ಸಾರಾಂಶ
ಧಾರವಾಡ: ರಾಜ್ಯ ಸರ್ಕಾರಿ ನೌಕರರ ಸಂಘ ಪ್ರಸಕ್ತ ಸಾಲಿನ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಫೆ. 20 ಮತ್ತು 21ರಂದು ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲು ತಿರ್ಮಾನಿಸಲಾಗಿದೆ. ಜಿಲ್ಲೆಯ ಪ್ರತಿ ಸರ್ಕಾರಿ ನೌಕರರು ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕ್ರೀಡಾಕೂಟ ಸಂಘಟಿಸುವ ಕುರಿತು ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಕೆಲಸದ ಒತ್ತಡ ಮತ್ತು ಸಮಯ ಅಭಾವದಿಂದ ದೈಹಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಂದ ದೂರ ಉಳಿಯುತ್ತಾರೆ. ಇದರಿಂದ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ. ಸರ್ಕಾರಿ ನೌಕರರಲ್ಲಿ ಚೈತನ್ಯ ತುಂಬಲು ರಾಜ್ಯ ಸರ್ಕಾರ ಪ್ರತಿ ವರ್ಷ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸುತ್ತದೆ ಎಂದರು.ನೌಕರರು ತಮ್ಮ ಬಾಲ್ಯದ ದಿನಗಳಲ್ಲಿ ಮತ್ತು ಶಾಲಾ ಕಾಲೇಜು ದಿನಗಳಲ್ಲಿ ಅನೇಕ ಪ್ರತಿಭೆಗಳನ್ನು ಪ್ರದರ್ಶಿಸುತ್ತಾರೆ. ಆದರೆ, ಸೇವೆಗೆ ಸೇರಿದ ತಕ್ಷಣ ಅವುಗಳನ್ನು ಮರೆತಂತೆ ವರ್ತಿಸುತ್ತಾರೆ. ಇದು ನಿವೃತ್ತಿಯ ನಂತರ ಮತ್ತಷ್ಟು ಅವರನ್ನು ಏಕಾಂಗಿಯಾಗಿ ಮಾಡುತ್ತದೆ. ಆದ್ದರಿಂದ ಪ್ರತಿ ಸರ್ಕಾರಿ ನೌಕರನು ತನ್ನಲ್ಲಿರುವ ಸೂಪ್ತ ಪ್ರತಿಭೆಗಳನ್ನು ಪ್ರದರ್ಶಿಸಬೇಕು. ಇದಕ್ಕೆ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ವೇದಿಕೆಯಾಗಿದೆ ಎಂದ ಅವರು, ಸ್ಪರ್ಧೆಗೆ ಅಗತ್ಯವಿರುವ ಸೌಲಭ್ಯಗಳನ್ನು ಸಂಬಂಧಿಸಿದ ಇಲಾಖೆಗಳು ಪೂರೈಸಬೇಕು. ಉತ್ತಮ ರೀತಿಯಲ್ಲಿ ಕಾರ್ಯಕ್ರಮ ಸಂಘಟಿಸಲು ಸೂಚಿಸಿದರು.
ನೌಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ಧನಗೌಡರ ಮಾತನಾಡಿ, ಜಿಲ್ಲಾ ಕ್ರೀಡಾಕೂಟದ ವ್ಯವಸ್ಥಿತ ಆಯೋಜನೆಗಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಜಿಲ್ಲಾ ಪದಾಧಿಕಾರಿಗಳಿಗೆ ಈ ಕುರಿತ ಕಾರ್ಯ ಹಂಚಿಕೆಯನ್ನು ಮಾಡಲಾಗಿದೆ. ವೈಯಕ್ತಿಕ ಕ್ರೀಡೆ, ಗುಂಪು ಕ್ರೀಡೆಗಳು ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ. ಸ್ಪರ್ಧೆಗಳಿಗೆ ಆನ್‌ಲೈನ್ ನೋಂದಣಿಗೆ ಮಾತ್ರ ಅವಕಾಶವಿದೆ. ನೌಕರರು https://surveyheart.com/form/65c7245633b75f5d8b4422e8 ಗೆ ಫೆ. 18ರ ಸಂಜೆ 5ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ಸ್ಪರ್ಧಾಳುಗಳಿಗೆ ಎರಡು ದಿನ ವಿಶೇಷ ಸಾಂದರ್ಭಿಕ (ಒಒಡಿ) ಸೌಲಭ್ಯವನ್ನು ನೀಡಲಾಗುತ್ತಿದೆ ಎಂದರು.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸದಾನಂದ ಅಮರಾಪುರ ಮಾತನಾಡಿದರು. ನೌಕರ ಸಂಘದ ಕಾರ್ಯದರ್ಶಿ ಮಂಜುನಾಥ ಯಡಳ್ಳಿ ಸ್ವಾಗತಿಸಿದರು. ಕೋಶಾಧಿಕಾರಿ ರಾಜಶೇಖರ ಭಾಣದ ವಂದಿಸಿದರು. ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.
;Resize=(128,128))
;Resize=(128,128))
;Resize=(128,128))