ಜಗತ್ತಿನಲ್ಲಿ ನಮ್ಮ ಎಲ್ಲಾ ಇಚ್ಚೆಗಳು ನೆರವೇರುವುದಿಲ್ಲ. ದೈವೆಚ್ಚೆಯಿಂದ ಜೀವನ ಸಾಗಲಿದೆ. ಹಣ ,ಆಸ್ತಿ, ಸಂಪತ್ತು ಎಷ್ಟೇ ಇದ್ದರೂ ಕೂಡ ಒಂದಲ್ಲಾ ಒಂದು ಚಿಂತೆಯಲ್ಲಿಯೇ ಮನುಷ್ಯರು ಬದುಕು ಸಾಗಿಸುತ್ತಿರುವ ಪ್ರಸ್ತುತ ದಿನಮಾನಗಳಲ್ಲಿ ಎದೆಯೊಳಗೆ ಸಂತೋಷ ಇರುವವನೇ ಯಶಸ್ವಿ ಪುರುಷ ಎನ್ನುವ ಸತ್ಯವನ್ನು ಅರಿತು ಬದುಕಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಭೂಮಿ ಮೇಲೆ ಇರುವಷ್ಟು ದಿನ ನಾವುಗಳು ಸಮಾಜಕ್ಕೆ ಒಳಿತಾಗುವ ಸತ್ಕಾರ್ಯ ಮಾಡುವ ಮೂಲಕ ಸಾವಿನ ನಂತರವೂ ನೆನಪು ಉಳಿದುಕೊಳ್ಳುವಂತಹ ಬದುಕು ನಡೆಸಬೇಕು ಎಂದು ಕೊಪ್ಪಳ ಗವಿ ಸಿದ್ದೇಶ್ವರ ಮಠದ ಶ್ರೀಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸಂದೇಶ ನೀಡಿದರು.ಪಟ್ಟಣದಲ್ಲಿ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತ್ಯುತ್ಸವದ ಅಂಗವಾಗಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸ್ವಾಮೀಜಿ, ಭೂಮಿಯಲ್ಲಿ ಹುಟ್ಟಿದ ಯಾವುದೇ ವ್ಯಕ್ತಿಯ ಶರೀರ ಸಿರಿ, ಸಂಪತ್ತು ಸೇರಿದಂತೆ ಯಾವುದೇ ಸಂಬಂಧಗಳು ಉಳಿಯದೇ ಕರಗಿ ಹೋಗುತ್ತದೆ. ನಮ್ಮದು ಎಂಬುದು ಏನು ಉಳಿಯದು ಎಂದರು.

ಜಗತ್ತಿನಲ್ಲಿ ನಮ್ಮ ಎಲ್ಲಾ ಇಚ್ಚೆಗಳು ನೆರವೇರುವುದಿಲ್ಲ. ದೈವೆಚ್ಚೆಯಿಂದ ಜೀವನ ಸಾಗಲಿದೆ. ಹಣ ,ಆಸ್ತಿ, ಸಂಪತ್ತು ಎಷ್ಟೇ ಇದ್ದರೂ ಕೂಡ ಒಂದಲ್ಲಾ ಒಂದು ಚಿಂತೆಯಲ್ಲಿಯೇ ಮನುಷ್ಯರು ಬದುಕು ಸಾಗಿಸುತ್ತಿರುವ ಪ್ರಸ್ತುತ ದಿನಮಾನಗಳಲ್ಲಿ ಎದೆಯೊಳಗೆ ಸಂತೋಷ ಇರುವವನೇ ಯಶಸ್ವಿ ಪುರುಷ ಎನ್ನುವ ಸತ್ಯವನ್ನು ಅರಿತು ಬದುಕಬೇಕು ಎಂದರು.

ಊರ ಮುಂದಿನ ಬಾವಿಯನ್ನು‌ ಮುಚ್ಚಬಹುದು. ಆದರೆ, ಊರ ಮಂದಿಯ ಬಾಯಿ ಮುಚ್ಚಿಸಲು ಸಾಧ್ಯವಾಗದು. ಮಾನವ ಇಚ್ಚೆ ಪಡುವುದು ತಪ್ಪಲ್ಲ. ಇಚ್ಚಿಸಿದ್ದೇಲ ಸಿಗಬೇಕೆಂಬುದು ಸರಿಯಲ್ಲ. ಆಗಾಗಿಯೇ ಶ್ರೀಕೃಷ್ಣ ಹೇಳಿರುವುದು ಕರ್ಮ ನೀ ಮಾಡು ಫಲಾಫಲ ನನಗೆ ಬಿಡು ಎಂಬಂತೆ ನೀವು ಯಾವುದೇ ಒಳ್ಳೆಯ ಕೆಲಸ ಮಾಡಿ ಅದರ ಫಲಾಫಲವನ್ನು ಭಗವಂತನಿಗೆ ನೀಡಬೇಕು ಎಂದರು.

ಪ್ರತಿಯೊಬ್ಬರು ಪ್ರತಿ ಕ್ರೀಡೆಯನ್ನು ಗೆಲ್ಲಬೇಕೆಂದು ಮೈದಾನಕ್ಕೆ ಹೋಗುತ್ತಾರೆ. ಆದರೆ, ಆ ಆಟದಲ್ಲಿ ಅಪೈರ್ ಕೊಡುವ ತೀರ್ಮಾನಕ್ಕೆ ತಲೆಬಾಗಲಾಗಬೇಕು. ದೇವರು ಅಫೈರ್ ಇದ್ದಂತೆ. ಇರುವಷ್ಟು ದಿನ ಆಟವಾಡಿಕೊಂಡು ಗೆಲುವು, ಸೋಲನ್ನು ದೇವರಿಗೆ ಬಿಟ್ಟು ಬದುಕು ಸಾಗಿಸಬೇಕು ಎಂದರು.

ದೀಪವೇ ಇಲ್ಲದ ಗುಡಿಸಲಿನಲ್ಲಿ ವಿದ್ಯೆ ಎಂಬ ದೀಪ ಹಚ್ಚಿ ಬೆಳಕು ನೀಡುವುದರ ಜೊತೆಗೆ ಬಡವರ ಮಕ್ಕಳಿಗೆ ಅರಿವಿನ ಮನೆ ಕಟ್ಟಿದ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳು ಸಮಾಜದಲ್ಲಿ ಶಾಶ್ವತ ದೇವರಾಗಿ ಉಳಿದಿದ್ದಾರೆ. ಏನು ಮಾಡದ ಮನುಷ್ಯ ದೀಪ ಹರಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾನೆ. ಆದರೆ, ಶತ ಶತಮಾನಗಳ ಹಿಂದೆ ಅಜ್ಞಾನವನ್ನು ಹೋಗಲಾಡಿಸಲು ಜ್ಞಾನ ನೀಡಿ ಹಸಿದ ಹೊಟ್ಟೆಗೆ ಅನ್ನ ನೀಡಿದ ಶಿವರಾತ್ರೇಶ್ವರರ ಹುಟ್ಟುಹಬ್ಬವನ್ನು ನಿತ್ಯ ಕಾರ್ತಿಕೋತ್ಸವವಾಗಿ ಆಚರಿಸಲಾಗುತ್ತಿದೆ ಎಂದರು.

ಪಂಚಭೂತಗಳಿಂದ ನಿರ್ಮಿತಗೊಂಡಿರುವ ದೇಹ ಬರುವುದು, ಬಡಿದಾಡುವುದು, ಹೋಗುವುದು ಮೂರು ದಿನಗಳ ಜಾತ್ರೆಯಲ್ಲಷ್ಟೇ ಬದುಕುವುದು ಎನ್ನುವ ಸತ್ಯವನ್ನು ಎದೆಯೊಳಗೆ ಇಟ್ಟುಕೊಂಡು ಸಮಾಜಕ್ಕೆ ಕೊಡುಗೆ ನೀಡಿರುವ ಶಿವರಾತ್ರೀಶ್ವರ ಜಯಂತ್ಯುತ್ಸವನ್ನು ಮಳವಳ್ಳಿಯಲ್ಲಿ ಆಚರಿಸಲಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಮನುಷ್ಯ ಭೂಮಿಗೆ ಹುಟ್ಟಿ ಬಂದ ಮೇಲೆ ಸೇವೆ ಮಾಡಿ ಹೋಗಬೇಕು. ಸಂತೋಷವೇ ನಿಜವಾದ ಜೀವನ ಎಂಬುದನ್ನು ಅರಿತು ಮೂರು ದಿನಗಳ ಜಾತ್ರೆಯಲ್ಲಿ ಬದುಕನ್ನು ಸಂಘರ್ಷವಾಗಿಸಿಕೊಳ್ಳಬಾರದು. ದೈವೈಚ್ಚೆಯಂತೆ ಸಮರ್ಪಣಾ ಬದುಕು ನಡೆಸಬೇಕು ಎಂದರು.

ವಿಶ್ವ ಒಕ್ಕಲ್ಲಿಗರ ಸಂಸ್ಥಾನ ಮಠದ ನಿಶ್ಚಲಾನಂದಸ್ವಾಮೀಜಿ ಮಾತನಾಡಿ, ಹತ್ತನೇ ಶತಮಾನದಲ್ಲಿ ಧಾರ್ಮಿಕ ಪ್ರಜ್ಞೆ ವಿಸ್ತರಿಸುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಸುಧಾರಿಸುವಲ್ಲಿ ಸುತ್ತೂರು ಶ್ರೀಮಠ ಪ್ರಮುಖ ಪಾತ್ರ ವಹಿಸುತ್ತಿದೆ. ಧರ್ಮ, ಸಂಸ್ಕೃತಿ, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಆಧ್ಯಾತ್ಮಿಕ ಪ್ರಭಾವ ನಿರ್ಮಾಣ ಮಾಡಿ ಸಾಧು ಸಂತರು, ಭಕ್ತರಿಗೆ ನಡೆದಾಡುವ ದೇವರಂತೆ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇವೆ ಸಲ್ಲಿಸುತ್ತಾ ಬರುತ್ತಿರೆ ಎಂದರು.

ಕಾರ್ಯಕ್ರಮದಲ್ಲಿ ಕನಕಪುರ ದೇಗುಲ ಮಠದ ಶ್ರೀಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು, ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ, ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ್‌ ಬಿದರಿ, ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ, ನಿರಂಜನ್‌ ಕುಮಾರ್‌, ನಾಗಮಣಿ ನಾಗೇಗೌಡ ಸೇರಿದಂತೆ ಹಲವರು ಇದ್ದರು.