ಸಂವಿಧಾನ ಜಾಗೃತಿ ಜಾಥಾಕ್ಕೆ ಭವ್ಯ ಸ್ವಾಗತ

| Published : Feb 11 2024, 01:47 AM IST

ಸಾರಾಂಶ

ಸಂವಿಧಾನ ಅಂಗೀಕಾರಗೊಂಡು ೭೫ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯ ವ್ಯಾಪಿ ನಡೆಯುತ್ತಿರುವ ಸಂವಿಧಾನ ಜಾಗೃತಿ ಜಾಥಾವು ಶನಿವಾರ ಪಟ್ಟಣಕ್ಕೆ ಆಗಮಿಸಿದ್ದು, ತಾಲೂಕಾಡಳಿತದಿಂದ ಸ್ವಾಗತಿಸಲಾಯಿತು.

ಕನಕಗಿರಿ: ಸಂವಿಧಾನ ಅಂಗೀಕಾರಗೊಂಡು ೭೫ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯ ವ್ಯಾಪಿ ನಡೆಯುತ್ತಿರುವ ಸಂವಿಧಾನ ಜಾಗೃತಿ ಜಾಥಾವು ಶನಿವಾರ ಪಟ್ಟಣಕ್ಕೆ ಆಗಮಿಸಿದ್ದು, ತಾಲೂಕಾಡಳಿತದಿಂದ ಸ್ವಾಗತಿಸಲಾಯಿತು.

ಜಿಲ್ಲೆಯ ಯಲಬುರ್ಗಾ ತಾಲೂಕಿನಿಂದ ಮುಸಲಾಪುರ ಮಾರ್ಗವಾಗಿ ಪಟ್ಟಣದ ತಾವರಗೇರಾ ರಸ್ತೆಯ ಶ್ರೀತೊಂಡಿತೇವರಪ್ಪ ಕಮಾನಿನ ಬಳಿಗೆ ಬಂದಿದ್ದ ಜಾಥಾ ವಾಹನದ ಮೇಲ್ಭಾಗದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಮೂರ್ತಿಗೆ ತಹಸೀಲ್ದಾರ ವಿಶ್ವನಾಥ ಮುರುಡಿ ಹೂಮಾಲೆ ಅರ್ಪಿಸಿ ಚಾಲನೆ ನೀಡಿದರು.

ಜಾಥಾದಲ್ಲಿ ಡೊಳ್ಳು ಕುಣಿತ, ತಾಷಾ ಮೇಳ, ಮಹಿಳಾ ಕಲಾ ತಂಡದವರು ಭಾಗವಹಿಸಿ ವಾದ್ಯ ನುಡಿಸಿದರು. ಇನ್ನೂ ಮೊರಾರ್ಜಿ ದೇಸಾಯಿ ವಸತಿ (ಪಜಾ) ಶಾಲೆಯ ಅಂಬೇಡ್ಕರರ ಕುರಿತಾದ ಸ್ತಬ್ಧಚಿತ್ರ ಮೆರವಣಿಗೆ ಗಮನ ಸೆಳೆಯಿತು.

ಎಂಎಚ್‌ಪಿಎಸ್ ವಿದ್ಯಾರ್ಥಿಗಳಿಂದ ವಚನಕಾರರು, ಕರ್ನಾಟಕ ಪಬ್ಲಿಕ್ ಶಾಲೆಯಿಂದ ಬುದ್ಧನ ಟ್ಯಾಬ್ಲೋ ಹಾಗೂ ಆದರ್ಶ ವಿದ್ಯಾಲಯದಿಂದ ಸಂವಿಧಾನ ಪೀಠಿಕೆಯ ಸ್ತಬ್ದ ಚಿತ್ರ ಮೆರವಣಿಗೆ ಜಾಥಾದಲ್ಲಿ ಸಾರ್ವಜನಿಕರನ್ನು ಆಕರ್ಷಿಸಿದವು.

ಇನ್ನೂ ಜಾಥಾ ಉದ್ದಕ್ಕೂ ರಾಷ್ಟ್ರಧ್ವಜ ಹಾಗೂ ನೀಲಿ ಬಾವುಟಗಳು ಪ್ರದರ್ಶನಗೊಂಡವು. ಶಾಲಾ ಮಕ್ಕಳು ಅಂಬೇಡ್ಕರ ಹಾಗೂ ಸಂವಿಧಾನ ಕುರಿತಾದ ಘೋಷಣೆ ಕೂಗಿದರು. ಜಾಥಾ ನಡೆಯುವ ಬೀದಿಗಳಲ್ಲಿ ಬೈಕ್ ರ‍್ಯಾಲಿಯೂ ನಡೆಯಿತು.

ವಿದ್ಯಾರ್ಥಿನಿಯರಿಂದ ನೃತ್ಯ:

ಜಾಥಾ ಅಂಬೇಡ್ಕರ ವೃತ್ತಕ್ಕೆ ತಲುಪುತ್ತಿದ್ದಂತೆ ಸಾವಿರಾರು ಜನ ವಾಹನದ ಅಂಬೇಡ್ಕರ ಮೂರ್ತಿಗೆ ಪುಷ್ಪ ಸಮರ್ಪಿಸಿ ನಮನ ಸಲ್ಲಿಸಿದರು. ಬಳಿಕ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರು ನಾಡಿನ, ನೆಲ, ಜನ ಹಾಗೂ ಅಂಬೇಡ್ಕರ ಕುರಿತಾದ ಗೀತೆಗಳಿಗೆ ನೃತ್ಯ ಮಾಡಿದರು.ಮೂರು ಕಿ.ಮೀ. ಜಾಥಾ:

ತೊಂಡಿತೇವರಪ್ಪ ಕಮಾನ್‌ನಿಂದ ವಾಲ್ಮೀಕಿ ವೃತ್ತದ ಮಾರ್ಗವಾಗಿ ಅಂಬೇಡ್ಕರ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಜಾಥಾ ನಡೆಯಿತು. ಜಾಥಾ ಮೂರು ಕಿಮೀ ಹೆಚ್ಚು ಅಂತರ ಜಾಥಾ ನಡೆಯಿತು.ತಾಲೂಕಿನ ಚಿಕ್ಕಮಾದಿನಾಳ, ಮುಸಲಾಪುರ, ಬಸರಿಹಾಳ, ಗೌರಿಪುರ, ಹುಲಿಹೈದರ ಗ್ರಾಮಗಳಲ್ಲಿಯೂ ಸಂವಿಧಾನ ಜಾಗೃತಿ ಯಾತ್ರೆಗೆ ಭವ್ಯ ಸ್ವಾಗತ ದೊರೆಯಿತು.ಗ್ರೇಡ್-೨ ತಹಸೀಲ್ದಾರ ವಿ.ಎಚ್ ಹೊರಪೇಟೆ, ಪಿಎಸ್‌ಐ ಲೋಕೇಶ, ತಾಪಂ ಕಾರ್ಯನಿರ್ವಾಹಕಾಧಿಕಾರಿ ಚಂದ್ರಶೇಖರ ಕಂದಕೂರು, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ರಾಮಚಂದ್ರಪ್ಪ, ಸಮಾಜ ಕಲ್ಯಾಣಾಧಿಕಾರಿ ಸಹಾಯಕ ನಿರ್ದೇಶಕ ಶರಣಪ್ಪ, ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರೂಪಾಕ್ಷ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅನಿಲಕುಮಾರ ಇದ್ದರು.