ಸಾರಾಂಶ
ಹೊಸಪೇಟೆ: 2028ರ ಬಳಿಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಿಎಂ ಆಗಲಿ ಎಂದು ನನಗೂ ಆಸೆ ಇದೆ ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ವಿಜಯನಗರ ಜಿಲ್ಲೆಯ ಗಾದಿಗನೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2028ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲೇ ಚುನಾವಣೆಗೆ ಹೋಗ್ತೇವೆ ಎಂದು ಡಿ.ಕೆ. ಸುರೇಶ್ ಅವರೂ ಹೇಳಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕು ಎನ್ನುವ ಆಸೆ ನನಗೂ ಇದೆ. 2028ರ ಬಳಿಕ ಡಿಸಿಎಂ ಡಿಕೆ. ಶಿವಕುಮಾರ್ ಸಿಎಂ ಆಗಲಿ ಎಂದು ಪುನರುಚ್ಚರಿಸಿದರು.ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಪಕ್ಷ ಕಟ್ಟಿದ್ದಾರೆ. ಅವರಿಬ್ಬರ ಶ್ರಮದಿಂದ 140 ಸ್ಥಾನಗಳು ಬಂದಿವೆ. ರಾಜ್ಯ ಸರ್ಕಾರ ಈಗ ಸೂಸೂತ್ರವಾಗಿ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ದೊಡ್ಡ ನಾಯಕರು, ನಮ್ಮಲ್ಲಿ ನವೆಂಬರ್ ಕ್ರಾಂತಿಯೂ ಇಲ್ಲ. ಯಾವ ಕ್ರಾಂತಿಯೂ ಇಲ್ಲ ಎಂದರು.
2028ರವರೆಗೆ ಸಿದ್ದರಾಮಯ್ಯನವರೇ ಸಿಎಂ: ರಾಜ್ಯದಲ್ಲಿ ಯಾವ ಕ್ರಾಂತಿಯೂ ಇಲ್ಲ. ಬಿಜೆಪಿಯವರು ಊಹೆ ಮಾಡಿಕೊಳ್ಳುತ್ತಿದ್ದಾರೆ. 2028ರ ವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.ಇಲ್ಲಿನ ಕಮಲಾಪುರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟಿದೆ. ಬಿಜೆಪಿಯಲ್ಲಿ ಐದು ಗುಂಪು ಇವೆ. ಕಾಂಗ್ರೆಸ್‌ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ ಎಂದರು.ಸಚಿವ ಸಂಪುಟ ಪುನಾರಚನೆಯಾದರೆ ಜಮೀರ್ ಅಹಮದ್ ಖಾನ್ ಅವರಿಗೆ ಡಿಸಿಎಂ ಪಟ್ಟ ಕೊಡಬೇಕೆಂಬ ಕೂಗಿದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನನ್ನ ಅಭಿಮಾನಿಗಳು, ಹಿತೈಷಿಗಳು ಕೇಳ್ಬಹುದು. ಜನ ನಿರೀಕ್ಷೆ, ಆಸೆ ಇಟ್ಟುಕೊಂಡಿದ್ದಾರೆ. ನಮ್ಮದು ಹೈಕಮಾಂಡ್ ಪಕ್ಷ ಆಗಿದೆ. ಹೈಕಮಾಂಡ್ ಏನು ಹೇಳಿದರೂ ನಾವು ಮಾಡುತ್ತೇವೆ. ಅವರು ಮಂತ್ರಿಗಿರಿ ಬಿಟ್ಟು, ಪಕ್ಷಕ್ಕಾಗಿ ದುಡಿಮೆ ಮಾಡು ಅಂದರೂ ನಾನು ಪಕ್ಷಕ್ಕಾಗಿ ಕೆಲಸ ಮಾಡುವೆ ಎಂದರು.ಬಿಹಾರ ಚುನಾವಣೆ ಪ್ರಚಾರಕ್ಕಾಗಿ ಖಂಡಿತ ತೆರಳುವೆ. ಆರ್‌ಜೆಡಿ, ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕೈಗೊಳ್ಳುವೆ. ಬಿಹಾರಕ್ಕೆ ತೆರಳಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವೆ ಎಂದು ಹೇಳಿದರು.ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ನನ್ನ ಬಳಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಜತೆಗೆ ರೈತ ಹೋರಾಟಗಾರರು ಆಗಮಿಸುತ್ತಾರೆ. ಅವರ ಸಮಸ್ಯೆಗಳಿಗೆ ಪರಿಹಾರ ಕೊಡಿಸುವುದು ಆದ್ಯ ಕರ್ತವ್ಯ ಆಗಿದೆ. ನಾನು ಕೂಡ ಹಳ್ಳಿಯಲ್ಲೇ ಹುಟ್ಟಿರುವೆ. ರೈತರನ್ನು ತೀರಾ ಹತ್ತಿರದಿಂದ ನೋಡಿರುವೆ. ಹಾಗಾಗಿ ರೈತರ ಸಮಸ್ಯೆಗಳಿಗೆ ಕಿವಿಗೊಡುತ್ತಿರುವೆ. ನಾನು ಕಾರಿನಲ್ಲಿ ತೆರಳುವಾಗ ರೈತರು ದಾರಿಯಲ್ಲಿ ಎದುರಾದರೆ, ಅವರನ್ನು ಮಾತನಾಡಿಸಿಯೇ ತೆರಳುವೆ. ಅನ್ನದಾತರ ಕಷ್ಟಕ್ಕೆ ನಾವು ಆಗಬೇಕು ಎಂದರು.
ಜಿಲ್ಲೆಯ ಈರುಳ್ಳಿ ಬೆಳೆಗಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ನ. 9ರಂದು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರಲ್ಲ ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ನಾನು ಅವರ ಸಮಸ್ಯೆ ಪರಿಹಾರಕ್ಕೆ ಮುಖ್ಯಮಂತ್ರಿಯಿಂದ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಸಿರುವೆ. ದರ ನಿಗದಿ ಕೇಂದ್ರ ಸರ್ಕಾರ ಮಾಡುತ್ತದೆ. ಹಾಗಾಗಿ ಪತ್ರ ಬರೆಯಲಾಗಿದೆ. ನಾನು ಕೂಡ ಈ ವಿಷಯವಾಗಿ ಸಿಎಂಗೆ ಪತ್ರ ಬರೆದಿರುವೆ. ಅವರ ಜತೆ ಚರ್ಚಿಸಿ, ಸಮಸ್ಯೆ ಬಗೆಹರಿಸುವೆ ಎಂದರು.;Resize=(128,128))
;Resize=(128,128))