ಬ್ಯಾಂಕ್‌ಗಳಲ್ಲಿ ಕನ್ನಡ ಬಳಸಲು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

| Published : Nov 22 2024, 01:17 AM IST

ಬ್ಯಾಂಕ್‌ಗಳಲ್ಲಿ ಕನ್ನಡ ಬಳಸಲು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಂಕ್‌ಗಳಲ್ಲಿ ಚಲನ್‌ಗಳನ್ನು ಕನ್ನಡದಲ್ಲಿ ನೀಡುತ್ತಿಲ್ಲ. ಹೊರ ರಾಜ್ಯಗಳಿಂದ ನೇಮಕವಾದ ಸಿಬ್ಬಂದಿ ಕನ್ನಡ ಕಲಿಯುವ ಪ್ರಯತ್ನ ಮಾಡುತ್ತಿಲ್ಲ. ಇದರಿಂದ ಗ್ರಾಹಕರ ಜತೆಗೆ ಬ್ಯಾಂಕ್ ವ್ಯವಹಾರಕ್ಕೂ ತೊಂದರೆಯಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯ ಬ್ಯಾಂಕ್‌ಗಳಲ್ಲಿ ಹಿಂದಿ ಹೇರಿಕೆ ಮಾಡಲಾಗುತ್ತಿದ್ದು ಈ ಬಗ್ಗೆ ಗ್ರಾಹಕರು ಸೇರಿದಂತೆ ಕನ್ನಡಪರ ಸಂಘಟನೆಗಳು ದನಿ ಎತ್ತುತ್ತಿದ್ದು, ಬ್ಯಾಂಕ್‌ಗಳು ಕನ್ನಡ ಸ್ನೇಹಿಯಾಗಿ ವರ್ತಿಸಬೇಕೆಂದು ಜಿಲ್ಲಾಧಿಕಾರಿ ಡಾ.ಕುಮಾರ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಬರೋಡಾ ಬ್ಯಾಂಕ್ ತರಬೇತಿ ಕೇಂದ್ರದಲ್ಲಿ ಬ್ಯಾಂಕ್ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿ, ಬ್ಯಾಂಕ್‌ಗಳಲ್ಲಿ ಚಲನ್‌ಗಳನ್ನು ಕನ್ನಡದಲ್ಲಿ ನೀಡುತ್ತಿಲ್ಲ. ಹೊರ ರಾಜ್ಯಗಳಿಂದ ನೇಮಕವಾದ ಸಿಬ್ಬಂದಿ ಕನ್ನಡ ಕಲಿಯುವ ಪ್ರಯತ್ನ ಮಾಡುತ್ತಿಲ್ಲ. ಇದರಿಂದ ಗ್ರಾಹಕರ ಜತೆಗೆ ಬ್ಯಾಂಕ್ ವ್ಯವಹಾರಕ್ಕೂ ತೊಂದರೆಯಾಗಿದೆ ಎಂದರು.

ಸಭೆಯ ಆರಂಭಕ್ಕೂ ಮುನ್ನ ಕರುನಾಡ ಸೇವಕರು ಸಂಘಟನೆಯ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಮಾತನಾಡಿ, ಭಾಷಾವಾರು ಆಧಾರದಲ್ಲಿ ಕರ್ನಾಟಕ ರಾಜ್ಯವನ್ನು ಸ್ಥಾಪಿಸಲಾಗಿದೆ. ಇಲ್ಲಿನ ಆಡಳಿತ ಹಾಗೂ ಜನರ ಭಾಷೆ ಕನ್ನಡವೇ ಆಗಿದೆ. ಈ ಭಾಷೆಯಲ್ಲಿ ಆಡಳಿತ ಮತ್ತು ಎಲ್ಲವೂ ಇರಬೇಕಾದುದು ಸಹಜವಾಗಿದೆ ಎಂದರು.

ಆದರೆ, ಬ್ಯಾಂಕ್‌ಗಳಲ್ಲಿ ಕನ್ನಡದಲ್ಲಿ ಚಲನ್‌ಗಳೇ ಸಿಗುತ್ತಿಲ್ಲ. ಬದಲಿಗೆ ಇಂಗ್ಲಿಷ್, ಹಿಂದಿ ಭಾಷೆಯಲ್ಲಷ್ಟೇ ಚಲನ್‌ಗಳು ಲಭ್ಯವಾಗುವಂತೆ ಮಾಡಿ ಹಿಂದಿ ಹೇರಿಕೆ ಮಾಡಲಾಗುತ್ತಿದೆ. ಇದು ತಪ್ಪಬೇಕಿದೆ ಎಂದು ಒತ್ತಾಯಿಸಿದರು.

ಮುಂದುವರಿದು ಬ್ಯಾಂಕ್‌ಗಳಲ್ಲಿ ಖಾತೆ ಆರಂಭ ಮುಚ್ಚುವಿಕೆ ಸಾಲದ ಕರಾರು ಸೇರಿದಂತೆ ಎಲ್ಲ ದಾಖಲೆಗಳನ್ನು ಕನ್ನಡಕ್ಕೆ ತರಬೇಕು. ಇದಕ್ಕೆ ಬೇಕಾದ ನೆರವನ್ನು ಭಾಷಾಂತರ ಅನುವಾದ ಮಂಡಳಿಯಿಂದ ಪಡೆಯಬಹುದು. ಹೊರ ರಾಜ್ಯಗಳಿಂದ ನೇಮಕವಾದವರಿಗೆ ನಿರ್ದಿಷ್ಟ ಕಾಲಮಿತಿಯೊಳಗೆ ಕನ್ನಡ ಕಲಿಸಲು ಮೆಡಿಕಲ್ ಕಾಲೇಜುಗಳ ಮಾದರಿಯಲ್ಲಿ ಕನ್ನಡ ಶಿಕ್ಷಕರನ್ನು ನೇಮಿಸಬೇಕು. ಎಟಿಎಂಗಳಲ್ಲಿ ಕನ್ನಡ ಕಡ್ಡಾಯವಾಗಿ ಇರಬೇಕು ಎಂದು ಆಗ್ರಹಪಡಿಸಿದರು.

ಬ್ಯಾಂಕ್‌ಗಳಲ್ಲಿ ಹಿಂದಿ ದಿವಸ ಆಚರಣೆ ಕೈಬಿಟ್ಟು ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಕಡ್ಡಾಯವಾಗಬೇಕು. ಇವೆಲ್ಲವನ್ನೂ ಡಿಸೆಂಬರ್‌ನಲ್ಲಿ ಮಂಡ್ಯದಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇಳೆಯೊಳಗೆ ಜಾರಿಗೆ ತರಬೇಕು ಎಂದು ಗಡುವು ನೀಡಿದರು.

ನಂತರ ಜಿಲ್ಲಾಧಿಕಾರಿಗಳು ಈ ಎಲ್ಲ ಆಕ್ಷೇಪಣೆಗಳನ್ನು ಗಂಭೀರವಾಗಿ ಪರಿಗಣಿಸಿ ಬ್ಯಾಂಕ್ ಗಳಲ್ಲಿ ಕನ್ನಡ ಸ್ನೇಹಿ ವಾತಾವರಣ ನಿರ್ಮಿಸುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಜಿಪಂ ಸಿಇಒ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರಾದ ಎಸ್. ನಾರಾಯಣ್, ಎಂ.ಎನ್ ಚಂದ್ರು, ಎಚ್ ಡಿ ಜಯರಾಂ ಸೇರಿದಂತೆ ವಿವಿಧ ಬ್ಯಾಂಕುಗಳ ಅಧಿಕಾರಿಗಳು ಉಪಸ್ಥಿತರಿದ್ದರು.