ಕನ್ನಡಪ್ರಭ ವಾರ್ತೆ ಕೋಲಾರ ಜಿಲ್ಲೆಯಲ್ಲಿ ಫೆ. 28ರಿಂದ ಮಾ. 17ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು, ಮುಕ್ತ ಹಾಗೂ ನಿರ್ಭೀತ ವ್ಯವಸ್ಥೆಯಲ್ಲಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಸಭೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಸಿದ್ಧತೆ ಕುರಿತು ಮಾತನಾಡಿ, ಪ್ರಸಕ್ತ ಸಾಲಿನಲ್ಲಿ 14,567 ವಿದ್ಯಾರ್ಥಿಗಳು ಜಿಲ್ಲೆಯ 28 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿದ್ದು, ಯಾವುದೇ ಲೋಪವಿಲ್ಲದಂತೆ ಪಾರದರ್ಶಕವಾಗಿ ನಡೆಸಲು ಎಲ್ಲಾ ತಯಾರಿ ಮಾಡಿಕೊಂಡಿದೆ. ವಿದ್ಯಾರ್ಥಿಗಳು ನಿರ್ಭಿತಿಯಿಂದ ಪರೀಕ್ಷೆ ಬರೆಯಲು ಅನುಕೂಲಕರ ವಾತಾವರಣ ನಿರ್ಮಿಸಿದೆ ಎಂದರು.
ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದೆ. ಪ್ರಶ್ನೆ ಪತ್ರಿಕೆಗಳನ್ನು ಸೂಕ್ತ ಭದ್ರತೆಯಲ್ಲಿ ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ವ್ಯವಸ್ಥೆ ಮಾಡಿದೆ. ಪರೀಕ್ಷಾ ಕೇಂದ್ರಗಳಿಗೆ ಸಿಸಿಟಿವಿ ಭದ್ರತೆ ಒದಗಿಸಲಾಗಿದ್ದು, ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಪಂ ಕಚೇರಿಗಳಲ್ಲಿ ವಾರ್ ರೂಂಗಳನ್ನು ತೆರೆಯಲಾಗಿದೆ. ಜಿಲ್ಲೆಯ ಎಲ್ಲಾ 28 ಪರೀಕ್ಷಾ ಕೇಂದ್ರಗಳ ವೀಕ್ಷಣೆ ಮಾಡಬಹುದಾಗಿದೆ. ಇದಕ್ಕಾಗಿ ಪರೀಕ್ಷಾ ಕೇಂದ್ರಗಳಿಗೆ ನಿರಂತರ ವಿದ್ಯುತ್ ಸಂಪರ್ಕಕ್ಕೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ, ವಿದ್ಯಾರ್ಥಿಗಳು ತಮ್ಮ ಊರುಗಳಿಂದ ಸಕಾಲಕ್ಕೆ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಸುಗಮ ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು. ಒಟ್ಟು 28 ಪರೀಕ್ಷಾ ಕೇಂದ್ರಗಳಲ್ಲಿ ಹೊಸದಾಗಿ 13167 ವಿದ್ಯಾರ್ಥಿಗಳು, ಖಾಸಗಿಯಾಗಿ 270 ವಿದ್ಯಾರ್ಥಿಗಳು ಹಾಗೂ 1130 ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ ಒಟ್ಟು 14567 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗದೆ ವರ್ಷವಿಡೀ ವ್ಯಾಸಂಗ ಮಾಡಿರುವ ಜ್ಞಾನ ಅಂದಿನ ಪರೀಕ್ಷೆಯಲ್ಲಿ ಯಾವುದೇ ಆತಂಕವಿಲ್ಲದೆ ನಿರ್ಭಿಡೆಯಿಂದ ಪರೀಕ್ಷೆ ಬರೆಯುವಂತೆ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಶುಭಾಶಯ ಕೋರಿದರು.ಪರೀಕ್ಷೆಯ ನಂತರವೂ ಅನುತ್ತೀರ್ಣರಾದಲ್ಲಿ ಇನ್ನೂ 2 ಅವಕಾಶಗಳು ಪರೀಕ್ಷೆ ಬರೆಯಲು ಇದ್ದು, ಅಂತಹ ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ. ಯಾವುದಾದರೂ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ಆತಂಕ ಅಥವಾ ಸಮಸ್ಯೆಗಳಿದ್ದಲ್ಲಿ ಕಂಟ್ರೋಲ್ ರೂಮ್ ನಂಬರ್ 1098ಗೆ ಕರೆ ಮಾಡಿ ಮಾತನಾಡಬಹುದು. ಅಲ್ಲದೆ, ಪೋಷಕರು ಪರೀಕ್ಷಾ ಸಂದರ್ಭದಲ್ಲಿ ತಮ್ಮ ಮಕ್ಕಳ ಮೇಲೆ ಒತ್ತಡ ಹೇರದೆ ಅಥವಾ ಮಕ್ಕಳಿಗೆ ಖುಷಿ ಕೊಡುವ ಆಹಾರ ಕೊಡುವ ಮೂಲಕ, ಉತ್ತೇಜನದ ಮಾತುಗಳನ್ನಾಡಿ ಪ್ರೋತ್ಸಾಹಿಸುವ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಬೇಕಾಗಿದೆ ಮನವಿ ಮಾಡಿದರು. ಕಾನೂನು ಬಾಹಿರ ಚಟುಟಿಕೆಗಳಿಗೆ ಆಸ್ಪದವಿಲ್ಲ, ವದಂತಿ ಹಬ್ಬಿಸುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.ಸಭೆಯಲ್ಲಿ ಎಡಿಸಿ ಎಸ್.ಎಂ.ಮಂಗಳ, ಡಿಡಿಪಿಯು ಉಪನಿರ್ದೇಶಕ ರಾಜಶೇಖರ್ ಪಟ್ಟಣಶೆಟ್ಟಿ ಇದ್ದರು.ದ್ವಿತೀಯ ಪಿಯು ಪರೀಕ್ಷೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ
ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದೆ. ಪ್ರಶ್ನೆ ಪತ್ರಿಕೆಗಳನ್ನು ಸೂಕ್ತ ಭದ್ರತೆಯಲ್ಲಿ ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ವ್ಯವಸ್ಥೆ ಮಾಡಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
