ಯುವಕರು ನಮ್ಮಲ್ಲಿರುವ ಹೊಸ ಹೊಸ ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳುವ ಮೂಲಕ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಮಾಡಬೇಕು. ಇನ್ನು ಬಹುತೇಕ ರೈತರು ಈ ಹಿಂದಿನ ಸಾಂಪ್ರದಾಯಕ ಕೃಷಿಯನ್ನು ಮಾಡಿಕೊಂಡು ಬರುತ್ತಿರುವುದರಿಂದ ಕೃಷಿಯಲ್ಲಿ ಆರ್ಥಿಕವಾಗಿ ಗಟ್ಟಿಯಾಗಲು ಸಾಧ್ಯವಾಗುತ್ತಿಲ್ಲ. ತಂತ್ರಜ್ಞಾನ ಬಳಸಿ ನಾವು ಮಾಡಿರುವ ಹೈನುಗಾರಿಕೆಯಲ್ಲಿ ಸಾವಿರ ಹಸುಗಳನ್ನು ನೋಡಿಕೊಳ್ಳಲು ಕೇವಲ ೧೫ ಮಂದಿಯಷ್ಟೆ ಇದ್ದರೆ ಸಾಕು. ಹಾಗೆಯೇ ದಿನದಲ್ಲಿ ಎರಡು ಬಾರಿ ಕೆಲಸ ಮಾಡಿದರೆ ಸಾಕಾಗುತ್ತದೆ. ಆದರೇ ಹಳ್ಳಿಗಳಲ್ಲಿ ಇಂದಿಗೂ ಹಸುಗಳನ್ನು ಸಾಕಲು ದಿನವಿಡಿ ಕೆಲಸ ಮಾಡಬೇಕಾದ ಸ್ಥಿತಿ ಇದೆ. ಹಾಗಾಗಿ ವಿದ್ಯಾವಂತ ಯುವಕರು ಕೃಷಿ ಮಾಡುವ ಮೂಲಕ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ವಿದ್ಯಾವಂತ ಯುವಕ ಯುವತಿಯರು ಕೃಷಿ ಮಾಡಿದರೆ ಭವಿಷ್ಯದಲ್ಲಿ ಕೃಷಿ ಕ್ಷೇತ್ರ ಸುಧಾರಣೆಯಾಗಲಿದೆ ಎಂದು ಪ್ರಗತಿಪರ ಕೃಷಿಕ ಹಾಗೂ ೨೦೨೫ನೇ ಸಾಲಿನ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ.ಎಂ.ಸಿ. ರಂಗಸ್ವಾಮಿ ಹೇಳಿದರು.

ಅರಕಲಗೂಡು ತಾಲೂಕಿನ ದೊಡ್ಡ ಮಗ್ಗೆ ಗ್ರಾಮದ ಮಗ್ಗೆ ಮನೆ ಆವರಣದಲ್ಲಿ ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಎಂ.ಕಾಂ. ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಕೃಷಿ ಮತ್ತು ಉದ್ಯಮಶೀಲತೆ ಕ್ಷೇತ್ರ ಭೇಟಿ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕೃಷಿ ಕ್ಷೇತ್ರ ಇಂದು ಯಾರಿಗೂ ಬೇಡವಾದ ಕ್ಷೇತ್ರವಾಗಿದ್ದು, ಅದರಲ್ಲೂ ಯುವ ಸಮೂಹ ಕೃಷಿಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ವಿದ್ಯಾವಂತರಾದವರು ತಮ್ಮ ಪೋಷಕರು ಸಂಪಾದಿಸಿರುವ ಕಡಿಮೆ ಅಥವಾ ಮಧ್ಯಮ ವರ್ಗದ ಜಮೀನಿನಲ್ಲೇ ಇಂದು ಕೃಷಿ ಮಾಡಿದರೆ ಲಾಭ ಮಾಡಬಹುದಾಗಿದೆ ಎಂದರು.

ಯುವಕರು ನಮ್ಮಲ್ಲಿರುವ ಹೊಸ ಹೊಸ ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳುವ ಮೂಲಕ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಮಾಡಬೇಕು. ಇನ್ನು ಬಹುತೇಕ ರೈತರು ಈ ಹಿಂದಿನ ಸಾಂಪ್ರದಾಯಕ ಕೃಷಿಯನ್ನು ಮಾಡಿಕೊಂಡು ಬರುತ್ತಿರುವುದರಿಂದ ಕೃಷಿಯಲ್ಲಿ ಆರ್ಥಿಕವಾಗಿ ಗಟ್ಟಿಯಾಗಲು ಸಾಧ್ಯವಾಗುತ್ತಿಲ್ಲ. ತಂತ್ರಜ್ಞಾನ ಬಳಸಿ ನಾವು ಮಾಡಿರುವ ಹೈನುಗಾರಿಕೆಯಲ್ಲಿ ಸಾವಿರ ಹಸುಗಳನ್ನು ನೋಡಿಕೊಳ್ಳಲು ಕೇವಲ ೧೫ ಮಂದಿಯಷ್ಟೆ ಇದ್ದರೆ ಸಾಕು. ಹಾಗೆಯೇ ದಿನದಲ್ಲಿ ಎರಡು ಬಾರಿ ಕೆಲಸ ಮಾಡಿದರೆ ಸಾಕಾಗುತ್ತದೆ. ಆದರೇ ಹಳ್ಳಿಗಳಲ್ಲಿ ಇಂದಿಗೂ ಹಸುಗಳನ್ನು ಸಾಕಲು ದಿನವಿಡಿ ಕೆಲಸ ಮಾಡಬೇಕಾದ ಸ್ಥಿತಿ ಇದೆ. ಹಾಗಾಗಿ ವಿದ್ಯಾವಂತ ಯುವಕರು ಕೃಷಿ ಮಾಡುವ ಮೂಲಕ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದರು.

ಮಲೆನಾಡು ಭಾಗದಲ್ಲಿ ಬೆಳೆಯಬಹುದಾದ ಏಲಕ್ಕಿಯನ್ನು ಅರೆ ಮಲೆನಾಡು ಪ್ರದೇಶಗಳಲ್ಲಿ ಬೆಳೆಯುವ ಮೂಲಕ ಕೃಷಿಯಲ್ಲಿ ಕಾಯಕವನ್ನು ಸರಿಯಾಗಿ ಮಾಡಿದರೆ ಏನೆಲ್ಲಾ ಮಾಡಬಹುದನ್ನು ನಾನು ನಿರೂಪಿಸಿದ್ದೇನೆ. ಕೃಷಿ ಮಾಡುವವರಿಗೆ ಮೊದಲು ತಾವು ಮಾಡುವ ಕೃಷಿ ಬೆಳೆಯ ಬಗ್ಗೆ ಜ್ಞಾನವಿರಬೇಕು. ಹಾಗೆಯೇ ಅದಕ್ಕೆ ತಕ್ಕನಾಗಿ ಭೂಮಿಯನ್ನು ಮಾರ್ಪಾಡು ಮಾಡಿಕೊಂಡಿರಬೇಕು. ಯಾವುದೇ ಕೆಲಸ ಮಾಡಿದರು ಅದರಲ್ಲಿ ಯಶಸ್ಸು ಕಾಣಬೇಕಾದರೆ ಅದರಲ್ಲಿ ಒಳಗುಟ್ಟನ್ನು ಅರಿತರೆ ಮಾತ್ರ ಸಾಧನೆ ಮಾಡಲು ಸಾಧ್ಯ. ಹಾಗೆಯೇ ಕೃಷಿಯಲ್ಲಿನ ಗುಟ್ಟು ಅರಿತವರಿಗೆ ಮಾತ್ರ ಭೂಮಿ ತಾಯಿ ಕೈ ಹಿಡಿಯುತ್ತಾಳೆ. ನಮ್ಮ ಕುಟುಂಬ ಈಗಾಗಲೇ ಯುವ ರೈತರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಅನೇಕ ಹೈನುಗಾರಿಕೆ ತರಬೇತಿ ಕಾರ್ಯಾಗಾರ ನೀಡಲಾಗುತ್ತಿದೆ. ಗುಣಮಟ್ಟದ ಹಾಲು ಉತ್ಪಾದನೆ ಮಾಡುವವರಿಗೆ ಪ್ರೋತ್ಸಾಹಧನ, ವೈದ್ಯರ ಸಹಕಾರ ಹೀಗೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ. ದೇಶಕ್ಕೆ ಅನ್ನ ನೀಡುವ ರೈತನಿಂದ ಕಲಬೇರೆಕೆ ಆಹಾರ ಪದಾರ್ಥಗಳು ಉತ್ಪಾದನೆ ಆಗಬಾರದು ಎಂಬ ದೃಢಸಂಕಲ್ಪದೊಂದಿಗೆ ವಿನೂತನ ಯೋಜನೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಸ್.ಆರ್. ಮೂರ್ತಿ ಮಾತನಾಡಿ, ನಮ್ಮೊಳಗೆ ಇದ್ದು, ಇಷ್ಟೇಲ್ಲ ಸಾಧನೆ ಮಾಡಿದರು ಏನನ್ನು ಹೇಳಿಕೊಳ್ಳದೆ ಬಹಳ ಸರಳವಾಗಿ ಬದುಕುತ್ತಿರುವ ಡಾ.ಎಂ.ಸಿ. ರಂಗಸ್ವಾಮಿ ಅವರು ಯುವ ಸಮುದಾಯಕ್ಕೆ ದೊಡ್ಡ ಆದರ್ಶ ವ್ಯಕ್ತಿಯಾಗಿ ಕಾಣುತ್ತಾರೆ. ಕೆಲಸದಲ್ಲಿ ಶ್ರದ್ಧೆ, ಪರಿಶ್ರಮ, ಪ್ರಾಮಾಣಿಕತೆಯಿಂದ ದುಡಿದು ಸರಳವಾಗಿ ಬದುಕಿದರೆ ಎಂತಹ ಪ್ರಶಸ್ತಿಗಳು ಆರಿಸಿ ಬರುತ್ತವೆ ಎಂಬುದಕ್ಕೆ ರಂಗಸ್ವಾಮಿ ನಿದರ್ಶನವಾಗಿದ್ದಾರೆ ಎಂದರು.

ಕಾರ್ಯಕ್ರಮಕ್ಕೂ ಮೊದಲು ಎಂ.ಕಾಂ. ವಿದ್ಯಾರ್ಥಿಗಳು ಹೈನುಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ಹಸು ಸಾಕಾಣಿಕೆ ಬಗ್ಗೆ ಡಾ.ಎಂ.ಸಿ. ರಂಗಸ್ವಾಮಿ ಅವರ ಪುತ್ರ ಶಿರಿನ್ ರಂಗಸ್ವಾಮಿ ಅವರೊಂದಿಗೆ ಮಾಹಿತಿ ಪಡೆದುಕೊಂಡರು. ಇನ್ನು ಹಸು ಸಾಕಾಣಿಕ ನಿರ್ವಹಣೆಯ ಬಗ್ಗೆ ವೈದ್ಯ ಡಾ. ಸಾದತ್ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಸ್ನಾತಕೋತ್ತರ ಎಂ.ಕಾಂ. ವಿಭಾಗದ ಮುಖ್ಯಸ್ಥ ಡಾ. ಎಚ್.ಎನ್. ಹರೀಶ್, ಹಾಸನದ ಗಂಧದಕೋಠಿ ಮಹಿಳಾ ಕಾಲೇಜಿನ ಪತ್ರಿಕೋದ್ಯಮ ಉಪನ್ಯಾಸಕ ದಿಲೀಪ್ ಕುಮಾರ್ ಎಚ್.ಕೆ., ಬೆಸ್ಟ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ.ಸಿ. ನವೀನ್, ಹೊಳೆನರಸೀಪುರ ಪದವಿ ಕಾಲೇಜಿನ ಅಧ್ಯಾಪಕ ರಾಘವೇಂದ್ರ ವಿಶ್ವಾಸ್, ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ವೀರಭದ್ರ, ಉಮೇಶ್, ಕಚೇರಿ ಅಧೀಕ್ಷಕ ಜನಾರ್ದನ್ ಹಾಗೂ ಇತರರು ಹಾಜರಿದ್ದರು.