ಕೃಷಿ ಇಲಾಖೆಯಿಂದ 132 ರೈತರಿಗೆ ಆಧುನಿಕ ಕೃಷಿ ಯಂತ್ರೋಪಕರಣ ವಿತರಣೆ

| Published : Nov 17 2024, 01:21 AM IST

ಕೃಷಿ ಇಲಾಖೆಯಿಂದ 132 ರೈತರಿಗೆ ಆಧುನಿಕ ಕೃಷಿ ಯಂತ್ರೋಪಕರಣ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಯಂತ್ರೋಪಕರಣಗಳ ಬಳಕೆಯಲ್ಲಿ ಭಾರತ ದೇಶ ಹಿಂದಿದೆ, ವಿದೇಶಗಳಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳ ಬಳಕೆಯ ಜೊತೆಗೆ ಟ್ರ್ಯಾಕ್ಟರ್ ಗೂ ಸಹ ಜಿಪಿಎಸ್ ಮೂಲಕ ತಂತ್ರಜ್ಞಾನ ಅಳವಡಿಸಿ ಯಂತ್ರ ಸ್ವತಹ ಕಾರ್ಯ ನಿರ್ವಹಿಸುವಂತೆ ಆಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ಕೃಷಿಕರ ಬದುಕನ್ನು ಕಟ್ಟಿಕೊಡುವ ಸಲುವಾಗಿ ಸರ್ಕಾರ ಕೃಷಿ ಇಲಾಖೆ ವತಿಯಿಂದ ಶೇ. 50ರಷ್ಟು ಸಬ್ಸಿಡಿಯೊಂದಿಗೆ 1.20 ಕೋಟಿ ವೆಚ್ಚದಲ್ಲಿ 132 ರೈತರಿಗೆ ಆಧುನಿಕ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಗುತ್ತಿದ್ದು, ರೈತರು ಇದರ ಸದುಪಯೋಗವನ್ನು ಪಡೆದುಕೊಂಡು, ಆರ್ಥಿಕವಾಗಿ ಮುಂದೆ ಬರಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.

ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಕೃಷಿ ಇಲಾಖೆ ವತಿಯಿಂದ ಏರ್ಪಡಿಸಿದ್ದ 2024- 25 ನೇ ಸಾಲಿನ ಕೃಷಿ ಯಂತ್ರೋಪಕರಣಗಳ ವಿತರಣಾ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಯಂತ್ರೋಪಕರಣಗಳನ್ನು ವಿತರಿಸಿ ಅವರು ಮಾತನಾಡಿದರು.

ಕೃಷಿ ಯಂತ್ರೋಪಕರಣಗಳ ಬಳಕೆಯಲ್ಲಿ ಭಾರತ ದೇಶ ಹಿಂದಿದೆ, ವಿದೇಶಗಳಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳ ಬಳಕೆಯ ಜೊತೆಗೆ ಟ್ರ್ಯಾಕ್ಟರ್ ಗೂ ಸಹ ಜಿಪಿಎಸ್ ಮೂಲಕ ತಂತ್ರಜ್ಞಾನ ಅಳವಡಿಸಿ ಯಂತ್ರ ಸ್ವತಹ ಕಾರ್ಯ ನಿರ್ವಹಿಸುವಂತೆ ಆಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ರೈತರಿಗೆ ಉತ್ತೇಜನ ನೀಡುವ ಸಲುವಾಗಿ ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಕೃಷಿ ಇಲಾಖೆಯಿಂದ 30 ಕೋಟಿ ವೆಚ್ಚದಲ್ಲಿ 8,400 ಮಂದಿ ರೈತರಿಗೆ ಯಂತ್ರೋಪಕರಣಗಳನ್ನು ವಿತರಣೆ ಮಾಡಲಾಗಿದೆ, ಯೋಜನೆಯಲ್ಲಿ ಫಲಾನುಭವಿ ರೈತರಿಗೆ ಒಟ್ಟು 49 ಲಕ್ಷ ಸರ್ಕಾರದ ಸಹಾಯ ದೊರೆತಿದೆ, ರೈತರು ಸರ್ಕಾರದ ಸವಲತ್ತುಗಳನ್ನು ಉಪಯೋಗಿಸಿಕೊಂಡು ಹೆಚ್ಚಿನ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮೂಲಕ ಆರ್ಥಿಕವಾಗಿ ಸ್ವವಲಂಭಿಗಳಾಗಬೇಕು ಎಂದು ಹೇಳಿದರು.

ತಾಲೂಕಿನಲ್ಲಿ ಸುಮಾರು 25 ಪವರ್ ಟಿಲ್ಲರ್, 19 ಚಾಪ್ ಕಟ್ಟರ್, 11 ಬ್ರಷ್ ಕಟರ್, 11 ಪವರ್ ವೀಡರ್, 6 ರೋಟವೇಟರ್, 5 ಡೀಸೆಲ್ ಮೋಟರ್, 2 ಡೀಲರ್, 1 ಲೆವೆಲರ್, 1 ಡಿಗ್ಗರ್, 1 ಟೇಬಲ್ ಟಾಪ್ ಆಯಿಲ್ ಮಿಲ್ಲು, ಸೇರಿದಂತೆ 82 ಜನರಿಗೆ ಯಂತ್ರೋಪಕರಣಗಳನ್ನು ವಿತರಣೆ ಮಾಡಲಾಗಿದೆ ಎಂದರು.

ಅಲ್ಲದೆ ತಾಲೂಕಿನಲ್ಲಿ ಕಡಿಮೆ ನೀರಿನಲ್ಲಿ ಅಧಿಕ ಇಳುವರಿ ಪಡೆಯಬಹುದಾದ ತುಂತುರು ನೀರಾವರಿ ಯೋಜನೆ ಉತ್ತೇಜಿಸಲು ಶೇ. 90ರಷ್ಟು ಸಹಾಯಧನ ನೀಡಿ 50 ತುಂತುರು ನೀರಾವರಿ ಘಟಕಗಳನ್ನು ವಿತರಿಸಲಾಗಿದೆ, ಯೋಜನೆಯಲ್ಲಿ ಫಲಾನುಭವಿ ರೈತರಿಗೆ ಒಟ್ಟು 49 ಲಕ್ಷ ಸರ್ಕಾರದ ಸಹಾಯ ದೊರೆತಿದೆ, ಫಲಾನುಭವಿ ರೈತರು ಸರ್ಕಾರದ ಸವಲತ್ತುಗಳನ್ನು ಉಪಯೋಗಿಸಿಕೊಂಡು ಹೆಚ್ಚಿನ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಅವರು ಹೇಳಿದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್, ನಗರಸಭಾಧ್ಯಕ್ಷ ಶ್ರೀಕಂಠಸ್ವಾಮಿ, ಜಿಪಂ ಮಾಜಿ ಸದಸ್ಯ ಕೆ. ಮಾರುತಿ, ತಾಪಂ ಮಾಜಿ ಅಧ್ಯಕ್ಷ ನಾಗೇಶ್ ರಾಜ್, ನಗರಸಭಾ ಸದಸ್ಯರಾದ ಗಾಯತ್ರಿ, ಕೆ.ಎಂ. ಬಸವರಾಜು, ಮುಖಂಡರಾದ ದೊರೆಸ್ವಾಮಿ ನಾಯಕ, ಕಳಲೆ ರಾಜೇಶ್, ನಾಗರಾಜಯ್ಯ, ನಾಗರಾಜು, ಕೃಷಿ ಜಂಟಿ ನಿರ್ದೇಶಕ ರವಿ, ಜಿಲ್ಲಾ ನಿರ್ದೇಶಕ ಧನಂಜಯ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಎಸ್. ರವಿ, ಕೃಷಿ ಅಧಿಕಾರಿಗಳಾದ ನಾಗೇಶ್ ಇದ್ದರು.