ಅರಸೀಕೆರೆ: ನಗರದಲ್ಲಿ ಜಗಜ್ಯೋತಿ ಬಸವೇಶ್ವರ ಅವರ ಪುತ್ಥಳಿ ಪ್ರತಿಷ್ಠಾಪನೆ ಕುರಿತ ಚರ್ಚೆಗಳು ನಡೆಯುತ್ತಿರುವ ನಡುವೆಯೇ, ಈ ವಿಷಯದಲ್ಲಿ ಆತುರದ ನಿರ್ಧಾರಕ್ಕಿಂತ ಸಮಗ್ರ ಚಿಂತನೆ ಮತ್ತು ಎಲ್ಲರ ಒಮ್ಮತ ಅಗತ್ಯವಿದೆ ಎಂದು ಜೆಡಿಎಸ್ ಮುಖಂಡ ಹಾಗೂ ಕಳೆದ ವಿಧಾನಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ಎನ್. ಆರ್‌. ಸಂತೋಷ್ ಅಭಿಪ್ರಾಯಪಟ್ಟಿದ್ದಾರೆ.ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಬಸವೇಶ್ವರರು ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತ ವ್ಯಕ್ತಿಯಲ್ಲ; ಅವರು ಸಮಸ್ತ ಮಾನವಕುಲಕ್ಕೆ ದಾರಿ ತೋರಿದ ಮಹಾನ್ ದಾರ್ಶನಿಕರು, ಅಂತಹ ಮಹನೀಯರ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ಮೊದಲು ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಸರ್ವಪಕ್ಷಗಳ ಸಭೆ ನಡೆಸಿ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಸೂಕ್ತ ಸ್ಥಳವನ್ನು ಆಯ್ಕೆ ಮಾಡಿದರೆ ಮಾತ್ರ ಅದು ಅರ್ಥಪೂರ್ಣವಾಗುತ್ತದೆ ಎಂದು ತಿಳಿಸಿದರು. ಈ ಪ್ರಕ್ರಿಯೆ ಬದಿಗೊತ್ತಿ ತಾರಾತುರಿಯಲ್ಲಿ ನಿರ್ಧಾರ ಕೈಗೊಳ್ಳುವುದು ಸೂಕ್ತವಲ್ಲ ಎಂದರು.ನಗರ ಹಾಗೂ ತಾಲೂಕಿನಲ್ಲಿ ಬಸವ ತತ್ವವನ್ನು ನಂಬುವ ಅನುಯಾಯಿಗಳು ದೊಡ್ಡ ಸಂಖ್ಯೆಯಲ್ಲಿ ಇದ್ದು, ಇದುವರೆಗೂ ತಾಲೂಕಿನಲ್ಲಿ ಬಸವೇಶ್ವರರ ಪುತ್ಥಳಿ ಇಲ್ಲದಿರುವುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಆದ್ದರಿಂದ ಎಲ್ಲ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಶಾಶ್ವತ ಮತ್ತು ಎಲ್ಲರಿಗೂ ಒಪ್ಪಿಗೆಯಾದ ಸ್ಥಳದಲ್ಲಿ ಪುತ್ಥಳಿ ಪ್ರತಿಷ್ಠಾಪನೆಗೆ ಮುಂದಾದರೆ ಅದು ದೀರ್ಘಕಾಲಿಕ ಮಹತ್ವ ಪಡೆದುಕೊಳ್ಳಲಿದೆ ಎಂದು ಸಲಹೆ ನೀಡಿದರು.ಬಸವೇಶ್ವರ ಪುತ್ಥಳಿ ಪ್ರತಿಷ್ಠಾಪನೆ ಕಾರ್ಯಕ್ಕೆ ವೈಯಕ್ತಿಕವಾಗಿ ತನು, ಮನ, ಧನ ಸಮರ್ಪಿಸಲು ತಾವು ಸಿದ್ಧರಾಗಿದ್ದು, ಜೊತೆಗೆ ತಾಲೂಕಿನ ಜನತೆಯ ಹಿತದೃಷ್ಟಿಯಿಂದ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಸಕಾರಾತ್ಮಕ ಪ್ರಯತ್ನಗಳಿಗೆ ತಮ್ಮ ಸಂಪೂರ್ಣ ಸಹಕಾರ ಇರುತ್ತದೆ ಎಂದು ಎನ್. ಆರ್‌. ಸಂತೋಷ್ ಸ್ಪಷ್ಟಪಡಿಸಿದರು.