ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಇಲ್ಲಿನ ಗುಲ್ಬರ್ಗ ವಿವಿ ಮತ್ತು ಯುನೈಟೆಡ್ ಕಿಂಗ್ಡಂನ ಬ್ರಾಡ್‍ಫೋರ್ಡ್ ವಿಶ್ವವಿದ್ಯಾಲಯದ ಜಂಟಿ ಸಹಯೋಗದಲ್ಲಿ ಜ.8 ಮತ್ತು 9ರಂದು ಎರಡು ದಿನಗಳ ಕಾಲ ಕಲಬುರಗಿಯ ಜ್ಞಾನಗಗೆ ಕ್ಯಾಂಪಸ್ಸಲ್ಲಿ ದೊಂದಿಗೆ ಮಾನವನ ಆರೋಗ್ಯಾಭಿವೃದ್ಧಿಗೆ ಜೈವಿಕ ಹಾಗೂ ನ್ಯಾನೋ ತಂತ್ರಜ್ಞಾನದ ಸಂಯೋಜನೆಯಲ್ಲಿನ ಇತ್ತೀಚೆಗಿನ ಸಂಶೋಧನೆಗಳು (ರೀಸೆಂಟ್ ಅಡ್ವಾನ್ಸಸ್ ಇನ್ ಬಯೋ-ನ್ಯಾನೋ ಕಾಂಪೋಸೈಟ್ಸ್ ಫಾರ್ ಎನಾನ್ಸಿಂಗ್ ಹ್ಯುಮನ್ ಹೆಲ್ತ್) ವಿಷಯದ ಮೇಲೆ ಅಂತಾರಾಷ್ಟ್ರೀಯ ಸಮ್ಮಳನ ನಡೆಯುತ್ತಿದೆ.ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಜ.8 ಮತ್ತು 9ರಂದು ಜ್ಞಾನಗಂಗಾ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿದ್ದು ದೇಶ- ವಿದೇಶಗಳಿಂದ ನೂರಾರು ವಿಜ್ಞಾನಿಗಳು, ಜೈವಿಕ ತಂತ್ರಜ್ಞರು, ನ್ಯಾನೋ ತಂತ್ರಜ್ಞರು, ಪರಿಣಿತರು ಪಾಲ್ಗೊಳ್ಳುತ್ತಿದ್ದಾರೆ. ಇದಕ್ಕಾಗಿ ಗುವಿವಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಗುವಿವಿ ಕುಲಪತಿ ಡಾ. ದಯಾನಂದ ಅಗಸರ್ ಹಾಗೂ ಯುನೈಟೆಡ್ ಕಿಂಗ್ಡಂನ ಬ್ರಾಡ್‍ಫೋರ್ಡ್ ವಿವಿ ಕುಲಪತಿ ಪ್ರೊ. ಸಿರ್ಲೆ ಕಂಡೋನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಹಾಗೂ ಬ್ರಿಟಿಷ್ ಕೌನ್ಸಿಲ್ ಜ್ಞಾನ ನಾಯಕತ್ವದಲ್ಲಿ ಭಾರತೀಯ ಮೈಕ್ರೋಬಯಲಾಜಿಸ್ಟ್ ಸೊಸೈಟಿ, ಅಸೋಸೊಯೇಷನ್ ಆಪ್ ಮೈಕ್ರೋಬಯಲಾಜಿಸ್ಟ್ ಆಪ್ ಇಂಡಿಯಾ ಮತ್ತು ಭಾರತೀಯ ಬಯೋಟೆಕ್ ರೀಸರ್ಚ್ ಸೊಸೈಟಿಯ ಜ್ಞಾನ ಪ್ರಚಾರದೊಂದಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಸಹಕಾರ ಇದರಲ್ಲಿದೆ ಎಂದರು.ಸಸ್ಯ ಮತ್ತು ಸೂಕ್ಷ್ಮಜೀವಿ ಅಣುಗಳ ಅನ್ವೇಷಣೆ ಮತ್ತು ಮಾನವ ಯೋಗಕ್ಷೇಮಕ್ಕಾಗಿ ಜೈವಿಕ ನ್ಯಾನೋ ಸಂಯೋಜನೆಗಳ ವಿನ್ಯಾಸ ಎಂಬುದು ಸಮ್ಮೇಳನದ ಪ್ರಧಾನ ವಿಷಯವಾಗಿದ್ದು, ಜೈವಿಕ ಅಣುಗಳ ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಮಾನವನಿಗಾಗಿ ನ್ಯಾನೋ ವಸ್ತು ಸಂಯೋಜನೆಗಳು ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ 4 ತಾಂತ್ರಿಕ ಗೋಷ್ಠಿಗಳಲ್ಲಿ ಚರ್ಚಿಸಲಾಗುತ್ತಿದೆ.
ಸೂಕ್ಷ್ಮಜೀವಿಯ ಸೋಂಕುಗಳು, ಕ್ಯಾನ್ಸರ್ ಮತ್ತು ತ್ವಚೆಯ ಆರೈಕೆ, ಅಂಗಾಂಗ ಇಂಜಿನಿಯರಿಂಗ್ ಮತ್ತು ದುರಸ್ತಿ ಹಾಗೂ ಮಧುಮೇಹ ಮತ್ತು ಇತರ ಕಾಯಿಲೆಗಳು ಹೀಗೆ ಮಾನವ ಯೋಗಕ್ಷೇಮ ಮತ್ತು ಆರೋಗ್ಯ ವರ್ಧಿತ ವಿಷಯಗಳ ಕುರಿತು ಅಂತಾರಾಷ್ಟ್ರೀಯ ಖ್ಯಾತ ವಿಜ್ಞಾನಿಗಳು ಉಪನ್ಯಾಸ ನೀಡುವರು ಎಂದು ಡಾ. ಅಗಸರ್ ಹೇಳಿದರು.ತಾಂತ್ರಿಕ ಗೋಷ್ಠಿಗಳಲ್ಲಿ 4 ಮುಖ್ಯ ಭಾಷಣಗಳು ಸೇರಿದಂತೆ ರಾಷ್ಟ್ರೀಯ ಉಪನ್ಯಾಸಗಳು- 10 ಅಂತಾರಾಷ್ಟ್ರೀಯ ಉಪನ್ಯಾಸಗಳು-07 ಆನ್‍ಲೈನ್ ಉಪನ್ಯಾಸಗಳು- 08, ಭಿತ್ತಿ ಫಲಕ ಪ್ರದರ್ಶನ-117 ಹಾಗೂ 13 ಪ್ರಬಂಧಗಳು ಮಂಡನೆಯಾಗಲಿವೆ ಎಂದು ಮಾಹಿತಿ ನೀಡಿದರು.
ಗಣ್ಯರಿಗೆ ಆಹ್ವಾನ: ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಇವರು ಜ.8ರಂದು ಬೆ.10 ಗಂಟೆಗೆ ಅಂಬೇಡ್ಕರ್ ಭವನದಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸುವರು. ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಶರಣಪ್ರಕಾಶ ಪಾಟೀಲ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಭಾಗವಹಿಸುವರು.ಯುನೈಟೆಡ್ ಕಿಂಗ್‍ಡಮ್‍ನ ಬ್ರಾಡ್‍ಫೋರ್ಡ್ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಶೆರ್ಲಿ ಕಾಂಡನ ಉಪಸ್ಥಿತಿ ಇರಲಿದ್ದು, ಹರಿಯಾಣ ರಾಜ್ಯದ ಅಮಿಟಿ ವಿವಿ ವಿಜ್ಞಾನ ನಿಕಾಯದ ಡೀನ್, ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಹಾಗೂ ಅಮಿಟಿ ಇನ್ಸ್ಟಿಟ್ಯೂಟ್ ಆಫ್ ಬಯೋಟೆಕ್ನಾಲಜಿ ವಿಭಾಗದ ನಿರ್ದೇಶಕರಾದ ಪ್ರೊ. ರಾಜೇಂದ್ರ ಪ್ರಸಾದ್ ಪ್ರಧಾನ ಭಾಷಣ ಮಾಡುವರು.
ಅತಿಥಿಗಳಾಗಿ ರಾಜ್ಯ ಉನ್ನತ ಶಿಕ್ಷಣ ಪರಿಷತ್ತನ ಉಪಾಧ್ಯಕ್ಷ ಪ್ರೊ. ಎಸ್.ಆರ್. ನಿರಂಜನ, ಭಾರತದ ಬ್ರಿಟಿಷ್ ಕೌನ್ಸಿಲ್‍ನ ಉನ್ನತ ಶಿಕ್ಷಣ ಕಾರ್ಯಕ್ರಮಗಳ ಮುಖ್ಯಸ್ಥ ರಾಜೇಂದ್ರ ತ್ರಿಪಾಠಿ, ಗುವಿವಿ ಸಿಂಡಿಕೇಟ್ ಸದಸ್ಯ ರಾಘವೇಂದ್ರ ಎಂ. ಬೈರಪ್ಪ, ವಿದ್ಯಾ ವಿಷಯಕ ಪರಿಷತ ಸದಸ್ಯ ಪ್ರೊ. ಟಿ. ಶಂಕರಪ್ಪ, ಗುವಿವಿ ಕುಲಪತಿ ಪ್ರೊ. ದಯಾನಂದ ಅಗಸರ ಅಧ್ಯಕ್ಷತೆ ವಹಿಸುವರು. ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಗುವಿವಿ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಜಿ.ಎಂ. ವಿದ್ಯಾಸಾಗರ್, ಯುನೈಟೆಡ್ ಕಿಂಗ್‍ಡಮ್‍ನ ಬ್ರಾಡ್‍ಫೋರ್ಡ್ ವಿಶ್ವವಿದ್ಯಾಲಯದ ಡಾ. ಎಸ್. ಎ ಬೆಹ್ರುಜ್. ಖಘಾನಿ ಹಾಗೂ ಗುವಿವಿ ಕುಲಸಚಿವ ಡಾ. ಬಿ. ಶರಣಪ್ಪ ಉಪಸ್ಥಿತರಿರುವರು.9ರಂದು ಸಮ್ಮೇಳನದ ಸಮಾರೋಪ: ಸಮ್ಮೇಳನದ ಸಮಾರೋಪ ಸಮಾರಂಭವು ಜ.9ರಂದು ಸಂಜೆ 4ಕ್ಕೆ ಗಂಟೆಗೆ ಜರುಗಲಿದೆ. ಮುಖ್ಯ ಅತಿಥಿಗಳಾಗಿ ಸಚಿವ ಪ್ರಿಯಾಂಕ್ ಖರ್ಗೆ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಭಾಗವಹಿಸುವರು. ಯುನೈಟೆಡ್ ಕಿಂಗ್‍ಡಮ್‍ನ ಬ್ರಾಡ್‍ಫೋರ್ಡ್ ವಿವಿ ಉಪಕುಲಪತಿ ಪ್ರೊ. ಶೆರ್ಲಿ ಕಾಂಡನ್, ದಕ್ಷಿಣ ಭಾರತ ಚೆನೈನ ಬ್ರಿಟಿಷ್ ಹೈ ಕಮಿಷನ್ ಹಾಗೂ ಬ್ರಿಟಿಷ್ ಕೌನ್ಸಿಲ್‍ನ ನಿರ್ದೇಶಕ ಜನಕ ಪುಷ್ಪನಾಥನ್, ರಾಜ್ಯ ಉನ್ನತ ಶಿಕ್ಷಣ ಪರಿಷತ್ತ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಜಿ. ಚಂದ್ರಶೇಖರ, ಶ್ರೀಲಂಕಾದ ಪೆರಡೇನಿಯಾ ವಿಶ್ವವಿದ್ಯಾಲಯದ ಪ್ರೊ. ದಿಸ್ಸೆ ನಾಯಕೆ, ಪುಣೆಯ ಎನ್‍ಸಿಐಎಂ ರಿಸೋರ್ಸ್ ಸೆಂಟರ್ ಡಿವಿಷನ್ ಆಪ್ ಬಯೋಕೆಮಿಕಲ್ ಸೈನ್ಸ್‍ನ ಮುಖ್ಯ ವಿಜ್ಞಾನಿ ಡಾ. ಸೈಯದ್ ಜಿ. ದಸ್ತಗೆರ್ ಭಾಗವಹಿಸುವರು. ಗುಲಬರ್ಗಾ ವಿವಿವಿ ಕುಲಪತಿ ಪ್ರೊ. ದಯಾನಂದ ಅಗಸರ ಅಧ್ಯಕ್ಷತೆ ವಹಿಸುವರು.
ಸಮ್ಮೇಳನ ಯಸಸ್ವಿಯಾಗಿ ಜರುಗಲು ಕುಲಪತಿ ಪ್ರೊ. ದಯಾನಂದ ಅಗಸರ ನೇತೃತ್ವದಲ್ಲಿ 12 ಉಪಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲಾ ಸಮಿತಿಗಳ ಸಂಚಾಲಕರು, ಸದಸ್ಯರು ಈಗಾಗಲೇ ಯಶಸ್ವಿಯಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಪೂರೈಸಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯ ಮತ್ತು ಯುನೈಟೆಡ್ ಕಿಂಗ್ಡಂನ ಬ್ರಾಡ್‍ಫೋರ್ಡ್ ವಿಶ್ವವಿದ್ಯಾಲಯಗಳು ಸಂಶೋಧನೆಯ ಪಾಲುದಾರಿಕೆಯೊಂದಿಗೆ ಬೋಧನೆ, ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳಲ್ಲಿ ಹೊಸ ಹೆಜ್ಜೆಯನ್ನಿರಿಸಿವೆ. ಈ ಹಿನ್ನೆಲೆಯಲ್ಲಿಯೂ ಈ ಸಮ್ಮೇಳನ ಮಹತ್ವ ಪಡೆದುಕೊಂಡಿದೆ.ಆಧುನಿಕ ಜೀವನ ಶೈಲಿಯ ಒತ್ತಡಗಳಿಂದ ಆರೋಗ್ಯ ಸಂಬಂಧಿ ಸಮಸ್ಯೆಗಳಾದ ಸೂಕ್ಷ್ಮಜೀವಿಯ ಸೋಂಕುಗಳು, ಕ್ಯಾನ್ಸರ್ ಮತ್ತು ತ್ವಚೆಯ ಕಾಯಿಲೆ, ಮಧುಮೇಹ ರೋಗಗಳು ಮನುಕುಲವನ್ನು ಬಾಧಿಸುತ್ತಿವೆ. ಹಾನಿಕಾರಕ ಔಸಧಗಳ ವಿಪರೀತ ಬಳಕೆಯಿಂದ ಮಾನವನ ದೇಹದಲ್ಲಿ ಅಡ್ಡಪರಿಣಾಮ ಉಂಟಾಗಿ ದುರ್ಬಲತೆಯಿಂದ ದೈಹಿಕ ಸಾಮರ್ಥ್ಯ ಕುಸಿಯುತ್ತಿದೆ. ಮಾನವನ ಆರೋಗ್ಯ ಸಂರಕ್ಷಣೆಗೆ ಜೈವಿಕ ಮತ್ತು ನ್ಯಾನೋ ಸಂಯೋಜಿತ ಕ್ಷೇತ್ರದಲ್ಲಿನ ಅವಿಷ್ಕಾರಗಳ ಲಾಭಾಂಶಗಳಿಂದ ಮಾತ್ರ ಮನುಕುಲದ ಜೀವ ರಕ್ಷಣೆ ಸಾಧ್ಯವಿದೆ. ಇದರ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜನೆ ಮಹತ್ವ ಪಡೆದಿದೆ.