ಸಾರಾಂಶ
ಹುಬ್ಬಳ್ಳಿ:
ದಿನದಿಂದ ದಿನಕ್ಕೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿವೆ. ಅದರಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳಿಗೆ ಸಂಬಂಧಿಕರಿಂದಲೇ ದೌರ್ಜನ್ಯ ನಡೆಯುತ್ತಿದೆ ಎಂದು ಮುಕ್ತಾ ಫೌಂಡೇಷನ್ ಸಂಸ್ಥಾಪಕಿ ಹಾಗೂ ನಿರ್ದೇಶಕಿ ಅಶ್ವಿನಿ ಎನ್.ವಿ. ಹೇಳಿದರು.ನಗರದ ಬೆಂಗೇರಿಯ ಮಾರುಕಟ್ಟೆ ಸಭಾಭವನದಲ್ಲಿ ಜಿಲ್ಲಾ ಪಂಚಾಯಿತಿ, ಸರ್ವ ಶಿಕ್ಷಣ ಅಭಿಯಾನ ಹಾಗೂ ಯಂಗ್ ಇಂಡಿಯನ್ಸ್ ಹುಬ್ಬಳ್ಳಿ ಸಹಯೋಗದಲ್ಲಿ ಶುಕ್ರವಾರ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕುರಿತು ಸರಕಾರಿ ಮತ್ತು ಖಾಸಗಿ ಶಾಲಾ ಶಿಕ್ಷಕರಿಗೆ ನಡೆದ ಜಾಗೃತಿ (ಮಾಸೂಮ್) ತರಬೇತಿ ಕಾರ್ಯಾಗಾರದ ಉಪನ್ಯಾಸದಲ್ಲಿ ಅವರು ಮಾತನಾಡಿದರು.ದೌರ್ಜನ್ಯಕ್ಕೊಳಗಾಗುವ ಮಕ್ಕಳಲ್ಲಿ ಶೇ. 65ರಷ್ಟು ಮಕ್ಕಳಿಗೆ ಸಂಬಂಧಿಕರಿಂದಲೇ ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ಕಳವಳಕಾರಿ ಬೆಳವಣಿಗೆ ಎಂದ ಅವರು, ಆರ್ಥಿಕ ತೊಂದರೆ ಎದುರಿಸುತ್ತಿರುವ, ಪಾಲಕರಿಂದ ನಿರ್ಲಕ್ಷ್ಯಕ್ಕೆ ಒಳಗಾದ ಹಾಗೂ ಬುದ್ಧಿ ಮಾಂದ್ಯ ಮತ್ತು ಸ್ಪರ್ಶಜ್ಞಾನವಿಲ್ಲದ ಮಕ್ಕಳನ್ನೇ ಕಾಮುಕರು ತಮ್ಮ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಶಿಕ್ಷಕರು ಮತ್ತು ಪಾಲಕರು ವಿಶೇಷ ಜಾಗೃತಿ ವಹಿಸಬೇಕಿದೆ ಎಂದರು.
ಮಕ್ಕಳಲ್ಲಿ ಭಯ ಮತ್ತು ಪಾಪ ಪ್ರಜ್ಞೆಯನ್ನು ಒತ್ತಾಯ ಪೂರ್ವಕವಾಗಿ ಮೂಡಿಸುವ ಮೂಲಕ ಅವರನ್ನು ಲೈಂಗಿಕವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಶಾಲೆ, ಕಾಲೇಜು ಹಾಗೂ ಟ್ಯೂಷನ್ ಕ್ಲಾಸ್ಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿರುವುದು ಬೆಳಕಿಗೆ ಬರುತ್ತಿವೆ. ಮಗು ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಬಗ್ಗೆ ಪಾಲಕರಿಗೆ ಹಾಗೂ ಶಿಕ್ಷಕರಿಗೆ ಹೇಳದೆ ಹೋದರೂ, ಅದರ ಹಾವಭಾವ ಹಾಗೂ ಮಾನಸಿಕ ಗೊಂದಲದಂತಹ ಸೂಕ್ಷ್ಮತೆ ಗುರುತಿಸುವ ಕೆಲಸ ಶಿಕ್ಷಕರಿಂದಾಗಬೇಕು ಎಂದು ತಿಳಿಸಿದರು.ಬಿಇಒ ಉಮೇಶ ಬೊಮ್ಮಕ್ಕನವರ ಮಾತನಾಡಿ, ಶಿಕ್ಷಕರಿಗೂ ಶಾಲಾ ಮಕ್ಕಳ ಸುರಕ್ಷತೆಯ ಬಗ್ಗೆ ವಿಶೇಷ ಕಾಳಜಿ ಹಾಗೂ ಅವರೆಲ್ಲರೂ ತಮ್ಮ ಮಕ್ಕಳೇ ಎಂಬ ಭಾವನೆ ಬರಬೇಕು ಎಂದರು.
ಹು-ಧಾ ಯಂಗ್ ಇಂಡಿಯನ್ಸ್ ಚೇರಮನ್ ಡಾ. ನಾಗರಾಜ ನಾಯಕ ಮಾತನಾಡಿ, ಕೇವಲ ಮಹಿಳೆ ಮತ್ತು ಮಕ್ಕಳ ಮೇಲೆ ಮಾತ್ರ ಲೈಂಗಿಕ ದೌರ್ಜನ್ಯ ನಡೆಯುತ್ತಿಲ್ಲ. ಪುರುಷರ ಮೇಲೆಯೂ ದೌರ್ಜನ್ಯ ನಡೆಯುತ್ತಿವೆ. ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಪಾಲಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ತಂಡ ಮಾಡುತ್ತಿದೆ ಎಂದರು.ಮಜೇಥಿಯಾ ಫೌಂಡೇಶನ್ ಮುಖ್ಯಸ್ಥ ಜಿತೇಂದ್ರ ಮಜೇಥಿಯಾ, ಮೈಕ್ರೋಫಿನಿಶ್ ಇಂಡಸ್ಟ್ರೀಸ್ ಮುಖ್ಯಸ್ಥ ವಿಕಂಶಿ ತಿಲಕ್, ಶಿಕ್ಷಣ ಇಲಾಖೆಯ ಅಧಿಕಾರಿ ರೇಣುಕಾ ಮಾತನಾಡಿದರು. ಹುಬ್ಬಳ್ಳಿ ಯಂಗ್ ಇಂಡಿಯನ್ಸ್ ಮಾಸೋಮ್ ಚೇರ್ಮನ್ ಡಾ. ದೀಪ್ತಿ ಜೋಶಿ, ರಾಹುಲ್ ಸುರನಾ, ತರಬೇತುದಾರರಾದ ಜಯಶ್ರೀ ಅಗರವಾಲ ಸೇರಿದಂತೆ ವಿವಿಧ ಶಾಲೆಯ ಸಾವಿರಾರು ಶಿಕ್ಷಕರು ಭಾಗವಹಿಸಿದ್ದರು.ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯುವುದು. ಮಹಿಳೆ ಮತ್ತು ಮಕ್ಕಳ ಸುರಕ್ಷತೆ ಹಾಗೂ ಯುವ ಸಮೂಹವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಯಂಗ್ ಇಂಡಿಯನ್ಸ್ ತಂಡ ಹಲವಾರು ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದೆ. ಯುವ ಸಮೂಹವನ್ನು ಸದೃಢಗೊಳಿಸುವ ಜತೆಗೆ ದೇಶದ ಸಮಗ್ರ ಅಭಿವೃದ್ಧಿಗೆ ಅತ್ಯುತ್ತಮ ಕೊಡುಗೆ ನೀಡುವುದು ತಂಡದ ಮುಖ್ಯ ಧ್ಯೇಯವಾಗಿದೆ. ಪ್ರತಿಯೊಬ್ಬರು ಇಂತಹ ಸಮಾಜಮುಖಿ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ದಕ್ಷಿಣ ಭಾರತದ ಯಂಗ್ ಇಂಡಿಯನ್ಸ್ ಅಧ್ಯಕ್ಷ ಡಾ. ಶ್ರೀನಿವಾಸ ಜೋಶಿ ಸಲಹೆ ನೀಡಿದರು.