ಜಿಲ್ಲೆಯ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದೊಂದಿಗೆ ಸಾಕಷ್ಟು ಹೋರಾಟ ಮಾಡಿ ಮಂಡ್ಯಕ್ಕೆ ಕೃಷಿ ವಿಶ್ವ ವಿದ್ಯಾನಿಲಯ ತಂದಿದ್ದೇನೆ. ವೈದ್ಯಕೀಯ ಕಾಲೇಜು, ಡಿಪೋ ತಂದಿದ್ದೇನೆ. ಇದರಿಂದ ಜಿಲ್ಲೆಯ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಆದರೂ ಕೆಲವರು ಅನಗತ್ಯ ಟೀಕೆ ಮಾಡುತ್ತಾರೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ನನ್ನ ಬಗ್ಗೆ ಅನಗತ್ಯ ಟೀಕೆ ಮಾಡುವ ಮಾಜಿ ಶಾಸಕ ಸುರೇಶ್ ಗೌಡರಿಂದ ಜಿಲ್ಲೆಗೆ ಏನು ಕೊಡುಗೆ ಎಂಬುದನ್ನು ಮೊದಲು ತಿಳಿಸಲಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಸ್ವಾಮಿ ಸವಾಲು ಹಾಕಿದರು.ಇಲ್ಲಿನ ಓಂಶಾಂತಿ ರಸ್ತೆಯಲ್ಲಿದ್ದ ಟೀ ಅಂಗಡಿಯಲ್ಲಿ ಶನಿವಾರ ರೈತರೊಂದಿಗೆ ಟೀ ಕುಡಿಯುತ್ತಾ ಮಾತನಾಡಿದ ಸಚಿವರು, ಸುರೇಶ್ ಗೌಡ ಕೇವಲ ಟೀಕೆ ಮಾಡಬೇಕೆಂದೆ ಮಾತನಾಡುತ್ತಾರೆ. ದುರುದ್ದೇಶದಿಂದ ಟೀಕಿಸುವುದು ಸರಿಯಲ್ಲ ಎಂದರು.

ಜಿಲ್ಲೆಯ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದೊಂದಿಗೆ ಸಾಕಷ್ಟು ಹೋರಾಟ ಮಾಡಿ ಮಂಡ್ಯಕ್ಕೆ ಕೃಷಿ ವಿಶ್ವ ವಿದ್ಯಾನಿಲಯ ತಂದಿದ್ದೇನೆ. ವೈದ್ಯಕೀಯ ಕಾಲೇಜು, ಡಿಪೋ ತಂದಿದ್ದೇನೆ. ಇದರಿಂದ ಜಿಲ್ಲೆಯ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಆದರೂ ಕೆಲವರು ಅನಗತ್ಯ ಟೀಕೆ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ರೈತ ಸಂಘದ ಮುಖಂಡರು ಸಚಿವರಿಗೆ ಉತ್ತರ ಕರ್ನಾಟಕ ರೈತರ ಕಬ್ಬಿಗೆ ಒಂದು ದರ, ನಮಗೆ ಒಂದು ದರ ನೀಡುವುದು ಸರಿಯಲ್ಲ. ನಮಗೂ ಟನ್ ಕಬ್ಬಿಗೆ 500 ರು. ಪ್ರೋತ್ಸಾಹ ಧನ ಕೊಡಿ ಎಂದು ಹೇಳಿದಾಗ ಇದಕ್ಕೆ ಉತ್ತರಿಸಿದ ಸಚಿವರು, ಉತ್ತರ ಕರ್ನಾಟಕದ ಕಬ್ಬು ಹೆಚ್ಚು ಇಳುವರಿ ಬರುತ್ತದೆ. ಹೀಗಾಗಿ ಅಧಿಕ ಬೆಲೆ ಸಿಗುತ್ತಿದೆ. ಇಲ್ಲಿಯೂ ಇಳುವರಿ ಹೆಚ್ಚು ಬರುವ ಕಬ್ಬಿನ ತಳಿ ಪರಿಚಯ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 5 ಗ್ಯಾರಂಟಿ ಜಾರಿಗೆ ತಂದು ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಿದ್ದೇವೆ. ಗ್ಯಾರಂಟಿಗಳ ಲಾಭ ಪಡೆದ ರಾಜ್ಯದ ಹಲವು ಮಹಿಳೆಯರು ಮಾಧ್ಯಮಗಳ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ನಮ್ಮ ನಡೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ವಿಪಕ್ಷದವರು ಕೇವಲ ಟೀಕೆ ಮಾಡುವ ಸಲುವಾಗಿ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

ಸಚಿವನಾಗಿ ಮಂಡ್ಯ ಜಿಲ್ಲೆ ಅಭಿವೃದ್ಧಿಗೆ ನಾನು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಈಗಲೂ ಮಾಡುತ್ತಿದ್ದೇನೆ. ವಿಪಕ್ಷಗಳ ಯಾವುದೇ ಟೀಕೆಗಳಿಗೆ ನಾನು ಕಿವಿಗೊಡದೆ ಜಿಲ್ಲೆಯ ಜನರ ಏಳಿಗೆಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.

ಈ ವೇಳೆ ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಣ್ಣೂರು ಮಹೇಂದ್ರ, ವಿಶ್ವೇಶ್ವರಯ್ಯ ಸೊಸೈಟಿ ಅಧ್ಯಕ್ಷ ಗಿರೀಶ್ ಕ್ಯಾತಘಟ್ಟ, ಮಾಜಿ ಅಧ್ಯಕ್ಷ ಅಣ್ಣೂರು ಸಿದ್ದಪ್ಪ, ಗ್ರಾಪಂ ಸದಸ್ಯರಾದ ಕೆ.ಟಿ.ಶ್ರೀನಿವಾಸ್, ಕೆ.ವಿ.ಶ್ರೀನಿವಾಸ್ , ಮುಖಂಡರಾದ ಕುರಿಕೆಂಪನದೊಡ್ಡಿ ರಾಮಲಿಂಗೇಗೌಡ, ಅಣ್ಣೂರು ಸಿದ್ದೇಗೌಡ, ರಾಮಣ್ಣ, ಜಯಸ್ವಾಮಿ, ಕಾರ್ಕಹಳ್ಳಿ ಸಿದ್ದೇಗೌಡ, ಮಣಿಗೆರೆ ರಾಮಣ್ಣ ಸೇರಿದಂತೆ ಹಲವರು ಇದ್ದರು.