ಸಮರ್ಪಕ ಬಸ್ ಸೌಲಭ್ಯ, ರಸ್ತೆ ದುರಸ್ತಿಗೆ ಆಗ್ರಹ

| Published : Nov 03 2025, 02:30 AM IST

ಸಮರ್ಪಕ ಬಸ್ ಸೌಲಭ್ಯ, ರಸ್ತೆ ದುರಸ್ತಿಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಡಗೋಡ ಸಾರಿಗೆ ಘಟಕದಿಂದ ಹುಬ್ಬಳ್ಳಿ ಮಾರ್ಗಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸುವುದು ಹಾಗೂ ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿ ಪಟ್ಟಣದ ಸಾರ್ವಜನಿಕರು ಭಾನುವಾರ ಶಾಸಕ ಶಿವರಾಮ ಹೆಬ್ಬಾರಗೆ ಮನವಿ ಸಲ್ಲಿಸಿದರು.

ಶಾಸಕ ಶಿವರಾಮ ಹೆಬ್ಬಾರಗೆ ಸಾರ್ವಜನಿಕರ ಮನವಿ

ಕನ್ನಡಪ್ರಭ ವಾರ್ತೆ ಮುಂಡಗೋಡ

ಮುಂಡಗೋಡ ಸಾರಿಗೆ ಘಟಕದಿಂದ ಹುಬ್ಬಳ್ಳಿ ಮಾರ್ಗಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸುವುದು ಹಾಗೂ ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿ ಪಟ್ಟಣದ ಸಾರ್ವಜನಿಕರು ಭಾನುವಾರ ಶಾಸಕ ಶಿವರಾಮ ಹೆಬ್ಬಾರಗೆ ಮನವಿ ಸಲ್ಲಿಸಿದರು.

ಸಮರ್ಪಕ ಬಸ್ ಇಲ್ಲದ ಕಾರಣ ಹಲವು ದಿನಗಳಿಂದ ಹುಬ್ಬಳ್ಳಿಗೆ ಪ್ರಯಾಣಿಸುವುದು ಸಾರ್ವಜನಿಕರಿಗೆ ಬಹಳ ಕಷ್ಟಕರವಾಗಿದೆ. ಸುಮಾರು ಎರಡು ವರ್ಷಗಳ ಹಿಂದೆ ನೂತನವಾಗಿ ನಿರ್ಮಿಸಲಾದ ಮುಂಡಗೋಡ ಸಾರಿಗೆ ಘಟಕವನ್ನು ಸ್ವತಃ ಸಾರಿಗೆ ಸಚಿವರು ಬಂದು ಉದ್ಘಾಟನೆ ಮಾಡಿದ್ದರು. ಆಗ ಬಸ್‌ಗಳ ಸಮಸ್ಯೆ ಪರಿಹಾರವಾಗುತ್ತದೆ ಎಂಬ ಆಶಾಭಾವನೆ ಸಾರ್ವಜನಿಕರಲ್ಲಿ ಮೂಡಿತ್ತು. ಆದರೆ ಕಾರ್ಯಾಚರಣೆ ಪ್ರಾರಂಭವಾಗದೆ ಬಹುಕಾಲ ಕಳೆದ ಬಳಿಕ, ಕಳೆದ ನಾಲ್ಕು ತಿಂಗಳ ಹಿಂದೆ ಕೇವಲ ನಾಲ್ಕು ಬಸ್‌ಗಳನ್ನು ಇತರ ಮಾರ್ಗಗಳಲ್ಲಿ ಆರಂಭಿಸಿದ್ದು, ಈ ಹುಬ್ಬಳ್ಳಿ ಮಾರ್ಗದಲ್ಲಿ ಯಾವುದೇ ಬಸ್ ಚಾಲನೆ ಮಾಡಲಾಗಿಲ್ಲ.

ಈ ವಿಷಯವನ್ನು ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿದರೂ ಯಾವುದೇ ಸ್ಪಂದನೆ ದೊರೆತಿಲ್ಲ.ಮುಂಡಗೋಡ ಸಾರಿಗೆ ಘಟಕದಿಂದ ಹುಬ್ಬಳ್ಳಿ ನಗರಕ್ಕೆ ನೇರ ಸಾರಿಗೆ ವ್ಯವಸ್ಥೆಯನ್ನು ೧೫ ದಿನಗಳ ಒಳಗಾಗಿ ಪ್ರಾರಂಭಿಸಬೇಕು ಹಾಗೂ ಹುಬ್ಬಳ್ಳಿ ಮಾರ್ಗದ ರಸ್ತೆ ದುರಸ್ತಿಗೊಳಿಸಬೇಕು. ಇತ್ತೀಚೆಗೆ ಈ ಮಾರ್ಗದಲ್ಲಿ ರಸ್ತೆ ಹಾಳಾಗಿರುವುದನ್ನು ದುರುಪಯೋಗ ಮಾಡಿಕೊಂಡು ಕೆಲ ಕಳ್ಳರು ಪ್ರಯಾಣಿಕರನ್ನು ದರೋಡೆ ಮಾಡಿದ ಪ್ರಕರಣಗಳು ನಡೆಯುತ್ತಿವೆ. ಹೀಗಾಗಿ, ಸಾರ್ವಜನಿಕರ ಸುರಕ್ಷತೆ ಮತ್ತು ಅನುಕೂಲತೆಗಾಗಿ ತಕ್ಷಣ ಕ್ರಮ ಕೈಗೊಳ್ಳಬೇಕು. ೧೫ ದಿನಗಳೊಳಗಾಗಿ ಸಾರಿಗೆ ವ್ಯವಸ್ಥೆ ಮಾಡದಿದ್ದಲ್ಲಿ ಸಾರ್ವಜನಿಕರು ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.