ಇಂಡಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಕರವೇ ಪ್ರತಿಭಟನೆ

| Published : Jan 06 2024, 02:00 AM IST

ಸಾರಾಂಶ

ಈಗಾಗಲೇ ಇಂಡಿಯಲ್ಲಿ ಕಂದಾಯ ಉಪವಿಭಾಗ ಕಾರ್ಯಾಲಯವಿದ್ದು, ಬಹುತೇಕ ಜಿಲ್ಲಾಮಟ್ಟದ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಸಾರಿಗೆ ವ್ಯವಸ್ಥೆಗಾಗಿ ಎರಡು ಹೆದ್ದಾರಿಗಳು, ರೈಲು ನಿಲ್ದಾಣ ಸಹ ಇದೆ. ಸಿಂದಗಿ, ಆಲಮೇಲ, ದೇವರಹಿಪ್ಪರಗಿ, ಚಡಚಣ ತಾಲೂಕು ಮಧ್ಯಭಾಗದಲ್ಲಿ ಇಂಡಿ ಇರುವ ಕಾರಣ ಎಲ್ಲ ತಾಲೂಕಿನವರಿಗೆ ಬಂದು ತಮ್ಮ ಕೆಲಸ ಮುಗಿಸಿಕೊಂಡು ಹೋಗಲು ಅನುಕೂಲವಾಗಲಿದೆ

ಕನ್ನಡಪ್ರಭ ವಾರ್ತೆ ಇಂಡಿ

ಇಂಡಿ ಪ್ರತ್ಯೇಕ ಜಿಲ್ಲೆಯಾಗುವಂತೆ ಮತ್ತು ಅಖಂಡ ಇಂಡಿ ಮತ್ತು ಸಿಂದಗಿ ತಾಲೂಕುಗಳನ್ನು 371 (ಜೆ) ಗೆ ಸೇರಿಸಬೇಕು. ಫೆಬ್ರವರಿ ತಿಂಗಳಲ್ಲಿ ಮಂಡಿಸುವ ಬಜೆಟ್‌ ನಲ್ಲಿ ಈ ಭಾಗಕ್ಕೆ ಹೆಚ್ಚುವರಿ ಅನುದಾನ ನೀಡುವಂತೆ ಒತ್ತಾಯಿಸಿ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಶಿವುಕುಮಾರ ಮಲಕಗೊಂಡ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳರಿಗೆ ಮನವಿ ಸಲ್ಲಿಸಿದರು.

ಕರವೇ ರಾಜ್ಯ ಸಂಚಾಲಕ ಶ್ರೀಶೈಲ ಮುಳಜಿ, ಕರವೇ ತಾಲೂಕು ಅಧ್ಯಕ್ಷ ಶಿವಾನಂದ ಮಲಕಗೊಂಡ, ಫಯಾಜ್‌ ಬಾಗವಾನ್‌, ಸದ್ದಾಂ ಆಲಗೂರ, ಅಶೋಕ ಭೂಸನೂರ, ಬಸವರಾಜ ಮಾರಲಭಾವಿ, ಸುನಿಲ್ ಮಾಗಿ ಮಾತನಾಡಿ, ಇಂಡಿ ಜಿಲ್ಲಾ ಕೆಂದ್ರವಾಗಿ ಘೋಷಣೆ ಮಾಡಬೇಕು. ಈಗಾಗಲೇ ಇಂಡಿಯಲ್ಲಿ ಕಂದಾಯ ಉಪವಿಭಾಗ ಕಾರ್ಯಾಲಯವಿದ್ದು, ಬಹುತೇಕ ಜಿಲ್ಲಾಮಟ್ಟದ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಸಾರಿಗೆ ವ್ಯವಸ್ಥೆಗಾಗಿ ಎರಡು ಹೆದ್ದಾರಿಗಳು, ರೈಲು ನಿಲ್ದಾಣ ಸಹ ಇದೆ. ಸಿಂದಗಿ, ಆಲಮೇಲ, ದೇವರಹಿಪ್ಪರಗಿ, ಚಡಚಣ ತಾಲೂಕು ಮಧ್ಯಭಾಗದಲ್ಲಿ ಇಂಡಿ ಇರುವ ಕಾರಣ ಎಲ್ಲ ತಾಲೂಕಿನವರಿಗೆ ಬಂದು ತಮ್ಮ ಕೆಲಸ ಮುಗಿಸಿಕೊಂಡು ಹೋಗಲು ಅನುಕೂಲವಾಗಲಿದೆ ಎಂದರು.

ಕರವೇ ಪದಾಧಿಕಾರಿಗಳಾದ ಅಪ್ಪು ಪವಾರ, ಶಿವು ಬಗಲಿ, ಮಾದೇವ ರಾಮಗೊಂಡ, ಮಂಜುನಾಥ ತೇಲಿ, ಮಲ್ಲನಗೌಡ ಪಾಟೀಲ, ರಾಘು ಕೋಣಶಿರಸಗಿ, ದಯಾನಂದ ಉಮರಾಣಿ ಉಪಸ್ಥಿತರಿದ್ದರು.