ಕೋಟೆ ನಾಡಿನ ಧೀರ ಮಹಿಳೆ ದಿವ್ಯಾಪ್ರಭು: ಆಂಜನೇಯ ಬಣ್ಣನೆ

| Published : Feb 11 2024, 01:47 AM IST

ಸಾರಾಂಶ

ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ನಾಗರಿಕ ವೇದಿಕೆ ವತಿಯಿಂದ ಈ ಹಿಂದಿನ ಜಿಲ್ಲಾಧಿಕಾರಿ ದಿವ್ಯಾಪ್ರಭು ಧಾರವಾಡಕ್ಕೆ ವರ್ಗಾವಣೆಯಾದ ನಿಮಿತ್ತ ಅವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.

ಕನ್ನಡಪ್ರಭವಾರ್ತೆ ಚಿತ್ರದುರ್ಗಕೋಟೆನಾಡಿನ ದಿಟ್ಟ ಹಾಗೂ ಧೀರ ಮಹಿಳೆ ದಿವ್ಯಾಪ್ರಭು ಅವರೆಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಹೆಚ್.ಆಂಜನೇಯ ಬಣ್ಣಿಸಿದರು.

ಇಲ್ಲಿನ ತರಾಸು ರಂಗಮಂದಿರದಲ್ಲಿ ನಾಗರಿಕ ವೇದಿಕೆ ವತಿಯಿಂದ ಆಯೋಜಿಸಲಾದ ಹಿಂದಿನ ಜಿಲ್ಲಾಧಿಕಾರಿ ದಿವ್ಯಾಪ್ರಭು ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಿವ್ಯಾಪ್ರಭು ಅವರು ಸುಸಂಸ್ಕೃತ ಕುಟುಂಬದಿಂದ ಬಂದವರು. ಮೊದಲಿಗೆ ಐಎಫ್ಎಸ್ ಅಧಿಕಾರಿಯಾಗಿ ಆಯ್ಕೆಯಾಗಿ ಅಷ್ಟಕ್ಕೇ ತೃಪ್ತಿಪಟ್ಟುಕೊಳ್ಳದೆ ಛಲವಿಟ್ಟು ಐಎಎಸ್ ಪಾಸ್ ಆಗಿ ರಾಜ್ಯದ ಅನೇಕ ಕಡೆ ಕೆಲಸ ಮಾಡಿದ್ದಾರೆ ಎಂದರು.

ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿದ್ದ ವೇಳೆ ರೈತರು, ಜನರ ಪರವಾಗಿ ಅವರು ಸಲ್ಲಿಸಿದ ಸೇವೆ ಸ್ಮರಣೀಯ. ಕವಾಡಿಗರಹಟ್ಟಿಯಲ್ಲಿ ನಡೆದ ಅಹಿತಕರ ಘಟನೆಯನ್ನು ಸಮರ್ಥ ವಾಗಿ ನಿಭಾಯಿಯಸಿದ್ದರು ಎಂದು ಹೇಳಿದರು.ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ಸರ್ಕಾರದ ಕೆಲಸ ದೇವರ ಕೆಲಸವೆಂದು ತಿಳಿದು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದ ದಿವ್ಯಾಪ್ರಭುರವರು ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ದೊಡ್ಡ ಜಿಲ್ಲೆ ಧಾರವಾಡಕ್ಕೆ ವರ್ಗಾವಣೆಗೊಂಡಿದ್ದಾರೆ. ಮುಂದೆಯೂ ಜನಸೇವೆ ಮಾಡಿ ಉತ್ತಮ ಹೆಸರು ಗಳಿಸಲಿ ಎಂದು ಶುಭ ಹಾರೈಸಿದರು.

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಆಯುಕ್ತೆ ವಸಿರೆಡ್ಡಿ ವಿಜಯಜೋತ್ಸ್ನ ಮಾತನಾಡಿ, ದಿವ್ಯಪ್ರಭುರವರು ನೋಡಲು ಮೃದುವಾಗಿರಬಹುದು. ಆದರೆ ಅವರು ಕೆಲವೊಮ್ಮೆ ತೆಗೆದುಕೊಳ್ಳುವ ನಿರ್ಧಾರಗಳು ಕಠಿಣ ದಿಟ್ಟವಾಗಿರುತ್ತಿದ್ದವು ಎಂದು ಹೇಳಿದರು.

ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ದಿವ್ಯಪ್ರಭು ಜಿಲ್ಲಾಧಿಕಾರಿಯಾಗಿ ಚಿತ್ರದುರ್ಗದಲ್ಲಿ ಸೇವೆ ಸಲ್ಲಿಸಿ ಧಾರವಾಡಕ್ಕೆ ವರ್ಗಾವಣೆಯಾಗಿದ್ದರೂ ಚಿತ್ರದುರ್ಗ ನಾಗರೀಕ ವೇದಿಕೆಯಿಂದ ಇಷ್ಟೊಂದು ಅದ್ಧೂರಿಯಾಗಿ ಬೀಳ್ಕೊಡುಗೆ ನೀಡಿರುವುದು ಹೃದಯಸ್ಪರ್ಶಿಯಾಗಿದೆ ಎಂದರು.

ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ದಿವ್ಯಪ್ರಭು, ಕರ್ನಾಟಕದಲ್ಲಿ ಹನ್ನೆರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಚಿತ್ರದುರ್ಗದ ಜನ ನೀಡಿದಂಥ ಬೀಳ್ಕೊಡುಗೆ ನನ್ನ ಜೀವನದಲ್ಲಿ ಮರೆಯಲಾಗದಂತಹ ಮಧುರ ಕ್ಷಣ ಎಂದು ಭಾವುಕರಾದರು.

ಚಿತ್ರದುರ್ಗ ಜಿಲ್ಲೆಯ ಜನ ಸೇರಿ ನನಗೆ ಇಂತಹ ಅಭೂತಪೂರ್ವವಾದ ಬೀಳ್ಕೊಡುಗೆ ನೀಡಿರುವುದನ್ನು ಎಂದಿಗೂ ಮರೆಯುವುದಿಲ್ಲ. ಇಲ್ಲಿಯವರೆಗೂ ನನ್ನ ತವರು ಮನೆ ತಮಿಳುನಾಡು ಎಂದು ಹೇಳುತ್ತಿದ್ದೆ. ಇನ್ನು ಮುಂದೆ ಚಿತ್ರದುರ್ಗ ನನ್ನ ತವರು ಮನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆಂದರು.

ಹಿಂದುಳಿದ ಜಿಲ್ಲೆ ಚಿತ್ರದುರ್ಗದಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ ತೃಪ್ತಿ ನನಗಿದೆ. ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಆರು ಮಂದಿ ಮೃತಪಟ್ಟು ಇನ್ನೂರಕ್ಕೂ ಹೆಚ್ಚು ಜನ ಅಸ್ಪಸ್ಥರಾದಾಗ ಹಗಲು-ರಾತ್ರಿ ಎನ್ನದೆ ಕೆಲಸ ಮಾಡಿದ್ದೇನೆ. ಅದಕ್ಕೆ ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕರು ಸಹಕರಿಸಿದರು. ರಾಜ್ಯದಲ್ಲಿ ನಾನು ಎಲ್ಲಿಯೇ ಅಧಿಕಾರದಲ್ಲಿರಲಿ ಚಿತ್ರದುರ್ಗಕ್ಕೆ ನನ್ನಿಂದ ಏನಾದರೂ ಒಳ್ಳೇದು ಮಾಡುವ ಸಂದರ್ಭ ಸಿಕ್ಕಾಗ ಖಂಡಿತ ಮಾಡುತ್ತೇನೆಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಕಾರ್ತಿಕ್, ತಹಶೀಲ್ದಾರ್ ನಾಗವೇಣಿ, ಸೌಮ್ಯ ಮಂಜುನಾಥ್, ನಗರಸಭೆ ಪೌರಾಯುಕ್ತೆ ರೇಣುಕ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ ರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕ್ ಅಧ್ಯಕ್ಷ ಎಸ್.ಆರ್.ಲಕ್ಷ್ಮಿಕಾಂತ ರೆಡ್ಡಿ, ಎಸ್.ಆರ್ ಎಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ಎ.ಲಿಂಗಾ ರೆಡ್ಡಿ ವೇದಿಕೆಯಲ್ಲಿದ್ದರು.