮ, ಕಂದಾಯ ನಿರೀಕ್ಷಕರಾದ ಮಲ್ಲಿಕಾರ್ಜುನ ಗೌಡ, ಚನ್ನಬಸಯ್ಯ, ತಾಲೂಕು ಕಚೇರಿ ಸಿಬ್ಬಂದಿ ಈಶಪ್ಪ, ಇಮ್ರಾನ್, ಚೌಡಪ್ಪ ಸೇರಿ ಇತರರಿದ್ದರು.
ಅಸಂಬದ್ಧ ಕೆಲಸ ಸಹಿಸಲ್ಲ: ತಾಲೂಕಿನಲ್ಲಿ ಸರ್ಕಾರಿ ಜಮೀನು ಬೇರೆಯವರಿಗೆ ನೋಂದಣಿ ಮಾಡುವುದು ನಿಲ್ಲಬೇಕು. ಇಲ್ಲವಾದರೆ, ಮಾರಾಟಗಾರರು ಮತ್ತು ಖರೀದಿದಾರರಿಗೆ ತೊಂದರೆಯಾಗುತ್ತಿದೆ. ಅಲ್ಲದೆ, ಈ ಪ್ರಕರಣಗಳು ತಹಸೀಲ್ದಾರ್ ಕೋರ್ಟ್‌ಗೆ ಬರುವುದರಿಂದ ಜನರ ಮತ್ತು ಅಧಿಕಾರಿಗಳ ಸಮಯ ವ್ಯರ್ಥವಾಗುತ್ತಿದೆ ಎಂದು ತಹಸೀಲ್ದಾರ್ ಎಂ. ರೇಣುಕಾ ಹಾಗೂ ಗ್ರಾಮಲೆಕ್ಕಾಧಿಕಾರಿ ಎಚ್.ಎಂ. ಇಮ್ರಾನ್ ಅವರು ಶಾಸಕರ ಗಮನ ಸೆಳೆದರು.
ಆಗ, ಉಪನೋಂದಣಾಧಿಕಾರಿ ವೈಶಾಲಿ ಅವರನ್ನು ಈ ಕುರಿತು ಶಾಸಕರು ಕೇಳಿದಾಗ, ಪತ್ರ ಬರಹಗಾರರತ್ತ ಬೊಟ್ಟು ಮಾಡಿದರು. ಇನ್ಮುಂದೆ ಸರ್ಕಾರಿ ಜಮೀನು ಮಾರಲು ಸರ್ಕಾರದ ಪರವಾನಗಿ ಇಲ್ಲದೇ ನೋಂದಣಿ ಮಾಡುವಂತಿಲ್ಲ. ಯಾವುದೇ ಕಾರಣಕ್ಕೂ ನಾನ್‌ಸೆನ್ಸ್ ಕೆಲಸವನ್ನು ಸಹಿಸುವುದಿಲ್ಲ ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರು ಉಪನೋಂದಣಾಧಿಕಾರಿಗೆ ತಾಕೀತು ಮಾಡಿದರು.
ಭೂಮಾಪನಾ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೇರಿ ಉಪಖಜಾನೆ ಅಧಿಕಾರಿಗಳಿಗೂ ಯಾವುದೇ ಫೈಲ್‌ಗಳು ವಿಳಂಬವಾಗದೇ ಪರಿಹಾರ ಕಲ್ಪಿಸಬೇಕೆಂದು ತಿಳಿಸಿದರು.