ರಾಮನಗರ: ಈ ಪವಿತ್ರವಾದ ಹಸಿರು ಶಾಲು ಬಟ್ಟೆ ತುಂಡಲ್ಲ, ಇದು ರೈತರ ಸಂಕೇತ. ಹುತಾತ್ಮ ರೈತರ ರಕ್ತದಲ್ಲಿ ಹೆಣೆದಿರುವ ಶಾಲು. ರೈತರ ಹೋರಾಟದ ವೇದಿಕೆಯಲ್ಲಿ ಭ್ರಷ್ಟ ರಾಜಕಾರಣಿಗಳಿಗೆ ಅವಕಾಶ ನೀಡಿ, ಹೂವಿನ ಹಾರದಂತೆ ಹಸಿರು ಶಾಲು ಹಾಕಿ ಹುತಾತ್ಮ ರೈತರನ್ನು ಅವಮಾನಿಸಬೇಡಿ ಎಂದು ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಹೋರಾಟ ನಿರತ ರೈತರನ್ನು ಎಚ್ಚರಿಸಿದರು.

ಬಿಡದಿ ಹೋಬಳಿ ಬೈರಮಂಗಲ ವೃತ್ತದಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಕಳೆದ 488 ದಿನಗಳಿಂದ ರೈತರು ನಡೆಸುತ್ತಿರುವ ಚಳವಳಿಯಲ್ಲಿ ಪಾಲ್ಗೊಂಡು ಮಾತನಾಡಿದ ಚುಕ್ಕಿ ನಂಜುಂಡಸ್ವಾಮಿ, ನಮ್ಮ ತಂದೆಯವರು ಇದ್ದಿದ್ದರೆ ರೈತರ ಹೋರಾಟದ ವೇದಿಕೆಯಲ್ಲಿ ರಾಜಕಾರಣಿಗಳಿಗೆ ಅವಕಾಶ ನೀಡುತ್ತಿರಲಿಲ್ಲ. ಈ ವೇದಿಕೆಯಲ್ಲಿ ರಾಜಕಾರಣಿಗಳಿಗೆ ಅವಕಾಶ ನೀಡುವುದಾದರೆ ನಮ್ಮ ತಂದೆಯವರ ಫೋಟೋ ತೆಗೆಯಿರಿ, ಫೋಟೋ ಇರಬೇಕೆಂದರೆ ರಾಜಕಾರಣಿಗಳನ್ನು ವೇದಿಕೆಗೆ ಬಂದು ರೈತರ ಬದುಕಿನ ಜೊತೆ ಆಟವಾಡಲು ಅವಕಾಶ ನೀಡಬೇಡಿ ಎಂದರು.

ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಮೂರು ರಾಜಕೀಯ ಪಕ್ಷಗಳು ಯಾವ ರೀತಿ ನಡೆದುಕೊಂಡಿವೆ ಎಂಬ ಸತ್ಯ ಗೊತ್ತಿದೆ. ಆ ರಾಜಕೀಯ ಪಕ್ಷಗಳಿಗೆ ಅವರದೇ ಆದ ಶಾಲುಗಳಿವೆ. ಆದರೂ ಅವರಿಗೆಲ್ಲ ಪವಿತ್ರವಾದ ಹಸಿರು ಶಾಲೇ ಏಕೆ ಬೇಕು. ನಿಮಗೆಲ್ಲ ಕೈ ಮುಗಿದು ಕೇಳಿಕೊಳ್ಳುತ್ತೇನೆ ಹಸಿರು ಶಾಲನ್ನು ಭ್ರಷ್ಟ ರಾಜಕಾರಣಿಗಳಿಗೆ ಹಾಕಿ ಮೈಲಿಗೆ ಮಾಡಬೇಡಿ ಎಂದು ಮನವಿ ಮಾಡಿದರು.

ಹಸಿರು ಶಾಲು ನಿಮ್ಮ ಹೋರಾಟಕ್ಕೆ ಶಕ್ತಿ ತಂದಿದೆ. ಈ ಹೋರಾಟದ ಆರಂಭಕ್ಕೂ ಮುನ್ನ ನಿಮ್ಮ ಹೆಗಲ ಮೇಲೆ ಹಸಿರು ಶಾಲು ಇರಲಿಲ್ಲ. ಸರ್ಕಾರ ಭೂಮಿಗೆ ಕೈ ಹಾಕಿದ ಮೇಲೆ ನಿಮಗೆಲ್ಲ ಹಸಿರು ಶಾಲಿನ ಶಕ್ತಿ ಏನೆಂದು ಗೊತ್ತಾಗಿದೆ. ಯಾರಿಗೂ ಇಲ್ಲದಿರುವ ಶಕ್ತಿ ಹಸಿರು ಶಾಲಿಗಿದೆ. ನಿಮ್ಮ ಭೂಮಿಯನ್ನು ಯಾವ ಪಹಣಿ, ಪಟ್ಟಾ ಕಾಯುತ್ತಿಲ್ಲ. ನಿಮ್ಮ ಭೂಮಿಯನ್ನು ಹಸಿರು ಶಾಲು ಕಾಯುತ್ತಿದೆ ಎಂದು ಹೇಳಿದರು.

ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದಲ್ಲಿ ನಡೆದ ಹೋರಾಟದಲ್ಲಿ ಸ್ಪಷ್ಟತೆ ಇತ್ತು. ಈ ಚಳವಳಿಯಲ್ಲಿಯೂ ಆ ಸ್ಪಷ್ಟತೆ ಬರಬೇಕು. ರೈತರು ಪ್ರಾಮಾಣಿಕವಾಗಿ ಹೋರಾಡಿದರೆ ಮಾತ್ರ ನ್ಯಾಯ ಸಿಗುತ್ತದೆ. ನಿಮ್ಮಲ್ಲಿರುವ ಶಕ್ತಿಯನ್ನು ನೀವು ಅರಿತುಕೊಳ್ಳಬೇಕು. ನಿಮ್ಮಲ್ಲಿನ ಒಗ್ಗಟ್ಟು, ಸಂಘಟನೆ, ಹೋರಾಟವೇ ಇಷ್ಟೊಂದು ಜನರ ಬೆಂಬಲ ಸಿಗಲು ಕಾರಣ ಎಂದು ತಿಳಿಸಿದರು.


ರಾಜಕಾರಣಿಗಳ ಮುಂದೆ ಅಂಗಲಾಚುವುದನ್ನು ಬಿಟ್ಟು ಧೈರ್ಯವಾಗಿ ಮಾತನಾಡಬೇಕು. ನಾಯಕತ್ವ ಇಲ್ಲವೆಂಬ ಭಾವನೆ ಬಿಟ್ಟುಬಿಡಿ. ಇಲ್ಲಿ ಪ್ರತಿಯೊಬ್ಬರು ನಾಯಕರೇ. ತಾಯಂದಿರ ಶಕ್ತಿ ಇರುವ ಚಳವಳಿ ಸೋಲಲು ಸಾಧ್ಯವಿಲ್ಲ. ಯೋಜನೆ ಪರವಾಗಿರುವ ರೈತರು ಕುಚೇಷ್ಟೆ ಮಾಡುತ್ತಿದ್ದು, ಅವರಿಗೆ ಕಿಮ್ಮತ್ತಿಲ್ಲ. ನಿಮ್ಮಲ್ಲಿರುವ ಮೀರ್ ಸಾಧಕರನ್ನು ಗುರುತಿಸಿ ಚಿವುಟ ಹಾಕಿ. ಸಾತ್ವಿಕವಾಗಿ ನಡೆಯುತ್ತಿರುವ ಚಳವಳಿ ಗೆದ್ದೇ ಗೆಲ್ಲುತ್ತದೆ ಎಂದು ರೈತರಲ್ಲಿ ಧೈರ್ಯ ತುಂಬಿದರು.

ಒಂದೆಡೆ ರೈತರಿಗೆ ಸಾಲದ ಹೊರೆಯನ್ನು ಹೆಚ್ಚಿಸಿ, ಇನ್ನೊಂದೆಡೆ ರೈತರ ಬೆಳೆಗಳಿಗೆ ಮಾರುಕಟ್ಟೆಯೇ ಇಲ್ಲದಂತೆ ಮಾಡುತ್ತಿದ್ದಾರೆ. ರೈತರು ವ್ಯವಸಾಯವೇ ಸಾಕು ಎನ್ನುವಂತಹ ವಾತಾವರಣ ಸೃಷ್ಟಿಸುತ್ತಿದ್ದಾರೆ. ಮಗದೊಂದೆಡೆ ಭೂಸ್ವಾಧೀನಕ್ಕೆ ಮುಂದಾಗಿ ರೈತನ ಬುಡಕ್ಕೆ ಕೈಹಾಕುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಈ ಸರ್ಕಾರಕ್ಕೆ ಸಾಕಷ್ಟು ಹಳ್ಳಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಇನ್ನು ಎಐ ಸಿಟಿ ಮಾಡಿ ಅಭಿವೃದ್ಧಿ ಮಾಡಲು ಸಾಧ್ಯವೇ. ಒಬ್ಬ ರೈತನಿಗೆ ಹತ್ತು ಜನರಿಗೆ ಉದ್ಯೋಗ ಕೊಡುವ ಶಕ್ತಿಯಿದೆ. ಅಂತಹ ರೈತ ಕುಲದ ಬುಡಕ್ಕೆ ಕೈ ಹಾಕಿ ನಿರ್ನಾಮ ಮಾಡಲು ಹೊರಟಿದೆ. ಚಳವಳಿ ಮೂಲಕವೇ ಸರ್ಕಾರಕ್ಕೆ ಉತ್ತರ ಕೊಡಬೇಕಿದೆ ಎಂದು ಚುಕ್ಕಿ ನಂಜುಂಡಸ್ವಾಮಿ ತಿಳಿಸಿದರು.ಬಾಕ್ಸ್‌...........

ಡಿಕೆಶಿಯ ಭೂ ದಾಹದ ಮದ ಅಡಗಿಸ್ತೇವೆ:

ರೈತ ಮುಖಂಡ ಹನೂರು ಪ್ರಕಾಶ್ ಮಾತನಾಡಿ, ರೈತರು ಭೂಮಿ ತಾಯಿ ಮಕ್ಕಳು. ಗುಡುಗು, ಸಿಡಿಲು, ಗಾಳಿ, ಮಳೆಗೆ ಹೆದರದ ರೈತರು ಜುಜುಬಿ ಸರ್ಕಾರಗಳಿಗೆ ಹೆದರುತ್ತಾರಾ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹೆಚ್ಚಾಗಿರುವ ಭೂ ದಾಹದ ಮದವನ್ನು ಅಡಗಿಸುತ್ತೇವೆ. ನಿಮ್ಮ ಮನೆ ಮತ್ತು ಜಮೀನುಗಳಿಗೆ ನುಗ್ಗುತ್ತೇವೆ ಹುಷಾರ್ ಎಂದು ಎಚ್ಚರಿಕೆ ನೀಡಿದರು.

ವಿದೇಶಿಗಳಿಗೆ ಭೂಮಿ ಕೊಡಲು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಮಚಗಳಂತೆ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರು ಬೆಳೆಯಲ್ಲಿನ ಕಳೆ ಇದ್ದಂತೆ. ರೈತರಿಗೆ ಅದನ್ನು ಕಿತ್ತಾಕುವುದು ಗೊತ್ತು, ಗೊಬ್ಬರ ಮಾಡುವುದು ಗೊತ್ತು. ರೈತರನ್ನು ಕೆಣಕಿದ ಯಾವ ಸರ್ಕಾರಗಳು ಉಳಿದಿರುವ ಉದಾಹರಣೆಯೇ ಇಲ್ಲ. ನಿಮಗೆಲ್ಲ ಬಡ್ಡಿ ಸಮೇತ ಉತ್ತರ ಕೊಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವು ಭೂಮಿ ತಾಯಿ ಮಕ್ಕಳು, ನಮ್ಮ ತಾಯಿಯನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದೇವೆ. ಅವರು ಭೂ ತಾಯಿಯನ್ನು ಮಾರಾಟ ಮಾಡಲು ಹೋರಾಟ ಮಾಡುತ್ತಿದ್ದಾರೆ. ರಾಜಕಾರಣಿಗಳು ನಮ್ಮ ಭಿಕ್ಷೆಯಲ್ಲಿ ಬದುಕುತ್ತಿದ್ದಾರೆ. ಅವರೆಲ್ಲರು ನಮ್ಮ ಆಳುಗಳು. ಇಲ್ಲಿ ರೈತರೇ ಸಾರ್ವಭೌಮರು. ಅವರಿಗೆ ಹಸಿರು ಶಾಲು ಹಾಕಿ ರೈತ ಕುಲವನ್ನು ಅವಮಾನಿಸಬೇಡಿ ಎಂದು ಪ್ರಕಾಶ್ ಹೇಳಿದರು.

ಈ ವೇಳೆ ರೈತ ಮುಖಂಡರಾದ ಮಂಜು ಕಿರಣ್ , ಅನುಸೂಯಮ್ಮ, ಪ್ರಕಾಶ್ ರಾಮನಾಯಕನಹಳ್ಳಿ, ಮೂರ್ತಿ, ಲಿಂಗರಾಜು, ಪ್ರಕಾಶ್ ನಾಯ್ಕ, ಯಶವಂತ್ ಗೋರ್ಪಡೆ, ಸುನೀಲ್, ಸುರೇಶ್ , ಮಂಜುನಾಥ್ , ರಾಜಣ್ಣ, ಎಂ.ಆರ್.ಲಕ್ಷ್ಮಿ ನಾರಾಯಣ್, ಮುನಿ ವೆಂಕಟಮ್ಮ ಮತ್ತಿತರರು ಉಪಸ್ಥಿತರಿದ್ದರು.ಕೋಟ್ ...................

ಇಂದು ರೈತ ಹುತಾತ್ಮ ದಿನವನ್ನು ಭೂಸ್ವಾಧೀನ ವಿರೋಧಿ ದಿನವನ್ನಾಗಿ ಆಚರಿಸಲು ನಿರ್ಧರಿಸಿದ್ದೇವೆ. ಬಿಡದಿ, ಆನೇಕಲ್, ಚಿಕ್ಕಬಳ್ಳಾಪುರದ ಜಂಗಮಕೋಟೆ, ದೊಡ್ಡಬೆಲೆವಂಗಲಗಳಲ್ಲಿ ನಡೆಯುತ್ತಿರುವ ಭೂಸ್ವಾಧೀನವನ್ನು ವಿರೋಧಿಸುತ್ತೇವೆ. ಅಂದು ಎಲ್ಲ ಜಿಲ್ಲೆಗಳಲ್ಲಿ ರೈತರು ರಸ್ತೆ ತಡೆ, ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಮೂಲಕ ರೈತ ಚಳವಳಿಗೆ ಶಕ್ತಿ ತುಂಬುತ್ತಾರೆ.

-ಚುಕ್ಕಿ ನಂಜುಂಡಸ್ವಾಮಿ, ರೈತ ನಾಯಕಿ

ಕೋಟ್ .............

ರಾಜ್ಯಸರ್ಕಾರ ಬಿಡದಿ ಟೌನ್ ಶಿಪ್ ಯೋಜನೆಗಾಗಿ 9500 ಎಕರೆ ಭೂಮಿ ಕಸಿದುಕೊಳ್ಳುತ್ತಿರುವುದಕ್ಕೆ ಎಲ್ಲ ರೈತರ ವಿರೋಧ ಇದೆ. ಆದರೆ, ದೂರದ ಊರುಗಳಿಂದ ರೈತರು ಬಂದು ಹೋರಾಟ ಮಾಡಲು ಸಾಧ್ಯವಿಲ್ಲ.ಆದ್ದರಿಂದ ರೈತರು ಎಲ್ಲಿ ಹಕ್ಕು ಚಲಾಯಿಸುತಾತವೊ ಅಲ್ಲಿ ಹೋರಾಟ ಮಾಡಬೇಕು. ಜಮೀನಿನಲ್ಲಿ ಕಪ್ಪು ಬಾವುಟ ನೆಟ್ಟು ಕೃಷಿ ಮಾಡಿ, ಮನೆಗಳ ಮೇಲೆ ಹಸಿರು ಬಾವುಟ ಹಾರಿಸುವ ಮೂಲಕ ಪ್ರತಿರೋಧ ತೋರಿ.

- ಹನೂರು ಪ್ರಕಾಶ್ ,ರೈತ ನಾಯಕರು, ಚಾಮರಾಜನಗರ11ಕೆಆರ್ ಎಂಎನ್ 3.ಜೆಪಿಜಿ

ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿದರು.