ಸಾರಾಂಶ
ಕೀರ್ತನಾ
ಕನ್ನಡಪ್ರಭ ವಾರ್ತೆ ಕುಶಾಲನಗರಕೊಡಗು ಜಿಲ್ಲೆಯಿಂದ ನೆರೆಯ ಜಿಲ್ಲೆ ಹಾಗೂ ಗಡಿ ರಾಜ್ಯಗಳಿಗೆ ಮಿತಿಗಿಂತ ದುಪ್ಪಟ್ಟು ಭಾರದ ಮರದ ದಿಮ್ಮಿಗಳನ್ನು ಲಾರಿಗಳಲ್ಲಿ ತುಂಬಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿಸುವ ಮೂಲಕ ನಿಯಮ ಉಲ್ಲಂಘನೆ ನಡೆಯುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಗೋಚರಿಸಿದೆ. ಕುಶಾಲನಗರ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವು ಲಾರಿಗಳ ಚಾಲಕರು ಮರದ ದಿಮ್ಮಿಗಳನ್ನು ತುಂಬಿಕೊಂಡು ಟಾರ್ಪಲ್ ಹೊದಿಕೆ ಹಾಕಿಕೊಂಡು ನಿಗೂಢವಾಗಿ ಮರಗಳ ಸಾಗಾಟ ಮಾಡುತ್ತಿರುವುದು ಕೂಡ ಕಾಣಬಹುದು.
ಈ ಮರಗಳ ಒಳಭಾಗದಲ್ಲಿ ಬೆಲೆಬಾಳುವ ಬೀಟಿ, ತೇಗ ಮತ್ತಿತರ ಮರಗಳನ್ನು ಅಕ್ರಮವಾಗಿ ತುಂಬಿ ಸಾಗಿಸುತ್ತಿರುವ ಬಗ್ಗೆ ಕೂಡ ಕೆಲವು ದೂರುಗಳು ಕೇಳಿ ಬಂದಿವೆ.ರಾಜಾರೋಷವಾಗಿ ಸಾಗಾಟ ನಡೆದರೂ ಅರಣ್ಯ, ಪೊಲೀಸ್ ಮತ್ತು ಆರ್‌ಟಿಒ ಅಧಿಕಾರಿಗಳು ಮೌನಕ್ಕೆ ಶರಣವಾಗಿರುವುದು ಕಂಡುಬಂದಿದೆ. ಕೊಡಗು ಜಿಲ್ಲೆಯ ವಿವಿಧ ಭಾಗಗಳ ತೋಟಗಳಿಂದ ದಿನನಿತ್ಯ ಹಗಲು ರಾತ್ರಿ ಎನ್ನದೆ ಕುಶಾಲನಗರ ಮೂಲಕ ನೂರಾರು ಲಾರಿಗಳು ಮಿತಿಮೀರಿದ ಮರದ ದಿಮ್ಮಿಗಳನ್ನು ತುಂಬಿ ಹೊರ ಜಿಲ್ಲೆಗಳಿಗೆ ಸಾಗಿಸಲಾಗುತ್ತಿದ್ದು, ಭಾರತೀಯ ರಸ್ತೆ ಸುರಕ್ಷತಾ ನಿಯಮಗಳನ್ನು ಸಂಪೂರ್ಣ ಉಲ್ಲಂಘಿಸಿ ರಾಜಾರೋಷವಾಗಿ ಸಾಗುತ್ತಿರುವುದು ಪ್ರಸಕ್ತ ಬೆಳವಣಿಗೆಯಾಗಿದೆ.
ರಾಷ್ಟ್ರೀಯ ಹೆದ್ದಾರಿ ರಸ್ತೆ ವಿಭಾಗದ ನಿಯಮದಂತೆ ನಾಲ್ಕು ಟೈರ್ ಗಳನ್ನು ಹೊಂದಿರುವ ಲಾರಿಗಳಲ್ಲಿ 12 ಟನ್ ಭಾರವುಳ್ಳ ಮಿತಿಯಲ್ಲಿ ಸಾಮಗ್ರಿಗಳನ್ನು ಸಾಗಿಸಬಹುದು. 10 ಚಕ್ರಗಳನ್ನು ಹೊಂದಿರುವ ವಾಹನಗಳಲ್ಲಿ 24 ಟನ್‌ಗಳಷ್ಟು ಪ್ರಮಾಣದ ಭಾರವುಳ್ಳ ಸಾಮಗ್ರಿಗಳನ್ನು ಮಾತ್ರ ಸಾಗಿಸಲು ಅನುಮತಿ ಇದೆ. ಆದರೆ ಇಂತಹ ಲಾರಿಗಳಲ್ಲಿ 40 ಟನ್‌ಗಳಷ್ಟು ದುಪ್ಪಟ್ಟು ಭಾರ ಹೊಂದಿರುವ ಮರಗಳ ದಿಮ್ಮಿಗಳನ್ನು ತುಂಬಿಸಿ ಸಾಗುತ್ತಿರುವುದು ಸಾಮಾನ್ಯವಾಗಿದೆ.ಇದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ವಿಭಾಗದಿಂದ ರಸ್ತೆ ಬದಿಯಲ್ಲಿ ಬೃಹತ್ ಸೂಚನಾ ಫಲಕಗಳನ್ನು ಅಳವಡಿಸಿದರೂ ಇದನ್ನುಲೆಕ್ಕಿಸದೆ ಕೆಲವು ಮರ ವ್ಯಾಪಾರಿಗಳು ನಿಯಮಗಳನ್ನು ಗಾಳಿಗೆ ತೂರುತ್ತಿರುವುದು ಎಗ್ಗಿಲ್ಲದೆ ಮುಂದುವರಿದಿದೆ.
ಲಾರಿಯ ಹಿಂಭಾಗ ಕೂಡ ಮರಗಳ ದಿಮ್ಮಿಗಳನ್ನು ರಸ್ತೆಗೆ ಚಾಚಿಕೊಂಡು 5 ರಿಂದ 10 ಅಡಿಗಳ ಉದ್ದಕ್ಕೂ ಮರಗಳನ್ನು ತುಂಬುವುದು ಅಪಾಯಕಾರಿ ಬೆಳವಣಿಗೆಯಾಗಿದೆ.ಈ ಮೂಲಕ ರಸ್ತೆಯಲ್ಲಿ ಇತರ ವಾಹನಗಳ ಸಂಚಾರಕ್ಕೂ ಅಪಾಯ ಸೃಷ್ಟಿಯಾಗುತ್ತಿದ್ದು, ಅವಘಡಗಳಿಗೆ ಆಹ್ವಾನ ನೀಡಿದಂತಾಗಿದೆ.
ಕೊಡಗು ಜಿಲ್ಲೆಯಿಂದ ಮೈಸೂರು ಜಿಲ್ಲೆಗೆ ಸಾಗುವ ಸಂದರ್ಭ ಕುಶಾಲನಗರ ಗಡಿಭಾಗದಲ್ಲಿ ಅರಣ್ಯ ತಪಾಸಣಾ ಚೆಕ್ ಪೋಸ್ಟ್ ಇದ್ದರೂ ಅಲ್ಲಿನ ಸಿಬ್ಬಂದಿ ಈ ಬಗ್ಗೆ ತಲೆ ಕೆಡಿಸಿಕೊಂಡಂತಿಲ್ಲ.ಈ ಬಗ್ಗೆ ಅವರ ಗಮನಕ್ಕೆ ತಂದಾಗ ಇದು ತಮಗೆ ಸಂಬಂಧಿಸಿದ ಕೆಲಸ ಅಲ್ಲ ಎನ್ನುವ ಸಬೂಬು ಹೇಳಿ ಲಾರಿ ಸಾಗ ಹಾಕುತ್ತಿರುವುದು ತಿಳಿದುಬಂದಿದೆ.
ಸ್ಥಳೀಯ ಪೊಲೀಸ್ ಅಧಿಕಾರಿಗಳು ಕೂಡ ಇಂತಹ ನಿಯಮಬಾಹಿರ ಮತ್ತು ಅಪಾಯಕಾರಿ ವ್ಯವಸ್ಥೆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿರುವಂತೆ ಕಂಡು ಬರುತ್ತಿಲ್ಲ.ಈ ಬಗ್ಗೆ ‘ಕನ್ನಡಪ್ರಭ’ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಅವರ ಗಮನ ಸೆಳೆದಾಗ, ತಾವು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
...............ಅರಣ್ಯ ಇಲಾಖೆ ಮೂಲಕ ಮರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಮಾತ್ರ ಪರಿಶೀಲನೆ ಮಾಡಲು ಅವಕಾಶವಿದೆ. ಇದನ್ನು ಹೊರತುಪಡಿಸಿ ನಮಗೆ ಬೇರೆ ಅಧಿಕಾರ ಇರುವುದಿಲ್ಲ. ಪೊಲೀಸ್ ಮತ್ತು ಸಾರಿಗೆ ಇಲಾಖೆಗೆ ಮಾತ್ರ ಇದರ ಬಗ್ಗೆ ಕಾನೂನು ರೀತಿಯ ಕ್ರಮ ಕೈಗೊಳ್ಳುವ ಅಧಿಕಾರ ಇರುತ್ತದೆ.
-ಬಿ.ಭಾಸ್ಕರ್, ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ